ಪಾವತಿಸದ ಟ್ಯಾಂಕರ್‌ ಬಾಡಿಗೆ: ಮಾಲಿಕರ ಪ್ರತಿಭಟನೆ

0
31

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಕಳೆದ 7 ತಿಂಗಳಿನಿಂದ ಪುರಸಭೆಯಿಂದ ಪಾವತಿಸಬೇಕಾದ ಟ್ಯಾಂಕರ್‌ ಬಾಡಿಗೆ ಹಣವನ್ನು ಪುರಸಭೆ ಅಧಿಕಾರಿಗಳು ಪಾವತಿಸಿಲ್ಲ ಎಂದು ಆರೋಪಿಸಿ ಸ್ಥಳೀಯ ಪುರಸಭೆ ಆವರಣದಲ್ಲಿ ನೀರು ಸರಬರಾಜು ಟ್ಯಾಂಕರ್‌ಗಳ ಮಾಲಿಕರು ಹಾಗೂ ಚಾಲಕರು ಟ್ಯಾಂಕರ್‌ ನಿಲ್ಲಿಸುವ ಮೂಲಕ ಮಂಗಳವಾರ ಪ್ರತಿಭಟನೆ ನಡೆಸಿದರು.
ಕಳೆದ ವರ್ಷ ಪಟ್ಟಣದಲ್ಲಿ ಉದ್ಭವಾದ ನೀರಿನ ಸಮಸ್ಯೆಯಿಂದಾಗಿ ಸ್ಥಳೀಯ ನೀರು ಸರಬರಾಜು ಅಧಿಕಾರಿಗಳು 15 ರಿಂದ 20 ದಿನಕೊಮ್ಮೆ ನೀರು ಪೂರೈಸಲು ಹರಸಾಹಸ ಪಡುವಂತಾಗಿತ್ತು. ಹೀಗಾಗಿ ಪ್ರತಿನಿತ್ಯ ಒಂದಿಲ್ಲೊಂದು ಬಡಾವಣೆಗಳಲ್ಲಿ ನೀರಿಗಾಗಿ ಜನರು ಪ್ರತಿಭಟಿಸುವ ಮಟ್ಟಿಗೆ ಸಮಸ್ಯೆ ಉಲ್ಬಣಗೊಂಡ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿದ್ದ ಜಿಲ್ಲಾಡಳಿತವು ಪಟ್ಟಣದಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕವಾಗಿ ಕಡಿವಾಣ ಹಾಕುವ ಉದ್ಧೇಶದಿಂದ 10 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರನ್ನು ಸರಬರಾಜಿಗೆ ಮುಂದಾಗಿದ್ದ ಪರಿಣಾಮ ಪಟ್ಟಣದ ಜನತೆಗೆ ನೀರಿನ ದಾಹಕ್ಕೆ ಕೊಂಚ ಮಟ್ಟಿನ ಪರಿಹಾರ ಕಂಡುಕೊಳ್ಳುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದರು. ಆದರೆ ಈಗ ಮತ್ತೆ ಬೇಸಿಗೆ ಆರಂಭವಾಗಿರುವ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಮತ್ತೆ ನೀರಿಗಾಗಿ ಹಾಹಾಕಾರವು ಕೇಳಿ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಪುರಸಭೆ ವತಿಯಿಂದ ಪಟ್ಟಣದಲ್ಲಿ ಪೂರೈಸಲಾಗುತ್ತಿರುವ ಟ್ಯಾಂಕರ್‌ಗಳಿಗೆ ಕಳೆದ 7 ತಿಂಗಳಿನಿಂದ ಬಾಡಿಗೆ ಹಣ ಪಾವತಿಸಿದ ಪರಿಣಾಮ ಟ್ಯಾಂಕರ್‌ಗಳಿಗೆ ಹಾಕಿಸುವ ಡಿಸೇಲ್‌ ಬಂಕ್‌ಗಳ ಮಾಲಿಕರು ಹಾಗೂ ನೀರು