ಪವಾಡಪುರುಷ ಲಚ್ಯಾಣದ ಸಿದ್ಧಲಿಂಗ ಮಹಾರಾಜರು

0
54
loading...

ಇಂಡಿ ತಾಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದಲ್ಲಿ ಲಿಂ. ಶ್ರೀ ಸಿದ್ದಲಿಂಗ ಮಹಾರಾಜರ 85ನೇ ಪುಣ್ಯಾರಾಧನೆ ಕಾರ್ಯಕ್ರಮವು ಇದೇ

ದಿನಾಂಕ 7 ಹಾಗೂ 8 ರಂದು ಜರುಗಲಿದ್ದು, ತನ್ನಿಮಿತ್ತ ಈ ವಿಶೇಷ ಲೇಖನ

ವಿಜಾಪುರ: ಅಮೋಘಸಿದ್ದರ ವರಪ್ರಸಾದದಿಂದ ಧರೆಗಿಳಿದು ವಿಶ್ವಕರ್ಮದ ಜ್ಯೌತಿಯಾಗಿ ಜಗವ ಬೆಳಗಿದ ಮಹಾಮಹಿಮರು ಸುಕ್ಷೇತ್ರ ಲಚ್ಯಾಣದ ಲಿಂ. ಶ್ರೀ ಸಿದ್ಧಲಿಂಗ ಮಹಾರಾಜರು.

ಅಂತರ್ ಜ್ಞಾನಿಗಳಾಗಿದ್ದ ಸಿದ್ದಲಿಂಗ ಮಹಾರಾಜರು 1848 ರಲ್ಲಿ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ಲಚ್ಚಪ್ಪ-ನಾಗಮ್ಮ ದಂಪತಿಗಳ ಪುಣ್ಯ ಉದರದಲ್ಲಿ ಶ್ರಾವಣ ಸೋಮವಾರದಂದು ಬ್ರಾಹ್ಮಿಣಿ (ರೋಹಿಣಿ ನಕ್ಷತ್ರ)ಮುಹೂರ್ತದಲ್ಲಿ ಜನಿಸಿದರು. ಅವರಿಗೆ ಅಮೊಘಸಿದ್ದನೆಂದು ನಾಮಕರಣ ಮಾಡಲಾಯಿತು. ಜನಿಸಿದ ಎರಡು ದಿನದಲ್ಲಿಯೇ ಆಕಳ ಕಾಲಲ್ಲಿ ಆಡುತ್ತ ಬಾಲಲೀಲೆ ತೋರಿದ ಸಿದ್ಧಲಿಂಗ ಮಹಾರಾಜರು ಬಾಲ್ಯದಿಂದಲೇ ಹತ್ತು ಹಲವು ಲೀಲೆಗಳ ಮೂಲಕ ತಮ್ಮ ಪವಾಡ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟ ಪವಾಡಪುರುಷರು.

ಅವರು  ಒಮ್ಮೆ ಇಂಡಿ ತಾಲೂಕಿನ ಬಂಥನಾಳ ಮಠದ ಗುರುಗಳಾದ ಶಂಕರಲಿಂಗ ಮಹಾ ಶಿವಯೋಗಿಗಳ ಬಳಿ ಹೋದಾಗ, ಗುರುಗಳು ಏಕಾಗ್ರದೃಷ್ಠಿಯಿಂದ ಈ ಬಾಲಕನನ್ನು ನೋಡಿ ನಿನ್ನ ಹೆಸರೇನು ಮಗು ಎಂದು ಕೇಳಿದರು. ಆಗ ನನ್ನ ಹೆಸರು ಸಿದ್ದ ಎಂದನು. ಹೌದಪ್ಪ ಹೌದು, ನೀನು ಸಿದ್ದನೇ ನಿಜ. ನೀನು ಆಡಿದ ಮಾತು ಸುಳ್ಳು ಆಗುವದಿಲ್ಲ. ನೀನು ಯಾವ ಕೆಲಸವನ್ನು ಮಾಡುತ್ತಿಯೋ ಅಂಥಹ ಕೆಲಸವನ್ನು ಯಾರಿಗೂ ಮಾಡಲಿಕ್ಕಾಗುವದಿಲ್ಲ. ಮೂರು ಲೋಕಗಳಲ್ಲಿ ಸಂಪೂರ್ಣವಾಗಿ ತುಂಬಿರುವಂಥಹ ಶಕ್ತಿಯನ್ನೊಳಗೊಂಡ ಸಿದ್ದಿ ಪುರುಷನೇ ಇರುತ್ತಿ ಎಂದರಂತೆ.

