2.93 ಕೋಟಿ ರೂ.ಗಳ ಅನುದಾನ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

0
10

ಮೂಡಲಗಿ : ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಗೆ ಮೇಲ್ದರ್ಜೆಗೆ ಏರಿರುವ ನಾಗನೂರ ಪಟ್ಟಣದ ಸಮಗ್ರ ಏಳ್ಗೆಗೆ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ಸಮೀಪದ ನಾಗನೂರ ಗ್ರಾಮದಲ್ಲಿ ಪಟ್ಟಣ ಪಂಚಾಯತಿಯಿಂದ ಸುಮಾರು 2.93 ಕೋಟಿ ರೂ.ಗಳ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಅಭಿವೃದ್ಧಿ ಕಾರ್ಯಗಳಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷಾತೀತವಾಗಿ ಶ್ರಮಿಸುವಂತೆ ಪಟ್ಟಣ ಪಂಚಾಯತಿ ಸದಸ್ಯರಿಗೆ ಸಲಹೆ ಮಾಡಿದ ಅವರು, ನಾಗನೂರು ಪಟ್ಟಣದ ಏಳ್ಗೆಗೆ ಈಗಾಗಲೇ ಪ್ರಥಮ ಹಂತದಲ್ಲಿ ಸುಮಾರು 3 ಕೋಟಿ ರೂ. ಅನುದಾನ ಬಂದಿದೆ. ಈ ಅನುದಾನವನ್ನು ಜನ ಕಲ್ಯಾಣ ಹಾಗೂ ವಿವಿಧ ಕಾಮಗಾರಿಗಳಿಗಾಗಿ ಬಳಕೆ ಮಾಡುವಂತೆ ತಿಳಿಸಿದರು. ಸಚಿವ ರಮೇಶ ಜಾರಕಿಹೊಳಿ ಅವರು 2016-17ನೇ ಸಾಲಿನ ಎಸ್‌ಎಫ್‌ಸಿ ಮುಕ್ತ ನಿಧಿ 1.63 ಕೋಟಿ ರೂ. ಹಾಗೂ 14ನೇ ಹಣಕಾಸು ಯೋಜನೆಯಡಿ 1.30 ಕೋಟಿ ರೂ. ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ನೆರವೇರಿಸಿದರು. ಅರಭಾವಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಳೆದ 12 ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಬಾಲಚಂದ್ರ ಅವರು ಜನಮೆಚ್ಚಿದ ಶಾಸಕರಾಗಿದ್ದಾರೆಂದು ಪ್ರಶಂಸಿಸಿದರು. ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಎಂದೆಂದಿಗೂ ಚಿರಋಣಿಯಾಗಿರುವುದಾಗಿ ಹೇಳಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿದರು. ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತಿ ಅಧ್ಯಕ್ಷೆ ಶೋಭಾ ಪರಸಪ್ಪ ಬಬಲಿ ವಹಿಸಿದ್ದರು. ಉಪಾಧ್ಯಕ್ಷೆ ನಾಗವ್ವ ಪೂಜೇರಿ, ಪ್ರಭಾಶುಗರ ನಿರ್ದೇಶಕ ಕೆಂಚಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ಚಂದ್ರು ಬೆಳಗಲಿ, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಸುಭಾಷ ಬೆಳಗಲಿ, ಗಜಾನನ ಯರಗಣ್ವಿ, ಎ.ಆರ್‌. ಪಾಟೀಲ, ಸಿದ್ದಪ್ಪ ಯಾದಗೂಡ, ಸತ್ತೆಪ್ಪ ಕರವಾಡಿ, ಯಮನಪ್ಪ ಕರಬನ್ನವರ, ಮುಖ್ಯಾಧಿಕಾರಿ ಎಂ.ಎಚ್‌. ಅತ್ತಾರ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here