ಆಧುನಿಕ ತಾಂತ್ರಿಕ ಸೌಲಭ್ಯ ಸದುಪಯೋಗ ಪಡೆದುಕೊಳ್ಳಿ: ನೀಲಮ್ಮ

0
77

ಕನ್ನಡಮ್ಮ ಸುದ್ದಿ-ವಿಜಯಪುರ: ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ಆಧುನಿಕ ತಾಂತ್ರಿಕ ಸೌಲಭ್ಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ನೀಲಮ್ಮ ಮೇಟಿ ಅವರು ಕರೆ ನೀಡಿದರು.
ವಿಜಯಪುರದ ಹೊರವಲಯದ ಧಾರವಾಡ ಕೃಷಿ ವಿಶ್ವವಿದ್ಯಾಲಯ, ಕೃಷಿ ಇಲಾಖೆ ಇವರ ಆಶ್ರಯದಲ್ಲಿ ಹಿಟ್ನಳ್ಳಿ ಕೃಷಿ ಪ್ರಾದೇಶಿಕ ಸಂಶೋಧನಾ ಕೇಂದ್ರದಲ್ಲಿ ಭಾನುವಾರ ನಡೆದ ಕೃಷಿಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೈತರ ಅನುಕೂಲಕ್ಕಾಗಿ ಇಲ್ಲಿ ಎರಡು ದಿನಗಳ ಕೃಷಿ ಮೇಳ ಆಯೋಜಿಸಿದೆ. ರೈತರಿಗೆ ಬೆಳೆಯಲ್ಲಿ ಅವಶ್ಯಕವಿರುವ ತಾಂತ್ರಿಕ ಸೌಲಭ್ಯಗಳು ಮತ್ತು ಇತರೆ ಎಲ್ಲ ಮಾಹಿತಿಗಳನ್ನು ಕೃಷಿ ಮೇಳದಲ್ಲಿ ಲಭ್ಯವಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಅಧುನಿಕ ತಾಂತ್ರಿಕ ಸೌಲಭ್ಯಗಳ ಸದುಪಯೋಗ ಪಡೆದು, ಕೃಷಿ ಇಳುವರಿ ಹೆಚ್ಚಿಸಿ ಅಣಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ಪಿ.ಬಿರಾದಾರ ಮಾತನಾಡಿ, ಕೃಷಿ ಮೇಳದ ಅಂಗವಾಗಿ ರೈತರಿಗೆ ತಾಂತ್ರಿಕ ಸಲಹೆ ಮತ್ತು ಇತರೆ ಮಾಹಿತಿಗಾಗಿ 120ಕ್ಕೂ ಹೆಚ್ಚು ವಸ್ತು ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಕೃಷಿ ಯಂತ್ರೋಪಕರಣ, ಕೃಷಿ ಸಲಹಾ ಕೇಂದ್ರ, ವಸ್ತು ಪ್ರದರ್ಶನ ಮಳಿಗೆಗಳು, ಫಲಪುಷ್ಪ ಪ್ರದರ್ಶನ ಸೇರಿದಂತೆ ಹಲವು ಮಾಹಿತಿಯನ್ನು ಇಲ್ಲಿ ಲಭ್ಯವಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೃಷಿ ಮೇಳದಲ್ಲಿ ಸಸ್ಯ ತಳಿ ಅಭಿವೃದ್ದಿ ಶಾಸ್ತ್ರ, ಬೇಸಾಯ ಶಾಸ್ತ್ರ, ಮಣ್ಣು ವಿಜ್ಞಾನ, ತೋಟಗಾರಿಕೆ, ರೇಷ್ಮೆ ಕೃಷಿ, ಕೃಷಿ ಅರ್ಥಶಾಸ್ತ್ರ, ಕೃಷಿ ತಾಂತ್ರಿಕತೆ, ಆಹಾರ ವಿಜ್ಞಾನ ಮತ್ತು ಪೋಷಣೆ, ಸಸ್ಯರೋಗ ಶಾಸ್ತ್ರ ಸೇರಿದಂತೆ ಹಲವು ಮಾಹಿತಿಗಳು ಇಲ್ಲಿ ಲಭ್ಯವಿದ್ದು, ರೈತರು ಈ ಎಲ್ಲ ಮಾಹಿತಿಗಳ ಸದುಪಯೋಗ ಪಡೆದು ತಮ್ಮ ಕೃಷಿ ಚಟುವಟಿಕೆ ಸುಧಾರಣೆಗೆ ಅನುಕೂಲ ಮಾಡಿಕೊಳ್ಳಬೇಕು ಎಂದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಈಶ್ವರಚಂದ ಹೊಸಮನಿ ಮಾತನಾಡಿ, ರೈತರ ಬದುಕು ಹಸನಾಗಿಸಲು ಕೃಷಿ ಸಂಶೋಧನಾ ಕೇಂದ್ರ ಹಲವು ರೀತಿಯಲ್ಲಿ ನೆರವಾಗುತ್ತಿದೆ. ಎರಡು ದಿನಗಳ ಕೃಷಿ ಮೇಳದಲ್ಲಿ ಒಕ್ಕಲುತನ ಸುಧಾರಣೆಗೆ ಸಂಬಂಧಪಟ್ಟ ಚಿಂತನ-ಮಂಥನ ನಡೆಯಲಿದೆ. ರೈತರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಕೃಷಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಲ್‌.ಪಾಟೀಲ, ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯ ಬಿ.ಸುಮಿತ್ರಾದೇವಿ, ಸುರೇಶ ಘೊಣಸಗಿ, ಕೃಷಿ ಮಹಾವಿದ್ಯಾಲಯದ ಡೀನ್‌ ಡಾ.ಎಂ.ಕೆ.ಬಿರಾದಾರ ಪಾಟೀಲ, ಕೃಷಿ ವಿಶ್ವವಿದ್ಯಾಲಯ ಸಂಶೋಧನಾ ನಿರ್ದೇಶಕ ಡಾ.ವಿ.ಐ.ಬೆಣಗಿ, ವಿಸ್ತರಣಾ ನಿರ್ದೇಶಕ ಡಾ.ಎಚ್‌.ಬಸಪ್ಪ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.

loading...