ಠರಾವು ಅನುಷ್ಠಾನಗೊಳ್ಳುವಂತಾಗಲಿ: ಘೋಟ್ನೇಕರ

0
107

ಕನ್ನಡಮ್ಮ ಸುದ್ದಿ-ಹಳಿಯಾಳ: ಪುರಸಭೆಯ ಆಡಳಿತ ಮಂಡಳಿಯು ವಿವಿಧ ಸಭೆಗಳಲ್ಲಿ ಮಾಡಿರುವ ಚರ್ಚೆಗಳು ಹಾಗೂ ಠರಾವುಗಳು ಸರಿಯಾಗಿ ಅನುಷ್ಠಾನಗೊಳ್ಳುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಹೇಳಿದರು.
ಪುರಸಭೆ ಅಧ್ಯಕ್ಷ ಉಮೇಶ ಬೋಳಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಪುರಸಭೆಯ ಮಾಸಿಕ ಸಾಮಾನ್ಯ ಸಾಧಾರಣ ಸಭೆಯಲ್ಲಿ ಹಾಜರಿದ್ದು ಅವರು ಮಾತನಾಡಿದರು. ಸಚಿವ ಆರ್.ವಿ. ದೇಶಪಾಂಡೆಯವರ ಸಹಕಾರದಿಂದ ಹಳಿಯಾಳ ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಮಂಜೂರಾಗುತ್ತಿದ್ದು, ಆ ಅನುದಾನವನ್ನು ಸರಿಯಾಗಿ ವಿನಿಯೋಗಿಸಿ ಸರ್ವತೋಮುಖ ಅಭಿವೃದ್ಧಿಗೆ ಸರ್ವರೂ ಕೂಡಿ ಶ್ರಮಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದರು.
ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು. ಪ್ರತಿಪಕ್ಷದ ಮುಖಂಡ ಹಿರಿಯ ಸದಸ್ಯ ಶ್ರೀಕಾಂತ ಹೂಲಿ ಮಾತನಾಡುತ್ತಾ ದಿನಗೂಲಿ ನೌಕರರನ್ನು ಖಾಯಂ ಮಾಡುವ ವಿಷಯದಲ್ಲಿ ಹಣಕಾಸಿನ ವ್ಯವಹಾರವಾಗಲಿರುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಇದರಿಂದ ಪುರಸಭೆಯ ಸದಸ್ಯರ ಮಾನ ಹರಾಜಾಗುತ್ತದೆ. ಹೀಗಾಗಿ ಈ ವಿಷಯವನ್ನು ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಮಾಡುವಂತೆ ಆಗ್ರಹಿಸಿದರು. ಈ ಬಗ್ಗೆ ಎಂಎಲ್‍ಸಿ ಎಸ್.ಎಲ್. ಘೋಟ್ನೇಕರ ಸಹ ಮಾತನಾಡಿದರು. ಈ ಹಿಂದೆ ಕೂಡ ಹಲವಾರು ದಿನಗೂಲಿಗಳನ್ನು ಖಾಯಂ ಮಾಡಲಾಗಿದ್ದು, ಅಂತವರಿಂದ ಒಂದು ಕಪ್ ಚಹಾ ಕೂಡ ಕುಡಿಯದೇ ಖಾಯಂಗೊಳಿಸಲು ಸಹಕಾರ ನೀಡಲಾಗಿದೆ. ಪೌರಕಾರ್ಮಿಕರಿಂದ ಹಣ ಪಡೆಯುವ ಕಾರ್ಯವಾದರೆ ಅದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಈ ಬಗ್ಗೆ ಮುಖ್ಯಾಧಿಕಾರಿ ಕೇಶವ ಚೌಗುಲೆ ಮಾಹಿತಿ ನೀಡಿದರು. 