ಕುರಿಗಳ ಸರಣಿ ಸಾವು: ಗ್ರಾಮಸ್ಥರಲ್ಲಿ ಆತಂಕ

0
54

ಕಾರವಾರ: ತಾಲೂಕಿನ ಅಸ್ನೋಟಿ ಸೇರಿದಂತೆ ಕೆಲ ಭಾಗಗಳಲ್ಲಿ ಕುರಿಗಳಿಗೆ ಮಾರಣಾಂತಿಕ ರೋಗ ಭಾದಿಸಿದೆ. ಕಳೆದ 15 ದಿನಗಳಿಂದ ಕುರಿಗಳು ಒಂದರ ಹಿಂದೆ ಒಂದರಂತೆ ಅಸಹಜವಾಗಿ ಸಾವನಪ್ಪುತ್ತಿದ್ದು, ಇದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಅಸ್ನೋಟಿಯ ದಯಾನಂದ ಕೋಟಾರಕರ್, ಅರ್ಜುನಕೋಟ್‍ದ ಮಹೇಶ್ ನಾಯ್ಕ ಸೇರಿದಂತೆ ಹಲವರು ಸಾಕಿದ್ದ ಕುರಿಗಳು ವಿಚಿತ್ರ ಕಾಯಿಲೆಯಿಂದ ಬಳಲಿ ಸಾವನಪ್ಪುತ್ತಿವೆ. ಕುರಿಯ ಕಿವಿ, ಬಾಯಿ ಹಾಗೂ ಮೂಗಿನಿಂದ ನೀರು ಸೋರುತ್ತಿದೆ. ಇದಲ್ಲದೇ ಕುರಿಗಳು ಆಹಾರ ಸೇವಿಸಲು ಮುಂದಾಗುತ್ತಿಲ್ಲ. ದಷ್ಟಪುಷ್ಟವಾಗಿದ್ದ ಕುರಿಗಳಿಗೂ ಕೂಡ ರೋಗ ಬಾಧಿಸಿ ಇದೀಗ ಜಕ್ಕಲು ಬಡಿದಿವೆ. ಅಲ್ಲದೆ ಈ ಕುರಿಗಳು ಸರಿಯಾಗಿ ಎದ್ದು ನಿಲ್ಲದಷ್ಟು ಅಸಕ್ತವಾಗಿವೆ. ಚಲನವಲನಗಳಲ್ಲಿ ಬದಲಾವಣೆಗಳಾಗಿದ್ದು, ಕುರಿಗಳು ವಿಚಿತ್ರ ರೋಗಕ್ಕೆ ತುತ್ತಾಗಿವೆ.

ತಾಲೂಕಿನ ಕೆಲ ಪ್ರದೇಶಗಳಲ್ಲಿ ಕುರಿಗಳನ್ನು ಹೆಚ್ಚಾಗಿ ಸಾಕುತ್ತಿದ್ದು, ಇದು ಅವರಿಗೆ ಆದಾಯದ ಮೂಲವಾಗಿದೆ. ಇನ್ನು ಕೆಲವರು ಇತರ ಪ್ರಾಣಿಗಳಂತೆ ನಾಲ್ಕೈದು ಕುರಿಗಳನ್ನು ಸಾಕುತ್ತಿದ್ದಾರೆ. ಆದರೆ ಇದೀಗ ಕುರಿಗಳು ಸಾವನಪ್ಪುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ರೋಗವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಅಲ್ಲದೆ ಈಗಾಗಲೇ ಮೃತಪಟ್ಟ ಕುರಿಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಶಿರವಾಡದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿರುವ ವಿದವೆಯರಿಗೆ ಪಶುಸಂಗೋಪನೆಯಿಂದ ಸಹಾಯಧನದಲ್ಲಿ ಸುಮಾರು 18 ಕುರಿಗಳನ್ನು ನೀಡಲಾಗಿದೆ. ಆದರೆ ಕೊಟ್ಟ ಕೆಲ ದಿನಗಳಲ್ಲಿಯೇ ಸುಮಾರು 4 ಕುರಿಗಳು ಮೃತಪಟ್ಟಿದೆ. ಇದಕ್ಕೆ ನಿರ್ಧಿಷ್ಟವಾದ ಕಾರಣ ತಿಳಿದುಬಂದಿಲ್ಲ. ಸ್ಥಳೀಯವಾಗಿ ಬದುಕಬಹುದಾದ ಕುರಿಗಳನ್ನು ನೀಡುವ ಬದಲು ಕಂಬಳಿ ಕುರಿಗಳನ್ನು ನೀಡಿರುವುದರಿಂದ ಕುರಿಗಳು ಸಾವನಪ್ಪಿರುವ ಸಾಧ್ಯತೆ ಇದೆ. ಆದರೆ ಸಂಬಂಧಪಟ್ಟ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಲು ಫೋನ್ ಮಾಡಿದರೆ ಸಿಗುತ್ತಿಲ್ಲ. ಇನ್ನು ಅನೇಕ ಕುರಿಗಳು ಇಂತಹ ಸ್ಥಿತಿಗೆ ಒಳಗಾಗುತ್ತಿದ್ದು, ಕೂಡಲೇ ಪಶುವೈದ್ಯರು ಚಿಕಿತ್ಸೆ ಇಲ್ಲವೆ, ಇವುಗಳ ರಕ್ಷಣೆ ಬಗ್ಗೆ ಮುಂಜಾಗೃತ ಕ್ರಮಗಳನ್ನು ಸೂಚಿಸಬೇಕು ಎಂದು ತಾಲೂಕು ಪಂಚಾಯಿತಿ ಸದಸ್ಯ ಮಾರುತಿ ನಾಯ್ಕ ಆಗ್ರಹಿಸಿದ್ದಾರೆ

loading...