ರಾಜ್ಯದ ಅಭಿವೃದ್ಧಿಗಾಗಿ ಒಂದು ಅವಕಾಶ ಕಲ್ಪಿಸಿಕೂಡಿ- ಯಾವ ತಪ್ಪಿಗಾಗಿ ನನಗೆ 10 ವರ್ಷದಿಂದ ಶಿಕ್ಷೆ

0
71

ಕನ್ನಡಮ್ಮ ಸುದ್ದಿ-ವಿಜಯಪುರ
ರಾಜ್ಯದ ಅಭಿವೃದ್ಧಿಗಾಗಿ ಒಂದು ಅವಕಾಶ ಕಲ್ಪಿಸಿಕೊಂಡಿ, ಕೈ ಮುಗಿದು ಕೇಳಿಕೊಳ್ಳುತ್ತೇನೆ ಯಾವ ತಪ್ಪಿಗಾಗಿ ನನಗೆ 10 ವರ್ಷದಿಂದ ಶಿಕ್ಷೆ ನೀಡುತ್ತಿದ್ದೀರಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಹೆಚ್ಚಿನ ಶಾಸಕರನ್ನು ವಿಧಾನಸಭೆಗೆ ಕಳುಹಿಸಿ ಮತ್ತೇ ನಿಮ್ಮ ಕುಮಾರಣ್ಣ ಮುಖ್ಯಮಂತ್ರಿಯಾಗಿ ನೋಡುವ ಸೌಭಾಗ್ಯ ಒದಗಿಸಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮನವಿ ಮಾಡಿದರು.
ತಾಲೂಕಿನ ಹಡಗಲಿ ಗ್ರಾಮದಲ್ಲಿ ನಾಗಠಾಣ ಮತಕ್ಷೇತ್ರದ ಜೆಡಿಎಸ್ ಮುಖಂಡ ದೇವಾನಂದ ಚವ್ಹಾಣ ಅವರ ನೇತೃತ್ವದಲ್ಲಿ ಏರ್ಪಡಿಸಲಾದ ಜೆಡಿಎಸ್ ಕಾರ್ಯಕರ್ತರ ಭೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳು ರಾಜ್ಯದ ಜನರನ್ನು ವ್ಯಾಮಾರಿಸಿ ಮೋಸ ಮಾಡುತ್ತಿವೆ. ಅಭಿವೃದ್ಧಿಯ ಹೆಸರಿನಲ್ಲಿ ಕೋಟಿ ಕೋಟಿ ಸಾಲ ಮಾಡಿ ಕೊಳ್ಳೆ ಹೊಡೆಯುತ್ತಿದ್ದಾರೆ. ನಾನು ನೀಡಿದ 20 ತಿಂಗಳ ಆಡಳಿತ ಈಗಲೂ ಜನ ನೆನೆಪಿಸುತ್ತಿದ್ದಾರೆ. ಇಂದಿನ ರಾಜಕಾರಣದಲ್ಲಿ ಜಾತೀಯತೆ, ಬೃಷ್ಟಾಚಾರ ತಾಂಡವಾಡುತ್ತಿದ್ದು, ಕೆಳ ವರ್ಗದ ಜನರ ಸಂಕಷ್ಟ ಯಾರು ಕೇಳದಂತಾಗಿದೆ. ರಾಷ್ಟ್ರೀಯ ಪಕ್ಷಗಳು ಜಿದ್ದಿಗೆ ಬಿದ್ದವರಂತೆ ಒಬ್ಬರನೊಬ್ಬರು ಟೀಕೆ ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ. ಕಿಂಚತ್ತೂ ರೈತರು ಬಡ ವರ್ಗದವರ ಕುರಿತು ಚಕಾರ ಎತ್ತುತ್ತಿಲ್ಲ. ರೈತರು ಮಾಡಿದ ಸಾಲ ಮನ್ನಾ ಮಾಡದ ಸರ್ಕಾರ ಇದ್ದರೆಷು?್ಟ ಹೋದರೆಷ್ಟು?ಎಂದರು. ರಾಜ್ಯದ ಅಭಿವೃದ್ಧಿಗೋಸ್ಕರ ಹಲವಾರು ಕನಸುಗಳನ್ನು ಹೊತ್ತು ನಿಮ್ಮ ಮುಂದೆ ಬಂದಿದ್ದೇನೆ, ಇದೇ 2018 ರ ಚುನಾವಣೆ ಪ್ರಚಾರ ಎಂದು ತಿಳಿದು ಈಗಲೇ ಸಿದ್ದಗೊಳ್ಳಬೇಕು. ಬಡವರಿಗೆ, ನಿರ್ಗತಿಕರಿಗೆ, ಮಹಿಳೆಯರಿಗೆ, ಯುವಕರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕು. