ರಾಜ್ಯ ಮಟ್ಟದ ಭಾರ ಎತ್ತುವ ಸ್ಪರ್ಧೆ: ರೋಹಿತ ಪ್ರಥಮ

0
101

ಹುಬ್ಬಳ್ಳಿ: ತಾಲೂಕಿನ ಅಮರಗೋಳ ಗ್ರಾಮದಲ್ಲಿ ಗೆಳೆಯರ ಬಳಗದಿಂದ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಭಾರ ಎತ್ತುವ ಸ್ಪರ್ಧೆಗೆ ಭಾರಿ ಜನಸ್ಪಂದನೆ ವ್ಯಕ್ತವಾಯಿತು. ಭಾರ ಎತ್ತುವ ಸ್ಪರ್ಧಾಳುಗಳು, ಪೈಲ್ವಾನರು, ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಊರಿನಲ್ಲಿ ಕ್ರೀಡಾ ಜಾತ್ರೆಯ ವಾತಾವರಣ ಕಂಡು ಬಂತು. ಅಮರಗೋಳ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು. ಭಾನುವಾರ ಸಂಜೆ ಆರಂಭವಾದ ಸ್ಪರ್ಧೆ ಬೆಳಗಿನ ಜಾವದವರೆಗೂ ನಡೆಯಿತು. ಶಾಸಕ ವಿನಯ ಕುಲಕರ್ಣಿ ಸ್ಪರ್ಧೆಗೆ ಚಾಲನೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಬಸವಲಿಂಗ ಸ್ವಾಮೀಜಿ, ಇಂದಿನ ಫೇಸ್ಬುಕ್, ವಾಟ್ಸಪ್ ಕಾಲದಲ್ಲಿ ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಅಮರಗೋಳ ಗೆಳೆಯರ ಬಳಗದವರು ಮರುಜೀವ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಧಾರವಾಡ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿದರು. ವಿಶ್ವಜೀತ ಮೋರೆ, ಎಪಿಎಂಸಿ ಅಧ್ಯಕ್ಷ ಜಗನ್ನಾಥಗೌಡ ಸಿದ್ದನಗೌಡ್ರ, ಸದಸ್ಯರಾದ ಈಶ್ವರ ಕಿತ್ತೂರ, ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಗಂಗಣ್ಣ ಮೊರಬದ, ಪಾಲಿಕೆ ಸದಸ್ಯ ಕರಿಯಪ್ಪ ಬೀಸಗಲ್, ಗ್ರಾಮದ ಹಿರಿಯರಾದ ಚನ್ನಪ್ಪ ಬೆಟಗೇರಿ, ಅಜ್ಜಪ್ಪ ಹೊರಕೇರಿ, ಗೆಳೆಯರ ಬಳಗದ ಅಧ್ಯಕ್ಷ ಷಣ್ಮುಖ ಬೆಟಗೇರಿ, ಹನುಮಂತ ಕೊರವರ, ಸುರೇಶ ದಾಸನೂರ, ಕಲ್ಲನಗೌಡ ಪಾಟೀಲ, ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಪಾಪು ಧಾರೆ, ಸಂತೋಷ ಸೋಗಿ ಇತರರು ಉಪಸ್ಥಿತರಿದ್ದರು.ಎಸ್.ಎಫ್. ಹೆಬಸೂರ ಕಾರ್ಯಕ್ರಮ ನಿರೂಪಿಸಿದರು, ರಮೇಶ ಅಸುಂಡಿ ವಂದಿಸಿದರು.ಬಹುಮಾನ: ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ನರಗುಂದದ ಯಲ್ಲಪ್ಪ ಹಟ್ಟಿ ಪ್ರಥಮ, ಮುನವಳ್ಳಿಯ ಮೌಲಾಸಾಬ ಚೊರಿಖಾನ್ ದ್ವಿತೀಯ ಹಾಗೂ ಅಥಣಿಯ ಆನಂದಬಾಬ್ ಕದಮ್ ತೃತೀಯ ಸ್ಥಾನ ಪಡೆದರು.

ಚಕ್ಕಡಿ ಇರಸು ಎತ್ತುವ ಸ್ಪರ್ಧೆಯಲ್ಲಿ ಬ್ಯಾಹಟ್ಟಿಯ ರೋಹಿತ ಮತ್ತಿಹಳ್ಳಿ ಪ್ರಥಮ, ಹೆಬ್ಬಳ್ಳಿಯ ಮಲ್ಲಪ್ಪ ಹೊಸಮನಿ ದ್ವಿತೀಯ ಹಾಗೂ ಗಾಮನಗಟ್ಟಿಯ ಕೆಂಚಪ್ಪ ಅವರಾಧಿ ತೃತೀಯ ಸ್ಥಾನ ಪಡೆದರು. ಧಾರವಾಡ, ಗದಗ, ನರಗುಂದ, ಸವದತ್ತಿ, ಮುನವಳ್ಳಿ, ಹೆಬ್ಬಳ್ಳಿ, ಬ್ಯಾಹಟ್ಟಿ, ಗಾಮನಗಟ್ಟಿ, ಬೆಳಗಾವಿ, ಅಥಣಿ, ಸೂಡಿ, ಹೊಸಟ್ಟಿ, ಅಕ್ಕಿಮಂಡಿ, ಕಲಕೇರಿ ಸೇರಿ ವಿವಿಧೆಡೆಯಿಂದ ಸ್ಪರ್ಧಾಳುಗಳು ಆಗಮಿಸಿದ್ದರು.

loading...