ಭಾರಿ ಸುರಿದ ಮಳೆ-ಕೆಸರಿನ ಗದ್ದೆಯಾದ ರಸ್ತೆ

0
60

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ರಾತ್ರಿ ಎರಡು ತಾಸಿಗೂ ಹೆಚ್ಚು ಕಾಲ ಮಳೆ ಸುರಿದ ಪರಿಣಾಮ ದ್ರಾಕ್ಷಿ ಹಾಗೂ ಮಾವು ಬೆಳೆಗಾರರಲ್ಲಿ ಸ್ವಲ್ಪ ಮಟ್ಟಿನ ಆಂತಕ ಮೂಡಿಸಿದರೆ ಇತ್ತ ಸ್ಥಳೀಯ ದುರ್ಗಾ ವೃತ್ತದಿಂದ ಬಾಲಕಿಯರ ಮಾದರಿ ಶಾಲೆಯ ವರೆಗಿನ ರಸ್ತೆ ಕೆಸರಿನ ಗದ್ದೆಯಾದ ಹಿನ್ನಲೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಪಟ್ಟಣದ ದುರ್ಗಾವೃತ್ತದಿಂದ ಹಿಡಿದು ಪುರಸಭೆ ಉದ್ಯಾನವನದ ವರೆಗೆ ನಗರೋತ್ಥಾನ ಅಡಿಯಲ್ಲಿ ಅಂದಾಜು ರು.1.63 ಕೋಟಿ ವ್ಯಚ್ಚದಲ್ಲಿ ಕಳೆದ ಎರಡ್ಮೂರು ವಾರಗಳಿಂದ ನೂತನವಾಗಿ ಡಾಂಬರು ರಸ್ತೆ ನಿರ್ಮಾಣ ಹಿನ್ನಲೆಯಲ್ಲಿ ಗುತ್ತಿಗೆದಾರರು ಅಗೆದ ರಸ್ತೆಯಲ್ಲಿ ಅಪಾರ ಪ್ರಮಾಣದ ಮಳೆ ನೀರು ಸಂಗ್ರಹವಾಗಿತ್ತು. ಪರಿಣಾಮ ರಸ್ತೆಯ ಅಕ್ಕಪಕ್ಕದಲ್ಲಿರುವ ಮನೆಯ ನಿವಾಸಿಗಳು ಹಾಲು, ತರಕಾರಿ ಸೇರಿದಂತೆ ಇತರ ಕೆಲಸ ಕಾರ್ಯಗಳಿಗೆ ಪರದಾಡುವಂತಾಗಿತ್ತು.
ಪಟ್ಟಣದ ದುರ್ಗಾವೃತ್ತದಿಂದ ಕೊಳ್ಳಿಯವರ ಕತ್ರಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಗುತ್ತಿಗೆದಾರರು ಮಂದಗತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೆ ರಸ್ತೆಯನ್ನು ಅವೈಜ್ಞಾನೀಕ ಮಾದರಿಯಲ್ಲಿ ಅಗೆದಿರುವ ಪರಿಣಾಮ ರಸ್ತೆಯಲ್ಲಿನ ಧೂಳೂ ಸಂಪೂರ್ಣವಾಗಿ ಅಂಗಡಿಯನ್ನು ಆವರಿಸುತ್ತಿರುವುದು ಒಂದೆಡೆಯಾದರೆ ಇತ್ತ ಹೆಚ್ಚಾಗಿ ಮದುವೆ ಸೀಜನ್‍ಯಿರುವದರಿಂದ ಈ ರಸ್ತೆಯಲ್ಲಿನ ಬಟ್ಟೆ ವ್ಯಾಪಾರಸ್ಥರು, ಬೆಳ್ಳಿ ಮತ್ತು ಬಂಗಾರ, ಕಿರಾಣಿ ಹಾಗೂ ಇತರ ಸಣ್ಣಪುಟ್ಟ ಅಂಗಡಿಕಾರರ ವ್ಯಾಪಾರ ವಹಿವಾಟಿಗೆ ರಸ್ತೆ ನಿರ್ಮಾಣ ಕಾಮಗಾರಿಯು ತೀವ್ರ ಅಡಚಣೆಯುಂಟಾಗಿದೆ.

ಅಲ್ಲದೆ ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿ ರಸ್ತೆಯು ಸಂಪೂರ್ಣವಾಗಿ ಕೊಳಚೆಗುಂಡಿಯಾದ ಪರಿಣಾಮ ಈ ಮಾರ್ಗದಲ್ಲಿ ಬೆಳಿಗ್ಗೆ ಸಂಚರಿಸಲು ಮುಂದಾಗಿದ್ದ ವಾಹನ ಸವಾರರು ಬೈಕನ್ನು ತಳ್ಳಿಕೊಂಡು ಹೋಗುವ ದುಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪುರಸಭೆ ಮುಖ್ಯಾಧಿಕಾರಿ ಹನಮಂತಮ್ಮ ನಾಯಕ ಅವರು ಪೌರ ಕಾರ್ಮಿಕರಿಗೆ ರಸ್ತೆಯಲ್ಲಿ ಸಂಗ್ರಹವಾಗಿದ್ದ ಮಳೆ ನೀರನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸೂಚಿಸಿದರು. ಅಲ್ಲದೆ ದುರ್ಗಾವೃತ್ತದಿಂದ ನಡೆಯುತ್ತಿರುವ ನಗರೋತ್ಥಾನ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಿ ಎಂದು ಸಾರ್ವಜನಿಕ ವಲಯದಲ್ಲಿ ಒತ್ತಡ ಕೇಳಿ ಬಂದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಈವರೆಗೂ ಇತ್ತ ಗಮನ ನೀಡದಿರುವುದಕ್ಕೆ ಸ್ಥಳೀಯ ವ್ಯಾಪಾರಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಪಟ್ಟಣದ ದುರ್ಗಾವೃತ್ತದಿಂದ ಪುರಸಭೆ ಉದ್ಯಾನವನದ ವರೆಗೆ ನೂತನವಾಗಿ ನಿರ್ಮಾಣವಾಗುತ್ತಿರುವ ಡಾಂಬರು ರಸ್ತೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ರಾತ್ರಿ ಸಮಯದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಜತೆಗೆ ಈಗ ಕಾಮಗಾರಿಯನ್ನು ಹಂತ, ಹಂತವಾಗಿ ಪೂರ್ಣಗೊಳಿಸಲು ಸಂಬಂಧಪಟ್ಟವರಿಗೆ ಸೂಚಿಸುತ್ತೇನೆ.
ಜಿ.ಎನ್.ಗೋನಾಳ, ಎಡಬ್ಲೂಇ

loading...