ಶಾಂತಿ, ಸೌಹಾರ್ಧತೆಗೆ ಒತ್ತು ನೀಡಲು ಎಲ್ಲಮ್ಮ ಮರಿಸ್ವಾಮಿ ಕರೆ

0
70

ಕನ್ನಡಮ್ಮ ಸುದ್ದಿ-ಭಟ್ಕಳ: ದೇಶದಲ್ಲಿ ಹಿಂದೂ-ಮುಸ್ಲಿಮರು ಶಾಂತಿ ಸೌಹಾರ್ಧತೆಗೆ ಸಹಕರಿಸಬೇಕೆಂದು ಭಟ್ಕಳ ಕ್ಷೇತ್ರ ಸಂಪನ್ಮೂಲ ಸಂಯೋಜಕಿ ಎಲ್ಲಮ್ಮ ಮರಿಸ್ವಾಮಿ ಕರೆ ನೀಡಿದರು.
ಅವರು ಇಲ್ಲಿನ ರಾಯಕ್‌ ಓಕ್‌ ಹೋಟೆಲ್‌ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ ಮಹಿಳಾ ಘಟಕ ಹಾಗೂ ಅಲ್‌-ಕೌಸರ್‌ ಗಲ್ಸ್‌ರ್ ಕಾಲೇಜ್‌ ಜಂಟಿಯಾಗಿ ಆಯೋಜಿಸಿದ್ದ ಕೋಮುಸೌಹಾರ್ಧತೆ ಹಾಗೂ ಹಿಂದು-ಮುಸ್ಲಿಂ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮಹಿಳೆ ಶಿಕ್ಷಿತಳಾದರೆ ಇಡಿ ಸಮುದಾಯ ಶಿಕ್ಷಣ ಪಡೆದಂತಾಗುತ್ತದೆ. ಶಿಕ್ಷಣದಿಂದಾಗಿ ಸಮಾಜದ ಆಗುಹೋಗುಗಳ ಅರಿವಾಗುತ್ತದೆ. ಆದ್ದರಿಂದ ಸಮಾಜದಲ್ಲಿ ಶಾಂತಿ ಸೌಹಾರ್ಧತೆ ಮೂಡಬೇಕಾದರೆ ನಮ್ಮಲ್ಲಿ ಶಿಕ್ಷಣವೆನ್ನುವುದು ಅತಿ ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿಯ ಕುಲ್ಸುಮ್‌ ಅಬೂಬಕರ್‌, ಇಸ್ಲಾಮ್‌ ಧರ್ಮ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದು ಪರಸ್ಪರರು ಶಾಂತಿ ಸೌಹಾರ್ಧತೆಯಿಂದ ಬದುಕುವುದಕ್ಕೆ ಕುರ್‌ಆನ್‌ ಹೆಚ್ಚಿನ ಆಧ್ಯತೆ ನೀಡಿದೆ. ಮಾನವ ಹಕ್ಕುಗಳನ್ನು ಪಾಲಿಸುವಂತಾಗಬೇಕು, ಮನಷ್ಯ ಪ್ರೇಮವನ್ನು ಬೆಳೆಸಿಕೊಳ್ಳಬೇಕು, ಸಕಲ ಧರ್ಮದ ಅನುಯಾಯಿಗಳು ಪರಸ್ಪರರನ್ನು ಅರಿತುಕೊಳ್ಳುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಅಂಜುಮನ್‌ ಬಾಲಕೀಯರ ಪ್ರೌಢಶಾಲೆಯಲ್ಲಿ 37 ವರ್ಷ ಸೇವೆಸಲ್ಲಿಸಿ ನಿವೃತ್ತರಾಗಿರುವ ದೈಹಿಕ ಶಿಕ್ಷಣ ಶಿಕ್ಷಕಿ ಶಶಿಕಲಾ ರನ್ನು ಸನ್ಮಾನಿಸಿ ಗೌರವಿಸಲಾಯಿತು. ಸರಕಾರಿ ಉರ್ದು ಪ್ರೌಢಶಾಲೆ ಜಾಮಿಯಾ ಜಾಲಿಯ ಮುಖ್ಯಾಧ್ಯಾಪಕಿ ನಯನ, ಜ.ಇ.ಹಿಂದ್‌ ಭಟ್ಕಳ ಮಹಿಳಾ ಸಂಚಾಲಕಿ ಫೌಝಿಯಾ ಶಕೀಲ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಲ್‌ ಕೌಸರ್‌ ಗಲ್ಸ್‌ರ್ ಕಾಲೇಜು ವಿದ್ಯಾರ್ಥಿನಿ ತಬಸ್ಸುಮ್‌ ರ ಕುರ್‌ಆನ್‌ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸಭಿಹಾ ಫರೂಖ್‌ ಕೌಡಾ ಕನ್ನಡದಲ್ಲಿ ಅನುವಾದಿಸಿದರು. ಫೌಝಿಯಾ ತನ್ವೀರ್‌ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಜಮಾಅತೆ ಇಸ್ಲಾಮಿ ಹಿಂದ್‌ ಉತ್ತರಕನ್ನಡ ಜಿಲ್ಲಾ ಮಹಿಳಾ ಸಂಚಾಲಕಿ ನಬೀರಾ ಮೊಹತೆಶಮ್‌ ಧನ್ಯವಾದ ಅರ್ಪಿಸಿದರು.

loading...