ಕನ್ನೂರ ಗಣಪತರಾವ್ ಮಹಾರಾಜರ ಜಯಂತ್ಯುತ್ಸವ ಸಪ್ತಾಹ

0
44
loading...

ವಿಜಯಪುರ: “ನೀವೆಲ್ಲ ಮೂಲತಃ ಆನಂದಸ್ವರೂಪರೇ ಇದ್ದೀರಿ; ಆನಂದದಿಂದ ಬಾಳಿ ಬದುಕಿರಿ; ಎಲ್ಲರ ಮೇಲೆ ಪ್ರೇಮ ಮಾಡಿರಿ; ಆನಂದದ ಮೂಲಾಧಾರದಿಂದಲೇ ಸಹಜಸ್ಥಿತಿ ಹೊಂದಿರಿ” ಎಂದು ಸಂದೇಶ ನೀಡಿದವರು ನಡೆದಾಡುವ ದೇವರೆಂದೆನಿಸಿದ್ದ ವಿಜಯಪುರ ತಾಲೂಕಿನ ಸುಕ್ಷೇತ್ರ ಕನ್ನೂರ ಶಾಂತಿಕುಟೀರ ಆಶ್ರಮದ ಸ್ಥಾಪಕರಾದÀ ಸಮರ್ಥ ಸದ್ಗುರು ಶ್ರೀ ಗಣಪತರಾವ ಮಹಾರಾಜರು.
ಶ್ರೀ ಗಣಪತರಾವ ಮಹಾರಾಜರು ಶ್ರೀ ದತ್ತಾತ್ರೆಯ ಭಕ್ತರಾದ ಕನ್ನೂರ ಗ್ರಾಮದ ಸುಸಂಸ್ಕøತ ಮನೆತನದ ಶಿವರಾಮ ಪಂತ ಹಾಗೂ ಸರಸ್ವತಿ ದಂಪತಿಯ ಐದು ಜನ ಪುತ್ರರಲ್ಲಿ ಮೂರನೇಯವರಾಗಿ 1909 ರಲ್ಲಿ ಭಾದ್ರಪದ ಶುದ್ದ ಚತುರ್ಥಿ(ಗಣೇಶ ಚತುರ್ಥಿ) ಯಂದು ಬೆಳಿಗ್ಗೆ 5 ಗಂಟೆಗೆ ಜನಿಸಿದರು.
ಬಾಲ್ಯದಲ್ಲೇ ಆಧ್ಯಾತ್ಮದ ಕಡೆಗೆ ಒಲವುಳ್ಳವರಾಗಿದ್ದ ಗಣಪತರಾವ್ ಮಹಾರಾಜರು ಚಿಕ್ಕ ದೇವರ ದರ್ಶನದ ಹಂಬಲವುಳ್ಳವರಾಗಿ ನಿತ್ಯವೂ ವಿಜಯಪುರದ ಶ್ರೀ ದತ್ತಾತ್ರೆಯ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುತ್ತಿದ್ದರು. ತಮ್ಮ 13ನೇ ವಯಸ್ಸಿನಲ್ಲೇ ಗುರುಗಳಾದ ಶ್ರೀ ಸಿದ್ದರಾಮೇಶ್ವರ ಮಹಾರಾಜರ ಪ್ರವಚನಗಳಿಂದ ಪ್ರಭಾವಿತರಾಗಿ ಅವರಿಂದ ಶಿಷ್ಯತ್ವ ಸ್ವೀಕರಿಸಿದರು. ಮೆಟ್ರಿಕ್ ವರೆಗೆ ವಿಜಯಪುರದ ಪಿ.ಡಿ.ಜೆ ಹೈಸ್ಕೂಲದಲ್ಲಿ ಓದಿದ ಇವರು ಆಧ್ಯಾತ್ಮಿಕ ಸಾಧನೆ ಮಾಡುತ್ತಲೇ ವಿದ್ಯಾಭ್ಯಾಸವನ್ನು ಮುಂದುವರೆಸಿ 1932ರಲ್ಲಿ ಪುಣೆಯ ಫಗ್ರ್ಯೂಸನ್ ಕಾಲೇಜಿನಿಂದ ಬಿ.ಎಸ್‍ಸಿ. ಪದವಿಯನ್ನು ಪಡೆದರು. ಮನೆಯ ಬಾಗಿಲಿಗೆ ಬಂದ ನೌಕರಿಯನ್ನು ನಿರಾಕರಿಸಿ ಕನ್ನೂರಿನ ತಮ್ಮ ಸ್ವಂತ ಹೊಲದಲ್ಲಿಯೇ ಬಂದು ನೆಲೆಸಿ ಆಧ್ಯಾತ್ಮ ಸಾಧನೆಯನ್ನು ಮುಂದುವರಿಸಿದರು. ಅಲ್ಲಿ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತ ಮೊದಲಿದ್ದ ಪುಟ್ಟ ಮನೆ ಬದಲಾಗುತ್ತ ಹೋಗಿ ಭಕ್ತರ ಆಶ್ರಮವಾಯಿತು. ಈಗ ಸುಮಾರು 2000 ಭಕ್ತರು ಕೂಡುವಂತಹ ದೊಡ್ಡ ಪ್ರವಚನ ಮಂದಿರ, ವಿಶಾಲ ಭೋಜನ ಶಾಲೆ, ಉಳಿದುಕೊಳ್ಳಲು ನೂರಕ್ಕೂ ಹೆಚ್ಚು ಕೋಣೆಗಳನ್ನು ಆಶ್ರಮವು ಹೊಂದಿದೆ.
ಆಶ್ರಮದಲ್ಲಿ ಪ್ರತಿ ವರುಷ ಗಣೇಶ ಚವತಿ, ದತ್ತ ಜಯಂತಿ ಹಾಗೂ ಯುಗಾದಿ ಸಪ್ತಾಹಗಳು ನಡೆಯುತ್ತವೆ. ಗಣೇಶ ಚತುರ್ಥಿಯಂದು ಜನಿಸಿದ ಸದ್ಗುರುಗಳ ಜನ್ಮೋತ್ಸವವನ್ನು ಜ್ಞಾನಸತ್ರದ ರೂಪದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಶಿಷ್ಯರಿಗೆ ಆಧ್ಯಾತ್ಮ ಸಾಹಿತ್ಯವನ್ನು ಪುಸ್ತಕ ರೂಪದಲ್ಲಿ ಕೊಡುವ ವಿಚಾರದಿಂದ ಆಧ್ಯಾತ್ಮ ಭಾಂಡಾರವನ್ನು ಸದ್ಗುರುಗಳು ಸ್ಥಾಪಿಸಿದರು. ಇದರ ಮೂಲಕ ಎಲ್ಲ ವರ್ಗದ ಸಾಧಕರಿಗೂ ಸಹಾಯವಾಗುವಂತಹ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ತಮ್ಮ ಅವತಾರ ಸಮಾಪ್ತಿಯ ಮುನ್ನ ಆಧ್ಯಾತ್ಮ ಕ್ಷೇತ್ರದಲ್ಲಿ ಅತ್ಯುತ್ತಮವೆನಿಸಿರುವ ಮೇರುಕೃತಿ ‘ಸುಲಭ ಆತ್ಮಜ್ಞಾನ’ವನ್ನು ರಚಿಸಿ ತಮ್ಮ ನಿರಂತರ ಅಸ್ತಿತ್ವವೇ ಈ ಗ್ರಂಥದ ಸ್ವರೂಪ ಎಂದು ಸಾರಿದ್ದಾರೆ.
1993ರಲ್ಲಿ ಜಾತಿ, ಮತ, ಪಂಥ, ಪ್ರಾಂತ ಭಾವನೆಗಳಿಗೆ ಅತೀತವಾದ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನಾಧರಿಸಿದ ಭಾರತೀಯ ಸುರಾಜ್ಯ ಸಂಸ್ಥೆಯನ್ನು ಸ್ಥಾಪಿಸಿದರು. ಹಲವೆಡೆಗಳಲ್ಲಿ ಸ್ಥಳೀಯ ಧಾರ್ಮಿಕ ಮುಖಂಡರು, ಬುದ್ಧಿಜೀವಿಗಳು, ವಿಚಾರವಂತರೊಡಗೂಡಿ ಸಮ್ಮೇಳನಗಳನ್ನು ಏರ್ಪಡಿಸಿದರು. ಹಳ್ಳಿಗಳ ಆಮೂಲಾಗ್ರ ಸುಧಾರಣೆಗಾಗಿ ಕೆಲವು ಹಳ್ಳಿಗಳನ್ನು ದತ್ತು ತೆಗೆದುಕೊಂಡರು. ಮಕ್ಕಳಲ್ಲಿ ಭಾರತೀಯ ಸಂಸ್ಕøತಿ ಹಾಗೂ ಆಧ್ಯಾತ್ಮ ತಳಹದಿಯ ಮೂಲಕ ನೀತಿಪಾಠ ನೀಡಬೇಕೆಂದು ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ವಿಚಾರವನ್ನು ಬಿತ್ತಿದರು. ಸ್ವದೇಶಿ ವಸ್ತುಗಳನ್ನು ಬಳಸಿ ಹಾಗೂ ವಿದೇಶಿ ವಸ್ತುಗಳನ್ನು ತಿರಸ್ಕರಿಸಿ ಎಂದು ಸ್ವದೇಶಿ ಪ್ರಚಾರಕ್ಕೆ ಒತ್ತು ಕೊಟ್ಟರು.
