ರೋಣ ಮತಕ್ಷೇತ್ರದ ಮಹಿಳೆಯರಿಗಿಲ್ಲ ಪ್ರಾಧಾನ್ಯತೆ: ಸ್ಪರ್ಧೆಯಿಂದ ದೂರ

0
101

ಶಿವಕುಮಾರ ಶಶಿಮಠ

ಗಜೇಂದ್ರಗಡ: ಜಿಲ್ಲೆಯಲ್ಲಿಯೇ ದೊಡ್ಡ ಕ್ಷೇತ್ರವನ್ನು ಹೊಂದಿರುವ ರೋಣ ಮತಕ್ಷೇತ್ರದಲ್ಲಿ ಸರಿಸುಮಾರು ಪುರಷರಷ್ಟೇ ಮಹಿಳಾ ಮತದಾರರು ಇದ್ದರೂ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಸ್ಪರ್ಧೇಗೆ ಅವಕಾಶವೇ ನೀಡಿಲ್ಲ.! ಪರಿಣಾಮ ಈ ಕ್ಷೇತ್ರದಲ್ಲಿ ಮಹಿಳಾ ಪ್ರಾತಿನಿಧ್ಯ ಗೌಣವಾಗಿದೆ.
ರಾಜಕೀಯ ತಿಳಿವಳಿಕೆಯ ಕೊರತೆ ಹಾಗೂ ಜನ ಸಂಪರ್ಕದಲ್ಲಿ ಮಹಿಳೆಯರು ಇಲ್ಲದೇ ಇರುವುದರಿಂದ ವಿಶೇಷವಾಗಿ ಸಾಕ್ಷರತೆಯ ಅರಿವು ಕಡಿಮೆ ಇದ್ದ ಕಾರಣಕ್ಕೆ ಮಹಿಳೆಯರು ರಾಜಕೀಯದತ್ತ ಬಾರದಿರುವುದು ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಕಂಡು ಬರುತ್ತದೆ.