ಮುಂದೆ ಇವರು ಗುರು ಶಂಕರಲಿಂಗರ ಸೇವೆ ಗೈಯುತ್ತ, ಶ್ಯಾವಳ ಗ್ರಾಮದಲ್ಲಿ ಹೆಬ್ಬುಲಿಯಾಗಿ, ಜಿಗಜಿಣಗಿಯಲ್ಲಿ ಮಗುವಾಗಿ, ತಡವಲಗಾ ಮತ್ತು ಲಚ್ಯಾಣದಲ್ಲಿ ಏಕ ಕಾಲಕ್ಕೆ ಅಗ್ನಿ ಪ್ರವೇಶ ಮಾಡಿ, ಶ್ರೀಶೈಲದಲ್ಲಿ ಯಾರು ಪ್ರವೇಶಿಸಲಾಗದ ಕದಳಿ ಬನದ ಗುಹೆಯನ್ನು ಪ್ರವೇಶಿಸಿದ್ದು, ಹೀಗೆ ಹತ್ತು ಹಲವು ಲೀಲೆಗಳನ್ನು ತೋರಿ ಲೋಕ ಸಂಚಾರ ಮಾಡುತ್ತ ಇಂಡಿ ತಾಲ್ಲೂಕು ಲಚ್ಯಾಣ ಗ್ರಾಮಕ್ಕೆ ಬಂದು, ಗುರುವಿನ ಆದೇಶದಂತೆ ಕಮರಿಮಠವನ್ನು ಕಟ್ಟಿಸಿದರು.

ನಿನ್ನ ಸೇವೆಯನ್ನು ಮಾಡಬೇಕು ಎಂದು ಇಚ್ಛೆ ಇಟ್ಟುಕೊಂಡ ಜನರು ಉದ್ದಾರವಾಗಿ ಜಗತ್ತಿನಲ್ಲಿ ಕಮರಿಮಠದ ಮಹತ್ವ ತಿಳಿಸಲಿ. ಲಚ್ಯಾಣ ಮಠವು ಸುಕ್ಷೇತ್ರವಾಗಿ ಕೈಲಾಸದಂತೆ ಶೋಭಾಯಮಾನವಾಗಿ ಬೆಳಗಲಿ. ನಿನ್ನ ಕೀರ್ತಿ ಯುಗಯುಗಾಂತರವಾಗಿ ಜಗತ್ತಿನಲ್ಲಿ ಉಳಿಯಲಿ ಎಂದು ಗುರು ಶಂಕರಲಿಂಗ ಮಹಾ ಶಿವಯೋಗಿಗಳು ಸಿದ್ದಲಿಂಗೇಶನಿಗೆ ಆಶಿರ್ವದಿಸಿದರಂತೆ.

