ಜಿ.ಎಸ್.ಪಾಟೀಲರಿಂದ ಅಭಿವೃದ್ಧಿಹೀನ ಆಡಳಿತ: ಸೋಂಪುರ ಆರೋಪ

0
45

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆದಿದೆ ಎಂದು ಬೊಬ್ಬೆಯಿಡುತ್ತಿರುವ ಶಾಸಕ ಜಿ.ಎಸ್.ಪಾಟೀಲ ಅವರು ಕಳೆದ ಐದು ವರ್ಷಗಳ ಕಾಲ ಅಭಿವೃದ್ಧಿಹೀನ ಆಡಳಿತ ನಡೆಸಿದ್ದಾರೆ. ಆದರೆ ಈಗ ಚುನಾವಣೆ ಸಂದರ್ಭದಲ್ಲಿ ಅವೈಜ್ಞಾನಿಕ, ಮಂದಗತಿ ಹಾಗೂ ಕಳಪೆ ಕಾಮಗಾರಿಗಳನ್ನು ನಡೆಸುವ ಮೂಲಕ ಜನರನ್ನು ದಾರಿ ತಪ್ಪಿಸಬಹುದು ಎನ್ನುವ ಶಾಸಕರ ಲೆಕ್ಕಾಚಾರವನ್ನು ಮತದಾರರು ತೆಲೆಕೆಳಗೆ ಮಾಡಲಿದ್ದಾರೆ ಎಂದು ನಮ್ಮ ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಎಚ್.ಎಸ್.ಸೋಂಪುರ ಹೇಳಿದರು.

ಪಟ್ಟಣದ ಕುಷ್ಟಗಿ ರಸ್ತೆಯಲ್ಲಿರುವ `ನಮ್ಮ ಕಾಂಗ್ರೆಸ್ ಪಕ್ಷ’ದ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಕ್ಷೇತ್ರದಲ್ಲಿನ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಹಿಂದುಳಿದ ವರ್ಗಗಳ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬಂದಿರುವ ನಾಯಕರುಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ಕ್ಷೇತ್ರದಲ್ಲಿನ ಬಹುತೇಕ ಗ್ರಾಮಗಳಲ್ಲಿ ಇಂದಿಗೂ ಸಹ ಹಿಂದುಳಿದ ಸಮುದಾಯಗಳ ಅಂತ್ಯ ಸಂಸ್ಕಾರಕ್ಕೆ ಸ್ಮಶಾನಗಳಿಲ್ಲದ ಪರಿಣಾಮ ಗ್ರಾಮದ ಹಳ್ಳಗಳಲ್ಲಿ ಶವ ಸಂಸ್ಕಾರ ಮಾಡುವ ದುಸ್ಥಿತಿ ತಂದಿಟ್ಟಿದ್ದಾರೆ ಎಂದು ದೂರಿದರು.
ಸರ್ಕಾರದಿಂದ ಹಾಲುಮತ ಸಮಾಜಕ್ಕೆ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿಸಿದ್ದೇನೆ. ಹೀಗಾಗಿ ನೀವು ಚುನಾವಣೆಯಲ್ಲಿ ನಮಗೆ ಬೆಂಬಲಿಸಬೇಕು. ಇಲ್ಲದಿದ್ದರೆ ನಿಮಗೆ ಬಾಕಿ ಅನುದಾನ ಬಿಡುಗಡೆ ಮಾಡುವದಿಲ್ಲ ಎಂದು ಸಮಾಜದ ಕೆಲ ಹಿರಿಯರಿಗೆ ಹಾಗೂ ಮುಖಂಡರಿಗೆ ನಮ್ಮನ್ನು ಬೆಂಬಲಿಸದಂತೆ ಅಡ್ಡುಗಟ್ಟುವ ಕುತಂತ್ರಕ್ಕೆ ಮುಂದಾಗಿರುವುದು ಶಾಸಕ ಜಿ.ಎಸ್.ಪಾಟೀಲ ಅವರಿಗೆ ಶೋಭೆಯಲ್ಲ. ಹೀಗಾಗಿ ಆರೋಗ್ಯ ಪೂರ್ಣ ವಾತವರಣದಲ್ಲಿ ಚುನಾವಣೆ ನಡೆದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗಲು ಸಾದ್ಯ ಎಂದ ಅವರು, ಮತಕ್ಷೇತ್ರದ ಕೆಲ ಗ್ರಾಮಗಳಲ್ಲಿ ಅಹಿಂದ ವರ್ಗದಿಂದ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ವ್ಯಕ್ತವಾಗುತ್ತಿರುವ ಬೆಂಬಲದಿಂದ ಹಾಲಿ ಶಾಸಕ ಜಿ.ಎಸ್.ಪಾಟೀಲ ಅವರು ವಿಚಲಿತರಾಗಿದ್ದಾರೆ. ಹೀಗಾಗಿ ನಮ್ಮ ಪಕ್ಷದ ಬೆನ್ನಿಗೆ ನಿಲ್ಲಲ್ಲು ಮುಂದಾಗುತ್ತಿರುವ ಯುವಕರಿಗೆ ಆಸೆ, ಆಮೀಷ ಹಾಗೂ ಬೆದರಿಕೆ ಹಾಕುವ ತಂತ್ರಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ತಾಲೂಕಾ ಕೇಂದ್ರವಾಗಿರುವ ರೋಣ ಮತಕ್ಷೇತ್ರದಲ್ಲಿ ಆರಂಭಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕ ನಿರ್ವಹಣೆಯಿಲ್ಲದೆ ಈಗಾಗಲೇ ಪ್ರತಿಶತ 80 ರಷ್ಟು ಘಟಕಗಳು ಬಾಗೀಲು ಹಾಕಿರುವುದು ಒಂದೆಡೆಯಾದರೆ ಇತ್ತ ರೈತರ ಹಾಗೂ ಜನತೆಯೆ ನೀರಿನ ದಾಹ ನೀಗಿಸಬೇಕಾಗಿದ್ದ ಕೃಷ್ಣಾ ಬಿ ಸ್ಕೀಂ ಹಾಗೂ ಪಾರ್ವತಿಕೊಳ್ಳದ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿಸಿದ್ದು ಶಾಸಕ ಜಿ.ಎಸ್.ಪಾಟೀಲ ಅವರ ನಿಜವಾದ ಸಾಧನೆಯಾಗಿದೆ ಎಂದ ಲೇವಡಿ ಮಾಡಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ನಿವೊಮ್ಮೆ, ನಾವೊಮ್ಮೆ ಎನ್ನುವ ಹೊಂದಾಣಿಕೆ ತಂತ್ರಕ್ಕೆ ಈ ಬಾರಿ ಜನತೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲು ನಿರ್ಧರಿಸಿರುವುದರಿಂದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಸೋಲಿನ ರುಚಿ ನೀಡುವ ಮೂಲಕ ನಮ್ಮ ಕಾಂಗ್ರೆಸ್‍ನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಈ ವೇಳೆ ಸಂಗಪ್ಪ ಯಲಿಗಾರ, ಸಂಜೀವಕುಮಾರ ಜೋಶಿ,ಗುಲಾಮ ಹುನಗುಂದ, ಕಳಕಪ್ಪ ಪೋತಾ ಇದ್ದರು.

loading...