2011 ರಿಂದ ಕಾರ್ಯನಿರ್ವಹಿಸುತ್ತಿರುವ 11 ಗುತ್ತಿಗೆ ಕಾರ್ಮಿಕರನ್ನು ಸರ್ಕಾರದ ಆದೇಶದಂತೆ ಖಾಯಂ ಮಾಡುವದಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಪ್ರತಿಪಕ್ಷದ ಇನ್ನೋರ್ವ ಸದಸ್ಯ ಸುಬಾನಿ ಹುಬ್ಬಳ್ಳಿ ಗಮನ ಸೆಳೆಯುವ ವಿಷಯ ಮಂಡಿಸಿದರು. ನಿರಂತರ ನೀರು ಸರಬರಾಜು ಯೋಜನೆಯಡಿ ಈ ಹಿಂದಿನ ನಲ್ಲಿ ಬಳಕೆದಾರರು ನೀಡಿದ್ದ ಠೇವಣಿಯನ್ನು ಹೊಸ ಠೇವಣಿ ಎಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು. ಈ ವಿಷಯ ಹಾಗೂ ನೀರು ಬಳಕೆಯ ಪ್ರಮಾಣ ಹಾಗೂ ಮೀಟರ್ ಆಧಾರದ ಮೇಲೆ ಮೊತ್ತ ನಿಗದಿಪಡಿಸುವ ಕುರಿತು ಚರ್ಚೆ ನಡೆಯಿತು. ಇದೇ ವಿಷಯದ ಬಗ್ಗೆ ವಿಶೇಷ ಸಭೆಯನ್ನು ಕರೆದು ಚರ್ಚಿಸೋಣ ಎಂದು ಅಧ್ಯಕ್ಷ ಉಮೇಶ ಬೋಳಶೆಟ್ಟಿ ತಿಳಿಸಿದರು.
ಸ್ಥಳೀಯ ಗುತ್ತಿಗೆದಾರರ ಸಂಘದ ಸದಸ್ಯರು ಸಭೆಗೆ ಬಂದು ವಿವಿಧ ಕಾಮಗಾರಿಗಳನ್ನು ಮಾಡಲು ಹೊರಗಿನ ಗುತ್ತಿಗೆದಾರರಿಗೆ ಅವಕಾಶ ನೀಡದೇ ಸ್ಥಳೀಯರಾದ ತಮಗೆ ಮಾತ್ರ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಈ ವಿಷಯದಲ್ಲಿ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ.
ಶೃದ್ಧಾಂಜಲಿ: ಇತ್ತೀಚೆಗೆ ನಿಧನರಾದ ಮಾಜಿ ಸಂಸದ ದೇವರಾಯ ನಾಯ್ಕ ಅವರ ನಿಧನಕ್ಕೆ ಸಭೆಯು ಶೋಕ ವ್ಯಕ್ತಪಡಿಸಿ ದಿವಂಗತರ ಆತ್ಮಕ್ಕೆ ಶಾಂತಿಕೋರಿ ಮೌನಾಚರಣೆ ಮಾಡಲಾಯಿತು.**ಪುರಸಭೆಯ ಹಣಕಾಸು ಸ್ಥಾಯಿ ಸಮಿತಿ ಚೇರಮನ್ ಆಗಿ ಗಾಯತ್ರಿ ಮಹಾದೇವ ನೀಲಜಕರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಪುರಸಭೆ ಉಪಾಧ್ಯಕ್ಷ ಅರುಣ ಬೋಬಾಟಿ, ಚೇರಮನ್ ಮಂಜುಳಾ ನಾರಾಯಣ ವಡ್ಡರ್, ಮುಖ್ಯಾಧಿಕಾರಿ ಕೇಶವ ಚೌಗುಲೆ, ಸದಸ್ಯರಾದ ಮಾಧವಿ ಬಸವರಾಜ ಬೆಳಗಾಂವಕರ, ಶ್ರೀದೇವಿ ಯಡೋಗಿ, ಪ್ರೇಮಾ ಅಶೋಕ ತೋರಣಗಟ್ಟಿ, ಗಾಯತ್ರಿ ಮಹಾದೇವ ನೀಲಜಕರ, ರಿಯಾನಾ ಬೆಟಗೇರಿ, ಮಂಜುಳಾ ಮಾನಗಾಂವಿ, ಮಾಲಾ ಬೃಗಾಂಜಾ, ಶಾರಕ್ಕಾ ಕಿತ್ತೂರ, ಶಂಕರ ಬೆಳಗಾಂವಕರ, ಸುರೇಶ ತಳವಾರ, ಇನಾಯತುಲ್ಲಾ ಬೇಪಾರಿ, ಬಾಬು ಮಾದರ, ಸುಬಾನಿ ಹುಬ್ಬಳ್ಳಿ, ಫಯಾಜ್ ಶೇಖ, ಸತ್ಯಜೀತ ಗಿರಿ, ಶ್ರೀಕಾಂತ ಹೂಲಿ, ಮಹೇಶ ಮಿಂಡೋಳ್ಕರ ಮೊದಲಾದವರು ಇದ್ದರು.

loading...