ಹಿಂದೆ ದೇಶವನ್ನು ಬ್ರಿಟಿಷರು ಆಳುತ್ತಿದ್ದ ಸಂದರ್ಭದಲ್ಲಿ ಒಮ್ಮೆ ಸಿದ್ಧಲಿಂಗರ ದರ್ಶನಕ್ಕೆಂದು ಇಬ್ಬರು ಸಾಧುಗಳು ರೈಲಿನಲ್ಲಿ ಟಿಕೆಟ್ ಇಲ್ಲದೆ ಬರುತ್ತಿದ್ದರು. ಇದನ್ನು ಕಂಡ ಟಿಕೆಟ್ ಕಲೆಕ್ಟರ್ ಕಡುಕೋಪಗೊಂಡು ಆ ಸಾಧುಗಳಿಗೆ ಬಾಸುಂಡೆ ಬರುವ ಹಾಗೆ ಹೊಡೆದರು. ಇವರ ಮೈ ಪೆಟ್ಟು ಸಿದ್ದರಿಗೆ ಬಿತ್ತು. ರೈಲು ಅಧಿಕಾರಿಗಳ ವಿರುದ್ದ ಕೋಪಗೊಂಡ ಸಿದ್ದರು, ವೇಗವಾಗಿ ಚಲಿಸುತ್ತಿರುವ ರೈಲನ್ನು ಅಮೊಘ ಶಕ್ತಿಯಿಂದ ತಮ್ಮ ಹಸ್ತ ತೋರಿಸಿ ನಿಲ್ಲಿಸಿ ಬ್ರಿಟೇಷ್ ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದ್ದರು.  ಆಗ ಬ್ರಿಟಿಷ ಅಧಿಕಾರಿಗಳು ಬಂದು ಕ್ಷಮೆಯಾಚಿಸಿದ ನಂತರ ಅವರು ನಿಂತಿದ್ದ ರೈಲು ಮುಂದೆ ಸಾಗುವಂತೆ ಮಾಡುವ ಮೂಲಕ ಭಯಭಕ್ತಿಯನ್ನು ಉಂಟು ಮಾಡಿದರೆಂದು  ಈಗಲೂ ಭಕ್ತರು ಅವರ ಪವಾಡವನ್ನು ಹೇಳುತ್ತಾರೆ.

ಸಿದ್ದಿ ಪುರುಷ ಸಿದ್ದಲಿಂಗ ಮಹಾರಾಜರ ದರುಶನಕ್ಕಾಗಿ ಲಚ್ಯಾಣದ ಕಮರಿಮಠಕ್ಕೆ ನಿತ್ತವೂ ದೂರದ ಬೇರೆ-ಬೇರೆ ಊರುಗಳಿಂದ ಸಾಧು-ಸಂತರು ರೈಲು ಮೂಲಕ ಬರುವುದು ಸಾಮಾನ್ಯ. ಸಿದ್ದಲಿಂಗ ಮಹಾಜರ ಉಪದೇಶ ಪಡೆದು ಕೃತಾರ್ಥರಾದವರು ಅಸಂಖ್ಯಾತ ಜನ, ಅವರಲ್ಲಿ ಸಂನ್ಯಾಸ ದೀಕ್ಷೆ ಪಡೆದು ಗುರು ಸಿದ್ದಲಿಂಗ ಮಹಾರಾಜರ ಹೆಸರನ್ನು ಸಾರಿದವರು ಹಲವರು, ಅವರಲ್ಲಿ ಮುಗಳಖೋಡದ ಯಲ್ಲಾಲಿಂಗ ಮಹಾರಾಜರು, ಪುಣೆ ಮತ್ತು ಕೃಷ್ಣಾ ಮಠದ ಕ್ಷೀರಾಲಿಂಗ ಮಹಾರಾಜರು, ಆಹೇರಿಯ ಆತ್ಮಾನಂದ ಸ್ವಾಮಿಗಳು, ಮಧುರಖಂಡಿಯ ಸಿದ್ದಲಿಂಗ ಮಹಾರಾಜರು, ಕೆಂಭಾವಿಯ ಹಣಮಂತ ಮಹಾರಾಜರು, ಹಿರೇರೂಗಿ ಹಾಗೂ ಬೋಳೆಗಾಂವ ಮಠದ ಬಸವಲಿಂಗ ಶರಣರು ಹಾಗೂ ಗಿರಿಯಮ್ಮ ತಾಯಿ ಇವರ ಶಿಷ್ಯರು.

