ಇಂದು ಮತ್ತು ನಾಳೆ ಮಳೆ ಮುಂದುವರೆಯುವ ಸಾಧ್ಯತೆ

0
73

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟ ನಿನ್ನೆಯೂ ಕೂಡ ಮುಂದುವರೆದಿದ್ದು, ಜನ ಜೀವನ ತತ್ತರಿಸುವಂತಾಗಿದೆ. ಶನಿವಾರ ಸಂಜೆ ಹಾಗೂ ರಾತ್ರಿ ಗುಡುಗು, ಮಿಂಚು, ಸಿಡಿಲಿನ ಆರ್ಭಟದಲ್ಲಿ ಧಾರಾಕಾರ ಮಳೆ ಸುರಿದಿದೆ. ಇದರಿಂದ ರಸ್ತೆಗಳಲ್ಲಿ ಕಾಲುವೆಗಳಂತೆ ನೀರು ಹರಿದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕೆಲವೆಡೆ ಮರಗಳು ಧರೆಗುರುಳಿವೆ. ಹವಾ ಮುನ್ಸೂಚನೆ ಪ್ರಕಾರ ಇಂದು ಮತ್ತು ನಾಳೆ ಯಥಾ ರೀತಿ ಮಳೆ ಮುಂದುವರೆಯುವ ಸಾಧ್ಯತೆಗಳು ಕಂಡು ಬಂದಿವೆ. ನೈರುತ್ಯ ಮುಂಗಾರು ಮಳೆ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪೂರ್ವ ಮುಂಗಾರು ಮಳೆ ಆರ್ಭಟ ಜೋರಾಗಿದೆ.
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸ್‍ರೆಡ್ಡಿ ಪ್ರಕಾರ ಮುಂಗಾರು ಪೂರ್ವ ಮಳೆ ಇದೇ ರೀತಿ ಮುಂದುವರೆಯಲಿದೆ. ನೈರುತ್ಯ ಮುಂಗಾರು ಮಳೆ ಮೇ ಅಂತ್ಯ ಇಲ್ಲವೇ ಜೂನ್ 1ರಂದು ರಾಜ್ಯ ಪ್ರವೇಶ ಮಾಡುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ ಎಂದಿದ್ದಾರೆ. ಆದರೆ, ಭಾರತೀಯ ಹವಮಾನ ಇಲಾಖೆಯು ಜೂ.3ರವರೆಗೆ ಮುಂಗಾರು ರಾಜ್ಯ ಪ್ರವೇಶ ಮಾಡಲಿದೆ ಎಂದು ಹೇಳಿದೆ. ರಾಜ್ಯದ ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಆದರೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

loading...