ಪೂರೈಸುವ ತೋಟದ ಮಾಲಿಕರು ಹಿಂದಿನ ಬಾಕಿ ಹಣ ನೀಡುವವರೆಗೂ ಬರಬೇಡಿ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಅಲ್ಲದೆ ಟ್ಯಾಂಕರ್‌ ಚಲಾಯಿಸುವ ಚಾಲಕರಿಗೆ ಮತ್ತು ಕಿನ್ನರ್‌ಗಳಿಗೆ ವೇತನ ನೀಡುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಪುರಸಭೆ ಅಧಿಕಾರಿಗಳು ಪಾವತಿಸಬೇಕಾದ 7 ತಿಂಗಳ ಬಾಕಿ ಹಣವನ್ನು ಪಾವತಿಸಬೇಕು. ಇಲ್ಲದಿದ್ದರೆ ನಾವು ಪಟ್ಟಣದಲ್ಲಿ ನೀರನ್ನು ಪೂರೈಸಲು ಸಾಧ್ಯವಿಲ್ಲ ಎಂದು ಚಾಲಕರು ಹಾಗೂ ಮಾಲಕರು ಪಟ್ಟು ಹಿಡಿದರು.
ಪ್ರತಿಭಟನೆ ವಿಷಯ ತಿಳಿದ ಮುಖ್ಯಾಧಿಕಾರಿ ಹನಮಂತಮ್ಮ ನಾಯಕ ಅವರು ತಕ್ಷಣವೇ ಪ್ರತಿಭಟನೆ ನಡೆಸುತ್ತಿದ್ದವರನ್ನು ತಮ್ಮ ಕಚೇರಿ ಕರೆಸಿಕೊಂಡರು. ಈ ವೇಳೆ ಕೆಲ ಟ್ಯಾಂಕರ್‌ ಚಾಲಕರು, ಕಳೆದೆ 7 ತಿಂಗಳಿನಿಂದ ಬಾಡಿಗೆ ಹಣವನ್ನು ನೀಡಿಲ್ಲ. ಕೇಳಿದರೆ ಇನ್ನೊಂದು ವಾರ ಎಂದು ಕಾಲವನ್ನು ದೂಡುತ್ತಾ ಬರುತ್ತಿದ್ದೀರಿ. ಹೀಗಾಗಿ ನಮಗೆ ಬಾಕಿ ಹಣವನ್ನು ನೀಡಿ, ಇಲ್ಲದಿದ್ದರೆ ಟ್ಯಾಂಕರ್‌ಗಳನ್ನು ಓಡಿಸುವ ಸ್ಥಿತಿಯಲ್ಲಿ ನಾವಿಲ್ಲ ಎಂದು ಅಳಲು ತೊಡಿಕೊಂಡಾಗ ಮದ್ಯಪ್ರವೇಶಿಸಿದ ಮುಖ್ಯಾಧಿಕಾರಿ ಹನಮಂತಮ್ಮ ನಾಯಕ ಅವರು, ಸರ್ಕಾರದಿಂದ ಬಂದಿರುವ ಹೊಸ ನಿಯಮದಿಂದಾಗಿ ನಿಮಗೆ ಕಳೆದ ಕೆಲ ತಿಂಗಳಿನಿಂದ ಹಣ ಪಾವತಿಸಲು ಸಾಧ್ಯವಾಗಿಲ್ಲ. ಆದರೆ ಈಗಾಗಲೇ 14ನೇ ಹಾಣಕಾಸಿನ ಅಡಿಯಲ್ಲಿ ನಿಮಗೆ ಸಾಧ್ಯವಾದಷ್ಟು ಬೇಗ ಬಾಡಿಗೆ ಹಣವನ್ನು ಪಾವತಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ಬೇಸಿಗೆ ಇರುವದರಿಂದ ಹೀಗೆ ಟ್ಯಾಂಕರ್‌ಗಳನ್ನು ನಿಲ್ಲಿಸಿದರೆ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ಸ್ವಲ್ಪ ದಿನಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಟ್ಯಾಂಕರ್‌ ಚಾಲಕರು ಹಾಗೂ ಮಾಲಕರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.

loading...