ತಮ್ಮ ಸದ್ಗುರು ಶ್ರೀ ಸಿದ್ದರಾಮೇಶ್ವರ ಮಹಾರಾಜರು 1936 ರಲ್ಲಿ ದೇಹತ್ಯಾಗ ಮಾಡಿದ ನಂತರ ಸದ್ಗುರುಗಳ ಕೃಪಾರ್ಶಿವಾದದಿಂದ 1942 ರಲ್ಲಿ ಗುರುಸ್ಥಾನದಲ್ಲಿ ಭೂಷಿತರಾಗಿ 1962 ರವರೆಗೆ ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿಯೇ ಇದ್ದರು. ಶ್ರೀ ಸದ್ಗುರು ಗಣಪತರಾವ ಮಹಾರಾಜರ ಅಮೃತವಾಣಿಯು ಜನರಿಗೆ ಪ್ರಿಯವಾಗಿ ಕರ್ನಾಟಕ, ಮಹಾರಾಷ್ಟ್ರ ಭಾಗದ ಸಹಸ್ರ ಸಹಸ್ರ ಜನರು ಅವರ ಶಿಷ್ಯರಾದರು. ಶಿಷ್ಯರ ಸಾಧನಕ್ಕೆ ಪುಷ್ಠಿಯಾಗುವದಕ್ಕಾಗಿ ಸ್ವಾನುಭವದ ಗ್ರಂಥಗಳನ್ನು ಕನ್ನಡ, ಮರಾಠಿಯಲ್ಲಿ ರಚಿಸಿದರು. ಕೆಲವು ಗ್ರಂಥಗಳು ಹಿಂದಿ, ಇಂಗ್ಲೀಷ, ಭಾಷೆಗೆ ತುರ್ಜುಮೆಯಾದ್ದರಿಂದ ದೇಶ ವಿದೇಶದವರು ಸಹ ಕನ್ನೂರ ಆಶ್ರಮಕ್ಕೆ ಬಂದು ಹೋಗುತ್ತಿದ್ದರು. ಆಜನ್ಮ ಬ್ರಹ್ಮಚಾರಿಗಳಾಗಿ, ಸ್ವಾನುಭವಿಗಳಾಗಿ ಶಿಷ್ಯರ ಕಲ್ಯಾಣ ಬಯಸುತ್ತ ಭಕ್ತರ ಪಾಲಿಗೆ ನಡೆದಾಡುವ ದೇವರೆನಿಸಿದರು.
ಯಾವದೇ ಭೇದಭಾವವಿಲ್ಲದೇ ಎಲ್ಲ ವರ್ಗದ ಜನರನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದ, ಕರ್ನಾಟಕ ಮತ್ತು ಮಹಾರಾಷ್ಟ್ರದ ಸಂತರೆಲ್ಲರಿಗೂ ಬಹು ಆತ್ಮೀಯರಾಗಿದ್ದ ಶ್ರೀ ಗಣಪತರಾವ್ ಮಹಾರಾಜರು 2004 ರಲ್ಲಿ ಭಾದ್ರಪದ ಶಷ್ಠಿಯಂದು ತಮ್ಮ ಇಚ್ಚೆಯಂತೆ ದೇಹತ್ಯಾಗ ಮಾಡಿದರು. ಇಂಥ ಮಹಾತ್ಮರ 107 ನೇ ಜನ್ಮೋತ್ಸವನ್ನು ಗಣೇಶ ಚತುರ್ಥಿಯಂದು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಜಯಂತಿ ಅಂಗವಾಗಿ ಶಾಂತಿಕುಟೀರದಲ್ಲಿ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

loading...

LEAVE A REPLY

Please enter your comment!
Please enter your name here