ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಮೆಣಸಿನಕಾಯಿ ಭೇಟಿ

0
22

ಗದಗ: ಸಮೀಪದ ಕಪ್ಪತಗುಡ್ಡ ವ್ಯಾಪ್ತಿಯ ಸಿಂಗಟರಾಯನಕರೆ ಪ್ರದೇಶದಲ್ಲಿ ನಿಯಮ ಬಾಹೀರವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇದಕ್ಕೆ ನೇರವಾಗಿ ಸಚಿವ ಎಚ್.ಕೆ. ಪಾಟೀಲ ಮತ್ತು ಜಿಲ್ಲಾಡಳಿತ ಹೊಣೆ ಎಂದು ಬಿಜೆಪಿ ಮುಖಂಡರಾದ ಅನಿಲ ಮೆಣಸಿನಕಾಯಿ ಆರೋಪಿಸಿದರು. ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಶನಿವಾರ ಸಂಜೆ ಭೇಟಿ ನೀಡಿದ ಅವರು, ಈ ಕುರಿತು ಎಸಿಬಿ ಮತ್ತು ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು.

ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಸಿಂಗಟರಾಯನಕೆರೆ ಪ್ರದೇಶದ ಸರ್ವೇ ನಂಬರ 96ರಲ್ಲಿ ಅಕ್ರಮ ಗಣಿಗಾರಿಕೆ ಕಳೆದ ನಾಲ್ಕು ವರ್ಷದಿಂದ ನಡೆಯುತ್ತಿದೆ. ಇದಲ್ಲದೆ ಅನುಮತಿ ಪಡೆದ 723/27 ಸರ್ವೇ ನಂಬರಿನ ಪ್ರದೇಶದಲ್ಲಿ ಹೆಚ್ಚಿನ ವ್ಯಾಪ್ತಿಯನ್ನು ಬಳಸಿಕೊಂಡು ಗಣಿಗಾರಿಕೆ ನಡೆಸಲಾಗುತ್ತಿದ್ದು ನೂರಾರು ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಆರೋಪಿಸಿದರು.
ಹೈದರಾಬಾದ ಮೂಲದ ಕೆಎನ್ ಆರ್ ಮತ್ತು ರೈಲ ಒನ್ ಕಂಪನಿಗಳು ಗಣಿ ಗುತ್ತಿಗೆಯನ್ನು ಪಡೆದಿವೆ. ಈ ಕಂಪನಿಗಳು ಸರ್ಕಾರಿ ಭೂಮಿ ಸರ್ವೆ ನಂ 96ರಲ್ಲಿ ಅಕ್ರಮ ನಡೆಸಿದ್ದಲ್ಲದೆ ಸರ್ವೇ ನಂ. 723ರಲ್ಲಿ ನೂರಾರು ಕೋಟಿ ರೂ. ಅವ್ಯವಹಾರ ನಡೆಸಿವೆ. ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಪರಿಸರ ವಿಭಾಗ ಮತ್ತು ಸ್ಥಳೀಯ ಗ್ರಾಪಂ ಅನುಮತಿಯನ್ನು ಪಡೆಯದೆ ಅಕ್ರಮ ನಡೆಸಿವೆ. ಈ ಅಕ್ರಮಕ್ಕೆ ಸಚಿವರು ನೇರ ಹೊಣೆ ಆಗಿದ್ದಾರೆ ಎಂದು ಆರೋಪಿಸಿದರು. ಜತೆಗೆ ಅಕ್ರಮವಾಗಿ ತೆಗೆದ ಮಣ್ಣನ್ನು ಹುಬ್ಬಳ್ಳಿ-ಗದಗ-ಕೊಪ್ಪಳ ಚತುಷ್ಪತ ರಸ್ತೆಗೆ ಬಳಸಲಾಗುತ್ತಿದೆ ಎಂದು ಅವರು ದೂರಿದರು.

ಇದಲ್ಲದೆ ಗದಗ-ಬೆಟಗೇರಿ ಅವಳಿ ನಗರಕ್ಕೆ ಬೇಸಿಗೆ ಕಾಲದಲ್ಲಿ ನೀರು ಪೂರೈಸುವ ಯೋಜನೆಗೆ ಅಕ್ರಮ ಗಣಿಗಾರಿಕೆ ಪ್ರದೇಶದಲ್ಲಿ ನಿರ್ಮಾಣವಾದ ಕೆರೆಯನ್ನು ಬಳಸಿಕೊಳ್ಳಲಾಗುತ್ತಿದೆ. ಕೆರೆ ನಿರ್ಮಾಣ ಮಾಡುವುದಕ್ಕಾಗಿ ಸರ್ಕಾರ 10 ಕೋಟಿ ರೂ. ಬಿಡುಗಡೆ ಮಾಡಿದ್ದು. ಈಗಾಗಲೇ ಅಕ್ರಮ ಗಣಿಗಾರಿಕೆಯಿಂದ ನಿರ್ಮಾಣವಾದ ಅಂದಾಜು ನೂರು ಅಡಿಗೂ ಹೆಚ್ಚಿನ ಆಳದ ಗುಂಡಿಗಳನ್ನೇ ಅಧಿಕಾರಿಗಳು ನೀರು ಸಂಗ್ರಹಿಸಲು ಬಳಸಿಕೊಂಡು ಸರ್ಕಾರದಿಂದ ಬಿಡುಗಡೆಯಾದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾಂತಿಲಾಲ್ ಬನ್ಸಾಲಿ, ಎಂ.ಎಂ. ಹಿರೇಮಠ, ಅಶೋಕ ಸಂಕಣ್ಣವರ, ಅನಿಲ ಅಬ್ಬಿಗೇರಿ, ನಾಗಲಿಂಗ ಐಲಿ, ಸಿದ್ದಲಿಂಗೇಶ ಮೆಣಸಿನಕಾಯಿ, ಬುದ್ದಪ್ಪ ಮಾಡಳ್ಳಿ, ಮಂಜುನಾಥ ಮ್ಯಾಗೇರಿ, ಅಂಬರೀಷ ಹಿರೇಮಠ, ಮಹೇಶ ದಾಸರ, ಬಸವಣ್ಣೆಯ್ಯ ಹಿರೇಮಠ, ವಿಲ್ಸನ್ ಕಂಬಳಿ, ದೇವೇಂದ್ರಗೌಡ ಕರಿಗೌಡ್ರ, ಬಸವರಾಜ ಕೋಟಿ, ಬಾಬು ಎಲಿಗಾರ, ರಮೇಶ ಮುಳಗುಂದ ಉಮೇಶ ಹಡಪದ, ಶರಣಪ್ಪ ಕಮಡೊಳ್ಳಿ, ಪ್ರೊ.ಜಿ.ಎಚ್.ಪೂಜಾರ, ಪ್ರಕಾಶ ಕುರ್ತಕೋಟಿ, ಶಂಕ್ರಪ್ಪ ಅಣ್ಣಿಗೇರಿ ಸೇರಿದಂತೆ ಮುಂತಾದವರಿದ್ದರು.

loading...