ರಾಜ್ಯ ಬರಮುಕ್ತವಾಗಿಸಲು 100 ಕೆರೆಗಳಿಗೆ ನೀರು: ಸಿದ್ದರಾಮಯ್ಯ

0
37

ರಾಯಬಾಗ 21: ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಹಿಂದಿನ ಸರಕಾರಕ್ಕಿಂತ ಹೆಚ್ಚು ಅನುದಾನ ನಮ್ಮ ಸರಕಾರ ನೀಡಿದ್ದು, ರಾಜ್ಯವನ್ನು ಬರಮುಕ್ತ ಮಾಡಲು ರಾಜ್ಯದ 100 ಕೆರೆಗಳನ್ನು ತುಂಬಿಸಲು ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಇದರಿಂದ ಅಂತರಜಲಮಟ್ಟ ಹೆಚ್ಚಾಗುವುದಲ್ಲದೇ, ರೈತರ ಜಮೀನುಗಳು ನೀರಾವರಿ ಸೌಲಭ್ಯ ಪಡೆಯಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಯಬಾಗ ಹಾಗೂ ಕುಡಚಿ ವಿಧಾನಸಭಾ ಕ್ಷೇತ್ರಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯ ಸರ್ವೊತ್ತಮುಖ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟು ಕೆಲಸ ಮಾಡುತ್ತಿದ್ದೇವೆ. ಯಾವದೇ ತಾರತಮ್ಯ ಮಾಡದೇ ಪ್ರತಿಯೊಂದು ವಿಧಾನಸಭೆ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನವನ್ನು ನೀಡಿದ್ದೇವೆ ಎಂದರು.
ಜಲ ಸಂಪನ್ಮೂಲ ಸಚಿವ ಎಮ್.ಬಿ.ಪಾಟೀಲ ಮಾತನಾಡಿ, ರಾಯಬಾಗ ಮತ್ತು ಕುಡಚಿ ಕ್ಷೇತ್ರಗಳ ಅಭಿವೃದ್ಧಿಗಾಗಿ 350 ಕೋಟಿ ರೂ. ಮಂಜೂರು ಮಾಡಿ ಇಂದು ಆ ಎಲ್ಲ ಕಾಮಗಾರಿಗಳಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ಮಾಡಿ ಚಾಲನೆ ನೀಡುತ್ತಿದ್ದಾರೆ. ತಾಲೂಕಿನ 39 ಕೆರೆಗಳನ್ನು ಕೃಷ್ಣಾ ನದಿಯಿಂದ ನೀರನ್ನು ತುಂಬಿಸುವ ಯೋಜನೆಯು ಕಾಂಗ್ರೆಸ್ ಸರಕಾರದ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದರಿಂದ ಬರ ಪೀಡಿತ ಪ್ರದೇಶ ಬರಮುಕ್ತವಾಗಿ ನೀರಾವರಿಯಿಂದ ನಂದನವನವಾಗಲಿದೆ ಎಂದು ಹೇಳಿದರು.
ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಸಂಸದ ಪ್ರಕಾಶ ಹುಕ್ಕೇರಿ, ಮಾಜಿ ಶಾಸಕ ಬಾಳಾಸಾಬ ವಡ್ಡರ, ಬೆಳಗಾವಿ ಕಾಡಾ ಅಧ್ಯಕ್ಷ ಈರಗೌಡ ಪಾಟೀಲ, ಲಖನ ಜಾರಕಿಹೊಳಿ ಆಗಮಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಯಬಾಗ ಶಾಸಕ ಡಿ.ಎಮ್.ಐಹೊಳೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕ.ರಾ.ರ.ಹೆದ್ದಾರಿ ಪ್ರಾಧಿಕಾರ ಉಪಾಧ್ಯಕ್ಷ ಮಹಾವೀರ ಮೊಹಿತೆ, ಧೂಳಗೌಡ ಪಾಟೀಲ, ತೇಜಸ್ವಿನಿ ನಾಯಿಕವಾಡಿ, ತಾ.ಪಂ.ಸದಸ್ಯ ನಾಮದೇವ ಕಾಂಬಳೆ, ಮಹಾದೇವ ಚೌಗುಲೆ, ಅನಂತ ಮೊಹಿತೆ, ಬಿ.ಎನ್.ಬಂಡಗಾರ, ಸುಕುಮಾರ ಕಿರಣಗಿ, ಜಿ.ಪಂ.ಸಿಇಒ ರಾಮಚಂದ್ರನ್ ಆರ್., ಚಿಕ್ಕೋಡಿ ಉಪವಿಭಾಗಾಧಿಕಾರಿ ಗೀತಾ ಕೌಲಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...