ದೇಶೀಯ ತಳಿಗಳಿಗೆ ಮಹತ್ವ ನೀಡಿ : ಸುಜಾತಾ

0
58

ಕನ್ನಡಮ್ಮ ಸುದ್ದಿ ಅಂಕೋಲಾ: ದೇಶೀಯ ತಳಿಯ ಜಾನುವಾರುಗಳನ್ನು ಉಳಿಸಿ ಬೆಳೆಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ದೇಶೀಯ ತಳಿಯ ಗೋ ಮೂತ್ರದಿಂದ ವಿವಿಧ ಉತ್ಪನ್ನಗಳನ್ನು ಸಿದ್ಧಪಡಿಸಲು ಉತ್ತಮ ಅವಕಾಶಗಳಿದ್ದು, ಸದ್ಬಳಕೆ ಮಾಡಿಕೊಳ್ಳಬೇಕಾದ ಅಗತ್ಯತೆಯಿದೆ ಎಂದು ತಾಲೂಕು ಪಂಚಾಯತ ಅಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು. ಅವರು ತಾಲೂಕಿನ ಬೆಳಸೆ ಗ್ರಾಮ ಪಂಚಾಯತ ವ್ಯಾಪ್ತಿಯ ಶಿರೂರಿನ ಶ್ರೀ ಬೀರ ದೇವಸ್ಥಾನದ ಹತ್ತಿರ ಪಶು ಸಂಗೋಪನೆ ಇಲಾಖೆ, ಜಿ.ಪಂ., ತಾ.ಪಂ., ಗ್ರಾ.ಪಂ. ಆಶ್ರಯದಲ್ಲಿ ಹಮ್ಮಿಕೊಂಡ ದೇಶೀಯ ತಳಿಗಳ ಜಾನುವಾರು ಪ್ರದರ್ಶನ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕು ಪಂಚಾಯತ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಡಿ. ನಾಯ್ಕ ಮಾತನಾಡಿ, ಕೃಷಿಯೊಂದಿಗೆ ಹೈನುಗಾರಿಕೆಯನ್ನು ಉದ್ಯೋಗವನ್ನಾಗಿಸಿಕೊಳ್ಳುವ ಮೂಲಕ ಉತ್ತಮ ಆದಾಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು. ತಾಲೂಕು ಪಂಚಾಯತ ಸದಸ್ಯ ಬೀರಾ ಗೌಡ, ಶಾಸಕ ಆಪ್ತ ಕಾರ್ಯದರ್ಶಿ ಗಣಪತಿ ಗುನಗಾ ಮಾತನಾಡಿದರು. ಪಶುವೈದ್ಯ ಡಾ. ವಾಸು ಗೌಡ, ಗ್ರಾಮ ಪಂಚಾಯತ ಸದಸ್ಯರಾದ ರಮೇಶ ಗೌಡ, ಅಶೋಕ ಗೌಡ ಉಪಸ್ಥಿತರಿದ್ದರು. ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಕೃಷ್ಣಮೂರ್ತಿ ಹೆಗಡೆ ಸ್ವಾಗತಿಸಿದರು. ಉದಯ ಗೌಡ ನಿರೂಪಿಸಿದರು. ಹಿಲ್ಲೂರು ಪಶು ವೈದ್ಯಾಧಿಕಾರಿ ಡಾ. ಚಂದನ ವಂದಿಸಿದರು. ಉತ್ತಮವಾಗಿ ಜಾನುವಾರು ಸಾಕಿದ ಕೃಷಿಕರಿಗೆ ಬಹುಮಾನ ವಿತರಿಸಲಾಯಿತು. ಆಕಳು ವಿಭಾಗದಲ್ಲಿ ಕ್ರಮವಾಗಿ ಬೊಮ್ಮಯ್ಯ ಸುಕ್ರು ಹರಿಕಾಂತ, ಸಣ್ಣು ಕುಸ್ಲು ಗೌಡ, ಸುಕ್ರು ತುಳಸು ಗೌಡ, ಕರುಗಳ ವಿಭಾಗದಲ್ಲಿ ಸುಕ್ರು ತುಳಸು ಗೌಡ, ಮಹಾಬಲೇಶ್ವರ ಕಾನು ಗೌಡ, ಗಂಗಾಧರ ದೇವು ಗೌಡ, ಎತ್ತುಗಳ ವಿಭಾಗದಲ್ಲಿ ಬುಧವಂತ ಸುಕ್ರು ಗೌಡ, ನಾಗಪ್ಪ ಕುಸ್ಲು ಗೌಡ, ಪಾಂಡುರಂಗ ತಿಮ್ಮ ಗೌಡ, ಹೋರಿಗಳ ವಿಭಾಗದಲ್ಲಿ ಸಣ್ಣು ಕುಸ್ಲು ಗೌಡ, ಉತ್ತಮ ತಿಮ್ಮಾ ಗೌಡ, ಭೈರು ಸುಕ್ರು ಗೌಡ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ಪಡೆದುಕೊಂಡರು.

loading...