ಖಾನಾಪುರ ತಾಲೂಕು ಜೆಡಿಎಸ್ ಘಟಕದಿಂದ ಮಹಾದಾಯಿ ಹೋರಾಟಗಾರರಿಗೆ ಮನವಿ

0
82

ಖಾನಾಪುರ: ಕಳಸಾ-ಬಂಡೂರಿ ಅಚ್ಚಕಟ್ಟು ಪ್ರದೇಶವಾದ ತಾಲೂಕಿನ ಕಣಕುಂಬಿ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಮಲಪ್ರಭಾ ನದಿಯ ಉಗಮಸ್ಥಾನದಲ್ಲಿ ಹೋರಾಟ ಹಮ್ಮಿಕೊಳ್ಳಬೇಕೆಂದು ಕಳಸಾ-ಬಂಡೂರಿ ಮತ್ತು ಮಹಾದಾಯಿ ನದಿ ಜೋಡಣೆ ಹೋರಾಟಗಾರರಿಗೆ ಜೆಡಿಎಸ್ ಬ್ಲಾಕ್ ಅಧ್ಯಕ್ಷ ಮಹಾಂತೇಶ ಸಂಬರಗಿ ಮನವಿ ಸಲ್ಲಿಸಿದರು.
ಇತ್ತೀಚೆಗೆ ಸವದತ್ತಿ ತಾಲೂಕಿನ ನವಿಲುತೀರ್ಥದಲ್ಲಿ ಉತ್ತರ ಕರ್ನಾಟಕದ 3 ಜಿಲ್ಲೆಗಳ ಸಾವಿರಾರು ರೈತರು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತ ಮುಖಂಡರಿಗೆ ತಾಲೂಕಿನ ಜೆಡಿಎಸ್ ಪಕ್ಷದ ಪರವಾಗಿ ಈ ಆಹ್ವಾನ ನೀಡಿ ಮಾತನಾಡಿದ ಅವರು, ನವಲಗುಂದ ಶಾಸಕ ಎನ್.ಎಚ್ ಕೋನರಡ್ಡಿ ಹಾಗೂ ಮಹಾದಾಯಿ ನದಿ ಜೋಡಣೆ ಹೋರಾಟಗಾರರಲ್ಲಿ ಕಣಕುಂಬಿಯಲ್ಲಿ ಹೋರಾಟ ಹಮ್ಮಿಕೊಳ್ಳುವಂತೆ ಕೋರಿದರು.
ಜೆಡಿಎಸ್ ಮುಖಂಡ ಎಚ್.ಎನ್ ದೇಸಾಯಿ ಮಾತನಾಡಿ, ಮಹಾದಾಯಿ ಯೋಜನೆ ವಿಳಂಬದ ಪರಿಣಾಮ ಖಾನಾಪುರ ತಾಲೂಕಿನ ರೈತರು ಮತ್ತು ನಾಗರಿಕರು ಎದುರಿಸುತ್ತಿರುವ ನೀರಿನ ಸಮಸ್ಯೆಯ ಬಗ್ಗೆ ವಿವರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲು ಕಣಕುಂಬಿಗೆ ಆಗಮಿಸುವ ಎಲ್ಲ ರೈತ ಹೋರಾಟಗಾರರಿಗೆ ಪಕ್ಷದ ವತಿಯಿಂದ ಅಗತ್ಯ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.
ಮನವಿ ಸ್ವೀಕರಿಸಿದ ಶಾಸಕ ಕೋನರಡ್ಡಿ ಹಾಗೂ ಮಹಾದಾಯಿ ನದಿ ಜೋಡಣೆ ಹೋರಾಟಗಾರರು ಈ ತಿಂಗಳ ಅಂತ್ಯದಲ್ಲಿ ಕಣಕುಂಬಿಯಲ್ಲಿ ಹೋರಾಟ ಆಯೋಜಿಸುವುದಾಗಿ ತಾಲೂಕಿನ ಮುಖಂಡರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಿನ ಜೆಡಿಎಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇದ್ದರು.

loading...