ಹಿಂದೆ ರುದ್ರಭೂಮಿಯಾಗಿದ್ದ ಕಮರಿಮಠದ ಸ್ಥಳವು ಸಿದ್ದಲಿಂಗ ಮಹಾರಾಜರ ಪಾದ ಸ್ಪರ್ಶದಿಂದ ಕಾಲಾಂತರ ಪುಣ್ಯ ಕ್ಷೇತ್ರವಾಯಿತು. ಈ ಕಮರಿ ಮಠವನ್ನು ತಮ್ಮ ಗುರು ಪೀಠವಾದ ಬಂಥನಾಳ ಪೀಠಕ್ಕೆ ಅರ್ಪಿಸಿದ ಸಿದ್ದಲಿಂಗ ಮಹಾರಾಜರು ಮುಂದೆ ಇದೇ ಕ್ಷೇತ್ರದಲ್ಲಿ 1927ರ ಭಾದ್ರಪದ ವದ್ಯ ಸಪ್ತಮಿ ದಿವಸ ಗುರುವಿನ ಪಾದಕ್ಕೆ ತಮ್ಮ ದೇಹವನ್ನು ಸಮರ್ಪಿಸಿದರು.

ಲಚ್ಯಾಣ ಹಾಗೂ ಬಂಥನಾಳದ ಪ್ರಸ್ತುತ ಪೀಠಾಧಿಪತಿ ಶ್ರೀ ವೃಷಭಲಿಂಗ ಮಹಾಶಿವಯೋಗಿಗಳ ನೇತೃತ್ವದಲ್ಲಿ  ಶ್ರೀಮಠದ  ಅಭಿವೃದ್ದಿ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿವೆ.  ಶ್ರೀಮಠದ ಪಕ್ಕದಲ್ಲಿ ಒಂದು ಗೋಶಾಲೆ ಸ್ಥಾಪಿಸಿದ್ದು, ಅಲ್ಲಿ ಅನೇಕ ಗೋವುಗಳನ್ನು ನಾವು ಕಾಣಬಹುದಾಗಿದೆ. ಇತ್ತೀಚಿಗೆ ಶಂಕರಲಿಂಗ  ಶಿವಯೋಗಿಗಳ ನೂತನ ರಥವನ್ನು ನಿರ್ಮಾಣ ಮಾಡಲಾಗಿದೆ.

ಶ್ರೀಗಳ ನೇತೃತ್ವದಲ್ಲಿ 2005 ರಲ್ಲಿ ಸಿದ್ದಲಿಂಗ ಮಹಾರಾಜರ 155ನೇ ಜಯಂತ್ಯೌತ್ಸವ ಅದ್ದೂರಿಯಿಂದ ಜರುಗಿತು. ಇದೇ ಸಂದರ್ಭದಲ್ಲಿ ಪ್ರಾರಂಭಿಸಿದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಪ್ರತಿವರ್ಷವೂ ಇಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

ಶ್ರೀ ಮಠದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಡಿಗಲ್ಲು ನೆರವೇರಿಸಿದ `ಗುರು ಮಠದಳಿ ನಿರ್ಮಾಣ ಹಾಗೂ ಪ್ರವಾಸಿ ಮಂದಿರದ ನಿರ್ಮಾಣ ಕಾರ್ಯ ಈಗ ಭರದಿಂದ ಸಾಗಿದೆ.

ಸುಕ್ಷೇತ್ರ ಲಚ್ಯಾಣ ಕಮರಿಮಠವು ಕರ್ನಾಟಕ, ಮಹಾರಾಷ್ಟ್ತ್ರ, ಆಂದ್ರ ಹಾಗೂ ಗೋವಾ ರಾಜ್ಯ ಸೇರಿದಂತೆ ನಾಡಿನ ನಾನಾ ಭಾಗಗಳ ಲಕ್ಷಾಂತರ ಭಕ್ತರನ್ನು ಹೊಂದಿದ್ದು, ನಿತ್ಯವೂ ಇಲ್ಲಿ ಅನ್ನ, ಅಕ್ಷರ ಹಾಗೂ ಜ್ಞಾನ ದಾಸೋಹ ನಡೆಯುತ್ತಿರುವುದು ಈ ಮಠದ ಒಂದು ವೈಶಿಷ್ಠ್ಯತೆ.

್ಷದೇವೇಂದ್ರ ಹೆಳವರ

    ವಿಜಾಪುರ

loading...

LEAVE A REPLY

Please enter your comment!
Please enter your name here