ಪ್ರಕೃತಿಯ ಮಡಿಲಲ್ಲಿ ಹುಟ್ಟಿದ ನಾವೇ ಭಾಗ್ಯವಂತರು: ಸಚಿವ ದೇಶಪಾಂಡೆ

0
93

ದಾಂಡೇಲಿ: ದಕ್ಷಿಣ ಹಿಂದುಸ್ಥಾನದ ಕಾಶ್ಮೀರವೆಂದೆ ಹೆಸರಾದ ದಟ್ಟ ಕಾನನವನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಹುಟ್ಟಿದ ನಾವೆಲ್ಲರೂ ಭಾಗ್ಯವಂತರು. ಪ್ರಕೃತಿಯ ಎಲ್ಲವನ್ನು ಹೊಂದಿರುವ ನಾವು ಸಮೃದ್ದ ಪರಿಸರ ಹಾಹೂ ಜೀವವೈವಿದ್ಯತೆಗಳನ್ನು ಕಾಪಾಡುವ ಮಹಾನ್‌ ಸಂರಕ್ಷಕರಾಗಬೇಕು. ಪರಿಸರ ಸಂರಕ್ಷಣೆಯಾದರೇ ಮಾತ್ರ ಪ್ರತಿಯೊಬ್ಬರ ಭವಿಷ್ಯ ಉಜ್ವಲವಾಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತರಾಗಬೇಕು. ನಮ್ಮ ಬದುಕಿಗೆ ಎಲ್ಲವನ್ನು ಕೊಡುವ ಪ್ರಕೃತಿ ಮಾತೆಯನ್ನು ಆರಾಧಿಸುವ, ಪೂಜಿಸುವ ಭಕ್ತರು ನಾವಾದಾಗ ಸಮೃದ್ದ ಪರಿಸರ ನಿರ್ಮಾಣ ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆಯವರು ಹೇಳಿದರು. ಭಾನುವಾರ ನಗರದ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನೇತೃತ್ವದಲ್ಲಿ ಹಮ್ಮಿಕೊಂಡಿರುವ 63 ನೇ ವನ್ಯಜೀವಿ ಸಪ್ತಾಹವನ್ನು ಉದ್ಘಾಟಿಸಿ ಹಾಗೂ ವನ್ಯಜೀವಿ ಸಪ್ತಾಹದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ,ಅರಣ್ಯ, ವನ್ಯಜೀವಿಗಳ ರಕ್ಷಣೆ ಕೇವಲ ಇಲಾಖಾ ಆದಿಕಾರಿಗಳ ಕೆಲಸವಲ್ಲ. ಅದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪರಿಸರವಾದಿಗಳು ಎಲ್ಲದಕ್ಕೂ ವಿರೋಧಿಸಬಾರದು. ಪರಿಸರ, ವನ್ಯಜೀವಿಗಳ ಸಂರಕ್ಷಣೆಯ ಜೊತೆಗೆ ಮಾನವನ ಸಂರಕ್ಷಣೆಯೂ ಆಗಬೇಕಿದೆ. ವನ್ಯಜೀವಿಗಳ ಸಂರಕ್ಷಣೆ ಜೊತೆಗೆ ವನ್ಯಜೀವಿಗಳಿಂದ ರೈತರ ಬೆಳೆಗಳ ರಕ್ಷಣೆಯೂ ಆಗಬೇಕಿದೆ. ಕೊಂಕಣಿ ಅಕಾಡೆಮಿಯಿಂದ ಕುಣಬಿ ಸಮುದಾಯದ 73 ಮಕ್ಕಳಿಗೆ ಶಿಷ್ಯ ವೇತನ ಹಾಗೂ ಬೆಂಗಳೂರಿನ ಲರ್ನಿಂಗ್‌ ಸೊಸೈಟಿಯಿಂದ ಈ ಭಾಗದ 124 ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ.ಗಳಂತೆ ಶಿಷ್ಯವೇತನ ನೀಡಲಾಗಿದೆ ಎಂದರು.
ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೋಟ್ನೇಕರ ಮಾತನಾಡಿ, ರಾಜ್ಯದಲ್ಲಿಯೇ ಅತ್ಯಂತ ಹೆಚ್ಚಿನ ಅರಣ್ಯ ಹೊಂದಿರುವ ಜಿಲ್ಲೆ ನಮ್ಮ ಉತ್ತರ ಕನ್ನಡ ಜಿಲ್ಲೆ. ಈ ಜಿಲ್ಲೆಯ ಜನ ಅರಣ್ಯದ ಬಗ್ಗೆ ಕಾಳಜಿ ಇದ್ದವರುಪರಿಸರ ಹಾಗೂ ವನ್ಯ ಜೀವಿಗಳ ಸಂರಕ್ಷಣೆ ಅದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು.
ಸಂತೋಷ್‌ ರೇಣಕೆ, ರಮೇಶ ನಾಯ್ಕ, ಕೃಷ್ಣಾ ಪಾಟೀಲ್‌, ಸಂಜಯ ಹಣಬರ, ದಾಂಡೇಲಿ ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕೆ, ನರ್ಮದಾ ಪಾಟ್ನೇಕರ, ವಿಜಯ ಪಂಡಿತ, ವಿದ್ಯಾಧರ ಗುಳಗುಳಿ, ಅಶೋಕ ಬಾಸರಕೋಡ, ಓ. ಪಾಲಯ್ಯ, ಡಾ. ರಮೇಶ ಮುಂತಾದವರು ವೇದಿಕೆಯಲ್ಲಿದ್ದರು.

loading...