ಪರಸ್ಪರ ಶಾಂತಿ, ಸೌಹಾರ್ಧತೆಯ ಜೀವನ ನಡೆಸಲು ಕ್ರೀಡೆ ಸಹಕಾರಿ: ದೇಶಪಾಂಡೆ

0
71

ಕನ್ನಡಮ್ಮ ಸುದ್ದಿ-ದಾಂಡೇಲಿ: ಪರಸ್ಪರ ಶಾಂತಿ, ಸೌಹಾರ್ಧತೆಯ ಜೀವನ ನಡೆಸಲು ಕ್ರೀಡೆ ಸಹಕಾರಿ. ಈ ನಿಟ್ಟಿನಲ್ಲಿ ಕ್ರೀಡೆಗೆ ಹೆಚ್ಚು ಹೆಚ್ಚು ಉತ್ತೇಜನ ಕೊಡುವ ಕೆಲಸವಾಗಬೇಕು. ಜೀವನ ಒಂದು ಕ್ರೀಡೆ ಇದ್ದಂತೆ, ರಾಜಕಾರಣಿಗಳಿಗೆ ಚುನಾವಣೆ ಒಂದು ಕ್ರೀಡೆ, ವಿದ್ಯಾರ್ಥಿಗಳಿಗೆ ಪರೀಕ್ಷೆ ಒಂದು ಕ್ರೀಡೆ ಇದ್ದಂತೆ, ಮಾನವ ಒಂದಿಲ್ಲಾ ಒಂದು ರೀತಿಯಲ್ಲಿ ಕ್ರೀಡೆಯಲ್ಲಿ ಭಾಗವಹಿಸುತ್ತಾನೆ ಎಂದು ಸಚಿವ ಆರ್‌.ವಿ ದೇಶಪಾಂಡೆ ನುಡಿದರು.
ಅವರು ನಗರದ ಒಳಕ್ರೀಡಾಂಗಣದಲ್ಲಿ ಶನಿವಾರಂದು ಏರ್ಪಡಿಸಲಾದ ರಾಜ್ಯ ಮಟ್ಟದ ಬ್ಯಾಡ್‌ಮಿಟನ್‌ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆ ಜಾತಿ ಮತ ಭೇದ ಇಲ್ಲದೆ ಭಾಗವಹಿಸುವ ಸ್ಪೂರ್ತಿಯನ್ನು ಕ್ರೀಡಾಪಟುಗಳಿಗೆ ನೀಡುತ್ತದೆ ಕ್ರೀಡೆ ಸಮಾಜದಲ್ಲಿ ಸೌಹಾರ್ದತೆಯಿಂದ ಬಾಳುವ ಸಂದೇಶವನ್ನು ನೀಡುತ್ತದೆ ಎಂದು ಅವರು ನುಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಧಾರವಾಡದ ಅಂತರ ರಾಷ್ಟ್ರೀಯ ಖ್ಯಾತಿಯ ಬ್ಯಾಡ್ಮಿಟನ್‌ ಆಟಗಾರ ಅಭಿಷೇಕ ಯಲಿಗಾರ ಕ್ರೀಡಾ ಪಟುಗಳಲ್ಲಿ ಗೆಲುವಿನ ಗುರಿಯೊಂದಿಗೆ ತಾಳ್ಮೆಯ ಕಠಿಣ ಪರಿಶ್ರಮವು ಅತಿ ಮುಖ್ಯ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ದಾಂಡೇಲಿ ಬ್ಯಾಡ್ಮಿಟನ್‌ ಸಂಘದ ಅಧ್ಯಕ್ಷ ಪ್ರಕಾಶ ಶೆಟ್ಟಿ ಮೂರು ವರ್ಷಗಳಿಂದೇ ಆರಂಭಗೊಂಡ ತಮ್ಮ ಸಂಘ ಈ ಬಾರಿ ಮೊಟ್ಟ ಮೊದಲಿಗೆ ರಾಜ್ಯ ಮಟ್ಟದ ಪಂದ್ಯಾವಳಿಯನ್ನು ಏರ್ಪಡಿಸಿದೆ. ಪಂದ್ಯಾವಳಿಯಲ್ಲಿ 80 ತಂಡಗಳು ಭಾಗವಹಿಸುತ್ತಿವೆ ಎಂದು ತಿಳಿಸಿದರು. ವೇದಿಕೆಯಲ್ಲಿ ವಿಧಾನ ಪರಿಷತ್ತ ಸದಸ್ಯ ಎಸ್‌.ಎಲ್‌. ಘೋಟ್ನೆಕರ್‌, ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕೆ, ಸಂಘದ ಸಂಘಟನಾ ಕಾರ್ಯದರ್ಶಿ ಡಾ. ವಾಸಿಕ್‌ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ವಿಷ್ಣು ಮೂರ್ತಿ ರಾವ್‌ ಪ್ರಾರ್ಥಿಸಿದರು. ಸಲ್ಮಾ ಬೈಮಾ ಸ್ವಾಗತಿಸಿದರು. ವಿನಯ ಪರಿಚಯಿಸಿದರು. ಸಂದೇಶ ಜೈನ ನಿರೂಪಸಿದರು. ಅಗಸ್ಟಿನ್‌ ಕಾಳೆ ವಂದಿಸಿದರು.

loading...