ಅಂತರ್ ರಾಜ್ಯ ಎಟಿಎಂ ಕಳ್ಳರ ಬಂಧನ

0
41

ಗದಗ : ಎ.ಟಿ.ಎಂ ದಲ್ಲಿ ಹಣ ಕಳ್ಳತನ ಮಾಡುವದು, ರಸ್ತೆ ಬದಿಯಲ್ಲಿ ನಿಂತು ವಾಹನಗಳನ್ನು ತಡೆದು ಜೀವ ಬೆದರಿಕೆ ಹಾಕಿ ಹಣ ಚಿನ್ನಾಭರಣದ ದೋಚುವ 8 ಜನರ ಅಂತರ್ ರಾಜ್ಯದ ಕಳ್ಳರ ತಂಡವನ್ನು ಗದಗ ಶಹರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರು : ಹರಿಯಾಣ ರಾಜ್ಯದ ಪಲ್‍ವಲ್ ಜಿಲ್ಲೆಯ ಚಿಲ್ಲಿ ನಗರದ ನಿವಾಸಿ ಶಾಬೀರ ಮುಸೂ (29), ಮೂಲತಃ ಬಾಂಬೆಯ ನಿವಾಸಿಯಾಗಿರುವ ಸಧ್ಯ ಹುಬ್ಬಳ್ಳಿ ಕಮರಿಪೇಟೆಯಲ್ಲಿ ನೆಲೆಸಿರುವ ಮಹ್ಮದ್‍ಸೋಹಿಲ್‍ಖಾನ್ (ಸೋನುಖಾನ್) ಮಹ್ಮದ್‍ವಲ್‍ಖಾನ್ (27), ಹಾವೇರಿಯ ಹೊಸ ನಗರದ ನಿವಾಸಿಯಾದ ಸಧ್ಯ ಕಾರವಾರದ ಬಂಗಾರಪ್ಪ ನಗರದ ನೆಲೆಸಿರುವ ಇಸಾಕ್ ನಜೀರ್‍ಅಹ್ಮದ್ ಅತ್ತಾರ (28), ಹುಬ್ಬಳ್ಳಿ ಹೆಗ್ಗೇರಿಯ ನಿವಾಸಿ ಇಮ್ತಿಯಾಜ್ ಗೌಸ್‍ಮೋದಿನ್ ಗೋಕಾಕ (26) ಹಾಗೂ ಅನ್ವರ್ ಮಹ್ಮದ್‍ಅಲಿ ಅನ್ಸಾರಿ (26), ಹಾವೇರಿಯ ನಾಗಿನಮಟ್ಟಿಯ ಮೌಲಾಲಿ ಗೂಡುಸಾಬ ಕರ್ಜಗಿ (36), ಹರಿಯಾಣ ರಾಜ್ಯ ನೋಹು ಜಿಲ್ಲೆಯ ಗುಲಾಲತಾ ಗ್ರಾಮದ ನಿವಾಸಿ ರಫೀಕ್ ಬಸೀರ್ (19) ಹಾಗೂ ಹರಿಯಾಣ ರಾಜ್ಯದ ನೋವು ಜಿಲ್ಲೆಯ ಫೀರೋಜ್‍ಪೂರದ ನಿವಾಸಿ ಶರೀಫ ರೆಹಮಾನ (46) ಎಂಬುವವರು ಗದಗ ಶಹರ ಪೊಲೀಸ್ ಠಾಣೆಯ ಪೋಲೀಸರು ಬಂಧಿಸಿದ್ದಾರೆ.
ಏನೇನು ಜಪ್ತಿ ? : ಬಂಧಿತರಿಂದ ಕೆಎ 27 ಎಂ 7682 ನಂಬರಿನ ಕಾರ್, ಕೆಎ 20 ಎಕ್ಸ್ 7926 ನಂಬರಿನ ಬೈಕ್ ಹಾಗೂ ಗ್ಯಾಸ್ ಕಟರ್ ಮಷಿನ್, ಸುತ್ತಿಗೆ ಹಾಗೂ ಸ್ಕ್ರೂಡ್ರೈವ್ ಸೇರಿದಂತೆ ಇತರ ಸಾಮಗ್ರಿ, ಕಾರದ ಪುಡಿಯ ಪೊಟ್ಟಣವನ್ನು ಜಪ್ತ ಮಾಡಿಕೊಂಡು ಆರೋಪಿತರನ್ನು ಪೊಲೀಸ್ ಕಸ್ಟಡಿಯಲ್ಲಿಟ್ಟು ನ್ಯಾಯಾಲಯದ ಮುಂದೆ ವಿಚಾರಣೆಗೆ ಒಳಪಡಿಸಲಾಗಿದೆ.

