ಅನಾಥ ಮಗುವಿಗೆ ಉಜ್ವಲ ಭವಿಷ್ಯ ನೀಡಿ : ಸಂಧ್ಯಾ ವೆರ್ಣೆಕರ

0
47

ಗದಗ: ಮಕ್ಕಳಿಲ್ಲದ ದಂಪತಿಗಳ ಮಡಿಲಿಗೆ ಅನಾಥ ಮಗುವನ್ನು ದತ್ತು ನೀಡುವ ಮೂಲಕ ಮಕ್ಕಳಿಲ್ಲದ ಕೊರಗನ್ನು ನಿವಾರಿಸಿ ಅವರಲ್ಲಿ ಸಂತೃಪ್ತ ಭಾವನೆ ಮೂಡುವಂತೆ ಮಾಡುವದು ಪುಣ್ಯದ ಕಾರ್ಯ ಎಂದು ಗದಗ-ಬೆಟಗೇರಿ ದೈವಜ್ಞ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸಂಧ್ಯಾ ರಾಜು ವೆರ್ಣೆಕರ ಅಭಿಪ್ರಾಯಪಟ್ಟರು.
ಅವರು ಗುರುವಾರ ಬೆಟಗೇರಿಯ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಕೇಂದ್ರದ ಹೆಣ್ಣು ಮಗುವನ್ನು ಮಂಗಳೂರಿನ ಮಕ್ಕಳಿಲ್ಲದ ದಂಪತಿಗಳ ಮಡಿಲಿಗೆ ದತ್ತುಪೋಷಕತ್ವಕ್ಕೆ ಹಸ್ತಾಂತರಿಸಿ ಮಾತನಾಡಿದರು.
ಕೆಲವು ದಂಪತಿಗಳು ಮಕ್ಕಳಿಲ್ಲದ ಕೊರಗಿನಲ್ಲಿ ಜೀವನ ನಡೆಸುವದು ಒಂದೆಡೆಯಾದರೆ ಇನ್ನೊಂದೆಡೆ ಹೆತ್ತ ಮಗುವನ್ನು ಎಲ್ಲೆಲ್ಲೂ ಬಿಟ್ಟು ಆ ಮಗುವನ್ನು ಅನಾಥರನ್ನಾಗಿಸುವ ಕಾರ್ಯವೂ ನಡೆದಿರುವದು ಇನ್ನೊಂದೆಡೆಯಾಗಿದೆ. ಹೀಗೆ ಪಾಲಕ ಪೋಷಕರಿಲ್ಲದೆ ಅನಾಥವಾಗಿರುವ ಮಕ್ಕಳು ದತ್ತು ಪೋಷಕ ಕೇಂದ್ರದಲ್ಲಿ ಪೋಷಣೆಗೊಳ್ಳುತ್ತಿವೆ. ಇಲ್ಲಿ ಪೋಷಣೆಗೊಳ್ಳುತ್ತಿರುವ ಮಕ್ಕಳನ್ನು ಮಕ್ಕಳಿಲ್ಲದ ದಂಪತಿಗಳ ಅಪೇಕ್ಷೆಯಂತೆ ಕಾನೂನು ನೆರವಿನೊಂದಿಗೆ ದತ್ತು ಪೋಷಣೆಗೆ ನೀಡುವ ಕಾರ್ಯ ಪುಣ್ಯದ ಕಾರ್ಯ ಎಂದು ಬಣ್ಣಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಗಣ್ಯ ವರ್ತಕರಾದ ರಾಜು ವೆರ್ಣೆಕರ ಅವರು ಮಾತನಾಡಿ ಮಕ್ಕಳಿಲ್ಲದ ದಂಪತಿಗಳು ಪಡೆದುಕೊಂಡ ದತ್ತು ಮಗುವನ್ನು ಯಾವುದೇ ಕಾರಣಕ್ಕೂ ಇದು ದತ್ತು ಮಗು ಎಂದು ಭಾವಿಸದೇ ತಮ್ಮ ಮಡಿಲಿನಿಂದ ಬಂದ ಮಗುವೆಂದೇ ಭಾವಿಸಿ ಆ ಮಗುವಿಗೆ ಪ್ರೀತಿ, ಮಮತೆ, ಕಕ್ಕುಲತೆಯನ್ನು ತೋರಿಸುವ ಮೂಲಕ ಆ ಮಗುವಿಗೆ ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಆದರ್ಶರನ್ನಾಗಿ ಮಾಡುವ ಗುರುತರವಾದ ಜವಾಬ್ದಾರಿ ಅವರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಬಸವರಾಜ ನಾಗಲಾಪೂರ, ಲಲಿತಾಬಾಯಿ ಮೇರವಾಡೆ, ಶ್ರೀಮತಿ ನಾಗವೇಣಿ ಕಟ್ಟಿಮನಿ, ಸುಭಾಸ ಬಬಲಾದಿ, ಪ್ರಾ.ಮಾರುತಿ ಕಟ್ಟಿಮನಿ, ಲಕ್ಕುಣಸಾ ರಾಜೋಳಿ, ಸಂಜೀವ ಹಬೀಬ,ಉಮಾ ಚನ್ನಪ್ಪನವರ, ಮಹಾದೇವಿ ಬಬಲಾದಿ ಮುಂತಾದವರಿದ್ದರು.

loading...