ಹಕ್ಕುಪತ್ರ, ನಿವೇಶನ ನೀಡಲು ಆಗ್ರಹಿಸಿ ಪ್ರತಿಭಟನೆ

0
48

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಪಟ್ಟಣದ ಜನತಾ ಪ್ಲಾಟ್‌ ಹಾಗೂ ಉಣಚಗೇರಿ ಹೋರ ವಲಯದಲ್ಲಿ ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡಿರುವ ನಿವಾಸಿಗಳು ಕರ್ನಾಟಕ ಪ್ರಾಂತ ಕೂಲಿಕಾರರ ಸಂಘದ ನೇತೃತ್ವದಲ್ಲಿ ಹಕ್ಕುಪತ್ರ ಹಾಗೂ ನಿವೇಶನಕ್ಕೆ ಆಗ್ರಹಿಸಿ ಪುರಸಭೆ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಈ ಹಿಂದೆ ಪುರಸಭೆ ಆವರಣದಲ್ಲಿ, ವಿಶೇಷ ತಹಸೀಲ್ದಾರ್‌ ಕಚೇರಿ ಎದುರು, ತಹಸೀಲ್ದಾರ್‌ ಕಚೇರಿ ಹೀಗೆ ಹತ್ತಾರು ಸ್ಥಳಗಳಲ್ಲಿ ಒಂದು ಮನೆ ನೀಡಿ ಎಂದು ಹತ್ತಾರು ಬಾರಿ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹ ನಡೆಸಿದ ವೇಳೆಯಲ್ಲಿ ಸ್ಥಳೀಯ ಹಾಗೂ ತಾಲೂಕಾ ಅಧಿಕಾರಿಗಳು ಮತ್ತು ಚುನಾಯಿತ ಸದಸ್ಯರು ಕೇವಲ ಭರವಸೆ ನೀಡುತ್ತಾ ಬಂದಿದ್ದಾರೆ ಹೊರತು ಸಮಸ್ಯೆಗೆ ಪರಿಹಾರ ನೀಡುವಲ್ಲಿ ವಿಫಲವಾಗಿದ್ದಾರೆ. ಪರಿಣಾಮ ನಮ್ಮ ಜೀವನ ಪೂರ್ತಿ ಸೂಕ್ತ ಸೂರಿಲ್ಲದೆ ಅಭದ್ರತೆಯ ನಡುವೆಯೇ ಜೀವನ ಸಾಗಿಸಿದ್ದೇವೆ. ಹೀಗಾಗಿ ನಮ್ಮ ಮಕ್ಕಳಿಗಾದರೂ ಸಾಮಾಜಿಕ ಭದ್ರತೆಗಾಗಿ ಒಂದು ಮನೆ ನೀಡಿ ಎಂದು ಒತ್ತಾಯಿಸಿದರು.
ನಿವಾಸಿಗಳ ಅಹವಾಲು ಆಲಿಸಿದ ಬಳಿಕ ಶಾಸಕ ಜಿ.ಎಸ್‌.ಪಾಟೀಲ ಮಾತನಾಡಿ, ಈಗಾಗಲೇ ಉಣಚಗೇರಿ ಗ್ರಾಮದ ಹೊರ ವಲಯದಲ್ಲಿ ಆಶ್ರಮ ಸಮಿತಿಯಿಂದ ನಿವೇಶನಗಳ ಗುರಿತಿಸುವ ಕಾರ್ಯವು ಮುಂದಿನ ವಾರಾಂತ್ಯದೊಳಗೆ ಮುಗಿಯಲಿದೆ. ಈ ಹಿಂದೆ ನೀಡಿದ್ದ ಭರವಸೆಯಂತೆ ಅಲ್ಲಿ ಅಕ್ರಮವಾಗಿ ಗುಡಿಸಲು ಹಾಕಿಕೊಂಡಿದ್ದ ನಿವಾಸಿಗಳ ಪಟ್ಟಿಯೂ ಸಹ ಪುರಸಭೆ ಅಧಿಕಾರಿಗಳ ಬಳಿಯಲ್ಲಿದೆ. ಹೀಗಾಗಿ ಅವರಿಗೆ ಖಂಡಿತವಾಗಿ ಸೂಕ್ತ ನಿವೇಶನ ನೀಡಲಾಗುವುದು ಎಂದ ಅವರು, ಈ ಹಿಂದೆ ಜನತಾ ಪ್ಲಾಟ್‌ನಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ನೀಡಲು ಆಡಳಿತ ಮುಂದಾಗಿತ್ತು. ಆದರೆ ಕೆಲವರು ಒಪ್ಪದ ಪರಿಣಾಮ ಪರ್ಯಾಯ ವ್ಯವಸ್ಥೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಅವೈಜ್ಞಾನೀಕವಾಗಿ ನಿರ್ಮಿಸಲಾಗಿರುವ ಗುಡಿಸಲುಗಳಿಗೆ ಮನೆ ನಿರ್ಮಿಸಿ ಕೊಡಲು ರಾಜೀವ್‌ ಗಾಂಧಿ ವಸತಿ ನಿಯಮದಲ್ಲಿ ಅವಕಾಶವಿಲ್ಲ. ಆದ್ದರಿಂದ ಜನತಾ ಪ್ಲಾಟ್‌ನಲ್ಲಿ ಮನೆಯಿಲ್ಲದವರು ಬೇರೆಡೆ ಸ್ಥಳಾಂತರವಾಗಲು ಒಪ್ಪಿದರೆ ಮುಂದಿನ ಆಶ್ರಯ ಸಮಿತಿಯ ಸಭೆಯಲ್ಲಿ ಅವರಿಗೆ ಸೂಕ್ತ ಜಾಗದಲ್ಲಿ ಮನೆ ನಿರ್ಮಿಸಿಕೊಡುವ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪುರಸಭೆ ಅಧ್ಯಕ್ಷೆ ಸುಜಾತಾ ಚುಂಚಾ, ಸದಸ್ಯರಾದ ಶಿವರಾಜ ಘೋರ್ಪಡೆ, ಎಂ.ಎಸ್‌.ಹಡಪದ, ಪ್ರಭು ಚವಡಿ, ಅಶೋಕ ವನ್ನಾಲ, ಹಸನ ತಟಗಾರ, ಮುಕ್ತುಂಭಿ ಹಣಗಿ, ಮುಖ್ಯಾಧಿಕಾರಿ ಹನಮಂತಮ್ಮ ನಾಯಕ, ಎಂ.ಬಿ.ಒಂಟಿ, ಸಿವಿ.ಕುಲಕರ್ಣಿ, ರಾಘವೇಂದ್ರ ಮಂತಾ, ಮಾರುತಿ ಕಲ್ಲೊಡ್ಡರ, ಬಾಲು ರಾಠೋಡ ಸೇರಿದಂತೆ ಇತರರು ಇದ್ದರು.

loading...