ಏಲ್ಲೇಲ್ಲಿ ಕಳ್ಳತನ: ಈ ತಂಡವು ಹುಬ್ಬಳ್ಳಿ ವಿಶಾಲ ನಗರ, ಮುಂಡಗೋಡ, ಕುಷ್ಟಗಿ, ಬೆಳಗಾವಿ ಜಿಲ್ಲೆಯ ಘಟಪ್ರಭ, ಕಲ್ಲೊಳ್ಳಿಯಲ್ಲಿನ ಎಟಿಎಂ ದಲ್ಲಿನ ಹಣ ಕಳ್ಳತನ ಮಾಡಲು ಗ್ಯಾಸ್ ಕಟರ್ ಮುಂತಾದ ಸಾಮಗ್ರಿಗಳನ್ನು ಬಳಕೆ ಮಾಡಿರುವದಾಗಿ ವಿಚಾರಣೆಯ ಕಾಲಕ್ಕೆ ತಿಳಿದು ಬಂದಿದೆ.
ಬಂಧಿತರು ಎಟಿಎಂ ದಲ್ಲಿ ಕಳ್ಳತನ ಮಾಡಿದ 70 ಲಕ್ಷ ರೂ.ಗಳನ್ನು ಕಾರ್ ಹಾಗೂ ಬೈಕ್ ಖರೀದಿಸಿ ಹಣದಿಂದ ಐಷಾರಾಮಿ ಜೀವನ ನಡೆಸಿದ್ದಾರೆ ಎನ್ನಲಾಗಿದೆ. ಈ ತಂಡವು ಮುಂಬೈನ ಎಟಿಎಂ ದಲ್ಲಿ ಗ್ಯಾಸ್ ಕಟರ್ ಬಳಸಿ ಎಟಿಎಂ ದಲ್ಲಿನ ಹಣ ದೋಚಲು ಯತ್ನಿಸುವ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಈ ತಂಡ ಅಲ್ಲಿಂದ ಪರಾರಿಯಾಗಿತ್ತು ಎಂದು ವಿಚಾರಣೆಯ ಕಾಲಕ್ಕೆ ತಿಳಿದು ಬಂದಿದೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪತ್ರಕರ್ತರಿಗೆ ಮಾಹಿತಿ ನೀಡಿದರು.

ಕಳ್ಳರ ತಂಡವನ್ನು ಪತ್ತೆ ಹಚ್ಚಿ ತೀವ್ರ ಕಾರ್ಯಾಚರಣೆ ಮಾಡಿರುವ ಡಿಎಸ್ಪಿ ವ್ಹಿ.ಟಿ.ವಿಜಯಕುಮಾರ ಸೇರಿದಂತೆ ಗದಗ ಶಹರ ಪೊಲೀಸ್ ಠಾಣೆಯ ಸಿಪಿಐ, ಪಿ.ಎಸ್.ಐ ಹಾಗೂ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದ್ದಲ್ಲದೆ ಅವರಿಗೆ ವಿಶೇಷ ಬಹುಮಾನ ನೀಡುವಂತೆ ಹಿರಿಯ ಅಧಿಕಾರಿಗಳ ಗಮನ ಸೆಳೆಯುವದಾಗಿ ಸಂತೋಷಕುಮಾರ ಹೇಳಿದರು.

loading...