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಸಂಪೂರ್ಣ ಸಾಲ ಮನ್ನಾ ಮಾಡುವ ಗುರಿ ಹೊಂದಿದ್ದೇನೆ. ಹೀಗಾಗಿ ನಾಗಠಾಣ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದೇವಾನಂದ ಚವ್ಹಾಣ ಕಳೆದ ಸಲ ಕೆಲವೇ ಮತಗಳ ಅಂತರದಿಂದ ಶಾಸಕರಾಗಲಿಲ್ಲ. ಅದು ನನಗೂ ನೋವಿದೆ. ಅದಕ್ಕಾಗಿ ಈ ಸಲದ ಚುನಾವಣೆಯಲ್ಲಿ ಒಕ್ಕಟ್ಟಾಗಿ ದೇವಾನಂದ ಚವ್ಹಾಣ ಅವರನ್ನು ವಿಧಾನಸಭೆಗೆ ಕಳಿಸುವ ಕಾರ್ಯ ನಿಮ್ಮದಾಗಿದೆ ಎಂದರು.
ಜೆಡಿಎಸ್ ಮುಖಂಡ, ಕಾರ್ಯಕ್ರಮ ಸಂಘಟಕ ದೇವಾನಂದ ಚವ್ಹಾಣ ಮಾತನಾಡಿ, ರಾಜ್ಯಕ್ಕೆ ಕುಮಾರಣ್ಣನವರ ಆಡಳಿತ ಅವಶ್ಯಕವಾಗಿದೆ.ಎಲ್ಲರು ಕೈ ಜೋಡಿಸಬೇಕು. ಈ ಸಲದ ಚುನಾವಣೆಯಲ್ಲಿ ಜಿಲ್ಲೆಯ 8 ವಿಧಾನಸಾಭಾ ಕ್ಷೇತ್ರಗಳನ್ನು ಗೆಲ್ಲಿಸುವುದರ ಮೂಲಕ ಶಕ್ತಿ ತುಂಬಬೇಕು ಎಂದು ಕೋರಿದರು. ಸಮಾವೇಶದಲ್ಲಿ ನಾಗಠಾಣ ಮತಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಕಾರ್ಯಕರ್ತರು ಬೃಹತ್ ಆಕಾರದ ಹೂಮಾಲೆ ಹಾಕಿ ಸನ್ಮಾನ ಮಾಡಿದರು. ಕುಮಾರಸ್ವಾಮಿ ಅವರ ಆಡಳಿತ, ಅಭಿವೃದ್ದಿ ಕುರಿತು ಸಿದ್ದ ಪಡಿಸಿದ ಸಿ ಡಿ ಬಿಡುಗಡೆ ನಡೆಯಿತು.
ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ, ಜೆಡಿಎಸ್ ಅಲ್ಪಸಂಖ್ಯಾತರ ರಾಜ್ಯ ಘಟಕದ ಅಧ್ಯಕ್ಷ ಸಯ್ಯದ ಮೊಯಿದ್ ಅಲ್ತಾಫ,ಜಿಲ್ಲಾಧ್ಯಕ್ಷ ಎಂ ಸಿ ಮನಗೂಳಿ,ಎಂ ಆರ್ ಪಾಟೀಲ, ಎಲ್ ಎಲ್ ಉಸ್ತಾದ, ಕಾಯಾಧ್ಯಕ್ಷ ದಿಲಾವರ ಖಾಜಿ, ರೇಷ್ಮಾ ಪಡೇಕನೂರ, ನಾನಾಗೌಡ ಪಾಟೀಲ, ಎಸ್ ವ್ಹಿ ಪಾಟೀಲ, ಅಪ್ಪುಗೌಡ ಪಾಟೀಲ ಸುನೀಲ ರಾಠೋಡ,ಅನ್ವರ ಮಕಾನದಾರ, ಸೇರಿದಂತೆ ಜೆಡಿಎಸ್ ಮುಖಂಡರು ವೇದಿಕೆ ಮೇಲಿದ್ದರು. ನಾಗಠಾಣ ಮತಕ್ಷೇತ್ರದ ವಿವಿಧ ಗ್ರಾಮಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜೆಡಿಎಸ್ ಪದಾಧಿಕಾರಿಗಳು, ಕಾರ್ಯಕರ್ತರು, ರೈತರು, ಸಾರ್ವಜನಿಕರು ಪಾಲ್ಗೊಂಡಿದ್ದರು.

loading...