ಗಜೇಂದ್ರಗಡ ತಾಲೂಕು ಆಗಿರುವುದು ಸಂತಸ: ಪಾಟೀಲ

0
91

ಗಜೇಂದ್ರಗಡ: ಈ ಭಾಗದ ಬಹುದಿನಗಳ ಬೇಡಿಕೆ ಗಜೇಂದ್ರಗಡ ತಾಲೂಕು ಆಗಿರುವುದು ಸಂತಸ ನೀಡಿದೆ. ಅಲ್ಲದೆ. ಆಡಳಿತಾತ್ಮಕ ಕಚೇರಿ ಪ್ರಾರಂಭಗೊಳ್ಳುವದರಿಂದ ಜನರ ಸಮಸ್ಯೆಗಳನ್ನು ತ್ವರಿತವಾಗಿ ಹಾಗೂ ಪರಿಣಾಮಕಾರಿಯಾಗಿ ಪರಿಹಾರ ಕಂಡುಕೊಳ್ಳಲು ಅನುಕುಲವಾಗಲಿದೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಪಟ್ಟಣದ ಎಸ್.ಎಂ.ಭೂಮರಡ್ಡಿ ಅವರ ನಿವಾಸದಲ್ಲಿ ಬುಧವಾರ ನೂತನ ತಹಸೀಲ್ದಾರ ಕಚೇರಿಯನ್ನು ಉದ್ಘಾಟಿಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಭಾಗದ ರೈತರಿಗೆ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಆಡಳಿತ ಚುರುಕುಗೊಳಿಸುವ ಉದ್ಧೇಶದಿಂದ ಉತ್ತರ ಕರ್ನಾಟಕದ ದೊಡ್ಡ ಜಿಲ್ಲೆ ಹಾಗೂ ತಾಲೂಕಾ ಕೇಂದ್ರಗಳನ್ನು ವಿಂಗಡಿಸಿ ತಾಲೂಕಾ ಕೇಂದ್ರಗಳಾಗಿ ಮಾಡುವ ಮೂಲಕ ಜನರಿಗೆ ಸರ್ಕಾರದ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ಸಕಾಲದಲ್ಲಿ ಮನೆ ಬಾಗಿಲಿಗೆ ತಲುಪಿಸಲು ಸಹಾಯಕವಾಗುತ್ತದೆ. ಆದರೆ ಕೆಲವರು ತಾಲೂಕಾ ಕೇಂದ್ರದಿಂದ ಏನು ಪ್ರಯೋಜನ ಎನ್ನುವ ಪ್ರಶ್ನೆಯನ್ನು ಕೇಳುತ್ತಿರುವುದು ಅವರಿಗೆ ಆಡಳಿತದ ಅನುಭವವಿಲ್ಲ ಎನ್ನುವುದನ್ನು ಸ್ಪಷ್ಟ ಪಡಿಸುತ್ತಿದೆ ಎಂದರು.

ಹಿಂದಿನ ಬಿಜೆಪಿ ಅಂತಿಮ ವೇಳೆಯಲ್ಲಿ ತಾಲೂಕಾ ಕೇಂದ್ರಗಳನ್ನು ಘೋಷಿಸುವ ಮೂಲಕ ರಾಜಕೀಯ ನಡೆ ಪ್ರದರ್ಶೀಸಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ತಾಲೂಕಾ ಕೇಂದ್ರದಲ್ಲಿ ತಹಸೀಲ್ದಾರ ಅವರನ್ನು ನೇಮಕ ಮಾಡುವ ಮೂಲಕ ಎರಡು ದಶಕಗಳಿಂದ ಈ ಭಾಗದ ಜನತೆ ಮಾಡಿದ ಹೋರಾಟಕ್ಕೆ ಸ್ಪಂದಿಸುವುದರ ಜೊತೆಗೆ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳಲು ದಿಟ್ಟಿ ಹೆಜ್ಜೆಯನ್ನಿಟ್ಟಿದೆ ಎಂದರು.
ಈ ವೇಳೆ ಶಾಸಕ ಜಿ.ಎಸ್.ಪಾಟೀಲ,ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ ಸೇರಿದಂತೆ ಇತರರು ಇದ್ದರು.

ರಾಜ್ಯ ಸರ್ಕಾರವು ಮೂಢನಂಬಿಕೆ ಹಾಗೂ ಕಂದಾಚಾರಕ್ಕೆ ಕಡಿವಾಣ ಹಾಕಲು ಕಾನೂನು ಜಾರಿಗೆ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಪಟ್ಟಣದ ತಹಸೀಲ್ದಾರ ಕಚೇರಿ ಉದ್ಘಾಟನಾ ಸಂದರ್ಭದಲ್ಲಿ ಶಾಸಕ ಜಿ.ಎಸ್.ಪಾಟೀಲ ಅವರು, ಕಚೇರಿ ಮುಂಭಾಗದಲ್ಲಿ ಕುಂಬಳಕಾಯಿ ಒಡೆದು ಕುಂಕುಮ ಸಮರ್ಪಿಸಿ ಕಚೇರಿ ಒಳಗೆ ಪ್ರವೇಶ ಮಾಡಿದ್ದು ಮೂಢನಂಬಿಕೆಯಲ್ಲವೇ ಎಂದು ಸಚಿವ ಎಚ್.ಕೆ.ಪಾಟೀಲ ಅವರನ್ನು ಪ್ರಶ್ನಿಸಿದಾಗ, ಸಮಾಜದಲ್ಲಿ ನಾವು ಮಾನಸಿಕವಾಗಿ ಪರಿವರ್ತನೆಯಾಗಬೇಕಿದೆ. ಅಲ್ಲದೆ, ಸಾಮಾಜಿಕ ಬಂಧನದೊಳಗೆ ಶತ ಶತಮಾನಗಳಿಂದ ಸಿಲುಕಿ ಹಾಕಿಕೊಂಡಿದ್ದೇವೆ. ಹೀಗಾಗಿ ಕಾಲಕ್ಕೆ ತಕ್ಕಂತೆ ಬರುವ ಸಲಹೆ ಹಾಗೂ ವಿಚಾರಗಳನ್ನು ಅಳವಡಿಸಿಕೊಂಡು ಮೌಢ್ಯವಿರೋಧಿ ಆಚರಣೆಗಳನ್ನು ವಿರೋಧ ಮಾಡುವ ಹೊಸ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಜಾಗತಿಕ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ನಾವು ಕಾಣಿಸಿಕೊಳ್ಳಲಿದ್ದೇವೆ ಎಂದರು.

loading...