18,000 ಜನರ ಮಾರಣಹೋಮಕ್ಕೆ ಕಾರಣನಾದ ಸೇನಾಧಿಕಾರಿಗೆ ಜೀವಾವಧಿ ಶಿಕ್ಷೆ

0
53

ಹೇಗ್(ನೆದರ್ಲೆಂಡ್ಸ್):  ಬೋಸ್ನಿಯಾದ ಅಂತರ್ಯುದ್ಧದ ವೇಳೆ ಸಾಮೂಹಿಕ ಹತ್ಯಾಕಾಂಡ ಮತ್ತು ಜನಾಂಗೀಯ ನಿರ್ಮೂಲಗಾಗಿ 18,000ಕ್ಕೂ ಹೆಚ್ಚು ಜನರ ಸಾವಿಗೆ ಕಾರಣನಾದ ಅಪರಾಧಕ್ಕಾಗಿ ಬೋಸ್ನಿಯಾ ಸೇನೆಯ ಮಹಾ ದಂಡನಾಯಕ ರಟ್ಕೋ ಮ್ಲಾಡಿಕ್‍ಗೆ ವಿಶ್ವಸಂಸ್ಥೆಯ ನ್ಯಾಯಮಂಡಳಿ ಜೀವಾವಧಿ ಶಿಕ್ಷೆ ವಿಧಿಸಿದೆ. ಸ್ರೆಬ್ರೆನಿಕದಲ್ಲಿ 8,000 ಮುಸ್ಲಿಂ ಪುರುಷರು ಮತ್ತು ಬಾಲಕರನ್ನು ಹತ್ಯೆ ಮಾಡಿರುವುದು ಹಾಗೂ ಬೋಸ್ನಿಯಾ ರಾಜಧಾನಿ ಸರೆಜಾವೋಗೆ 43 ತಿಂಗಳ ಕಾಲ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಷೆಲ್ ಮತ್ತು ಗುಂಡಿನ ದಾಳಿಯಲ್ಲಿ 11,000 ನಾಗರಿಕರು ಮೃತಪಟ್ಟಿದ್ದರು.

74 ವರ್ಷದ ಮ್ಲಾಡಿಕ್ ವಿರುದ್ಧ ಜನಾಂಗೀಯ ಹತ್ಯೆ, ಯುದ್ಧ ಮತ್ತು ಮಾನವೀಯತೆ ವಿರುದ್ಧದ ಅಪರಾಧಗಳು ಸಾಬೀತಾಗಿವೆ. 11 ಗಂಭೀರ ಅಪರಾಧಗಳಲ್ಲಿ 10 ದೃಢಪಟ್ಟಿದೆ ಎಂದು ನ್ಯಾಯಮಂಡಳಿ ಮುಖ್ಯ ನ್ಯಾಯಾಧೀಶ ಅಲ್ಫೋನ್ಸ್ ಓರಿ ತೀರ್ಪಿನಲ್ಲಿ ತಿಳಿಸಿದ್ದಾರೆ. ಸ್ರೆಬ್ರಿನಿಕದಲ್ಲಿ ಮ್ಲಾಡಿಕ್ ನೇತೃತ್ವದ ದೊಡ್ಡ ಸೇನಾಪಡೆಯು ದಾಳಿ ನಡೆಸಿ ಪುರುಷರು ಮತ್ತು ಬಾಲಕರನ್ನು ಮಹಿಳೆಯರಿಂದ ಪ್ರತ್ಯೇಕವಾಗಿ ಬೇರ್ಪಡಿಸಿ ಬಸ್‍ಗಳಲ್ಲಿ ಕರೆದೊಯ್ದರು. ನಂತರ ಅವರನ್ನು ಪ್ರತ್ಯೇಕ ಘಟನೆಗಳಲ್ಲಿ ಸಾಮೂಹಿಕವಾಗಿ ಗುಂಡು ಹಾರಿಸಿ ಕೊಲ್ಲಲಾಯಿತು. ಇದು ದ್ವಿತೀಯ ಮಹಾಸಂಗ್ರಾಮದ ನಂತರ ಯುರೋಪ್‍ನಲ್ಲಿ ನಡೆದ ಅತ್ಯಂತ ಭೀಕರ ನರಮೇಧ ಎಂದು ಪರಿಗಣಿಸಲಾಗಿದೆ.

loading...