ಮತಕ್ಷೇತ್ರದ ಇತಿಹಾಸ:
ರೋಣದ ರಾಜಕಾರಣದಲ್ಲಿ ದೊಡ್ಡಮೇಟಿ ಕುಟುಂಬ ತನ್ನದೇ ಆದ ವರ್ಚಸ್ಸು ಹೊಂದಿದ್ದು, ದಿ. ಅಂದಾನಪ್ಪ ದೊಡ್ಡಮೇಟಿ ಸ್ವಾತಂತ್ರಪೂರ್ವ ಕಾಲದಲ್ಲೇ ಜನನಾಯಕರಾಗಿದ್ದರು. 1933 ರಲ್ಲಿ ಮುಂಬೈ ಅಸ್ಲೆಂಬಿಗೆ ಧಾರವಾಡ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರು ನಂತರ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ತಮ್ಮ ಸ್ವಗ್ರಾಮ ಜಕ್ಕಲಿಗೆ ಗಾಂಧಿಜೀ ಮತ್ತು ನೆಹರು ಅವರನ್ನು 1934ರಲ್ಲಿ ಕರೆಯಿಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. 1957ರಲ್ಲಿ ಮೊದಲ ಬಾರಿ(ಕಾಂಗ್ರೆಸ್‍ದಿಂದ)(ಇಬ್ಬರು ಕಣದಲ್ಲಿದ್ದರು), 1962ರಲ್ಲಿ ಎರಡನೇ ಬಾರಿ(ಕಾಂಗ್ರೆಸ್ ಪಕ್ಷದಿಂದ) (ಮೂವರು ಅಭ್ಯರ್ಥಿಗಳು ಕಣದಲ್ಲಿದ್ದರು), 1967 ರಲ್ಲಿ ಮೂರನೇ ಬಾರಿ ದಿ. ಅಂದಾನಪ್ಪ ದೊಡ್ಡಮೇಟಿ(ಕಾಂಗ್ರಸ್) ಶಾಸಕರಾಗಿ ಆಯ್ಕೆಯಾಗಿದ್ದರು(ಕಣದಲ್ಲಿ ಇಬ್ಬರು ಅಭ್ಯರ್ಥಿಗಳಿದ್ದರು). ನಂತರ 2 ವರ್ಷದ ಅವಧಿಗೆ ಸಮಾಜವಾದಿ ಪಕ್ಷದಿಂದ ಹೊಸಳ್ಳಿಯ ನೀಲಗಂಗಯ್ಯ ಪೂಜಾರ, 1972 ರಲ್ಲಿ ಎ.ವಿ ಪಾಟೀಲ(ಕಾಂಗ್ರೆಸ್) ಕಣದಲ್ಲಿ 3 ಜನ ಅಭ್ಯರ್ಥಿಗಳು ಇದ್ದರು, 1978 ರಲ್ಲಿ ಕಾಂಗ್ರೆಸ್ ನಿಂದ ವೀರಣ್ಣ ಮತ್ತಿಕಟ್ಟಿ(ಕಣದಲ್ಲಿ 4ಜನ ಅಭ್ಯರ್ಥಿಗಳಿದ್ದರು), 1983 (3ಜನ ಕಣದಲ್ಲಿ)ಮತ್ತು 1985 ರಲ್ಲಿ(4 ಜನ ಕಣದಲ್ಲಿ) ಜನತಾ ಪಕ್ಷದಿಂದ ದಿ. ಅಂದಾನಪ್ಪ ದೊಡ್ಡಮೇಟಿ ಅವರ ಮಗ ಸಾಹಿತಿಗಳಾದ ಜ್ಞಾನದೇವ ದೊಡ್ಡಮೇಟಿ, 1989 ರಲ್ಲಿ(7ಜನ ಕಣದಲ್ಲಿ) ಕಾಂಗ್ರೆಸ್‍ನಿಂದ ಜಿ.ಎಸ್. ಪಾಟೀಲ, 1994ರಲ್ಲಿ (5 ಜನ ಕಣದಲ್ಲಿ) ಜನತಾದಳದಿಂದ ಶ್ರೀಶೈಲಪ್ಪ ಬಿದರೂರ, 1999ರಲ್ಲಿ (7 ಜನ ಕಣದಲ್ಲಿ) ಮತ್ತೆ ಜಿ.ಎಸ್. ಪಾಟೀಲ, 2004 ರಲ್ಲಿ (7 ಜನ ಕಣದಲ್ಲಿ) ಹಾಗೂ 2008(13 ಜನ ಕಣದಲ್ಲಿ) ರಲ್ಲಿ ಬಿಜೆಪಿಯಿಂದ ಕಳಕಪ್ಪ ಬಂಡಿ, 2013 (12 ಜನ ಕಣದಲ್ಲಿ) ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಜಿ.ಎಸ್. ಪಾಟೀಲ 74592 ಮತ ಪಡೆದ ಮತ್ತೆ ಶಾಸಕರಾದರು. ಬಿಜೆಪಿಯಿಂದ ಕಣಕ್ಕಿಳಿದಿದ್ದ ಕಳಕಪ್ಪ ಬಂಡಿ 56366 ಮತಗಳನ್ನು ಪಡೆದು ಸೋತರು. ಜೆಡಿಎಸ್‍ನ ಹೇಮಗಿರೀಶ ಹಾವಿನಾಳ 6344 ಮತಗಳನ್ನು ಪಡೆದಿದ್ದು, ಒಟ್ಟು 18227 ಮತಗಳ ಅಂತರದಿಂದ ಜಿ.ಎಸ್. ಪಾಟೀಲ ಗೆದ್ದು, ವಿಜಯಮಾಲೆ ಧರಿಸಿದರು. 2018 ರ ಮೇ 12 ರಂದು ಜರುಗುವ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 2,21,456 ಮತದಾರರು ಮತಚಲಾಯಿಸುವ ಹಕ್ಕು ಹೊಂದಿದ್ದು, ಅದರಲ್ಲಿ 1 ಲಕ್ಷ 10ಸಾವಿರ 268 ಮತಗಳು ಮಹಿಳೆಯರೇ ಇದ್ದಾರೆ. ಪುರಷರಷ್ಟೇ ಸರಿಸಮಾನಾದ ಮತವನ್ನು ಹೊಂದಿರುವ ಮಹಿಳೆಯರಿಗೆ ರಾಷ್ಟ್ರೀಯ ಪಕ್ಷಗಳು ಮಣೆ ಹಾಕಿಲ್ಲ. ಅಲ್ಲದೆ, ಈವರೆಗೂ ಚುನಾವಣಾ ಕಣದಲ್ಲಿ ಮಹಿಳೆಯರು ಸ್ಪರ್ಧಿಸದೇ ಇರುವುದು ರಾಜಕೀಯ ಪ್ರಜ್ಞೆ ಮತ್ತು ಆಸಕ್ಷಿಗೆ ಹಿಡಿದ ಕೈಗನ್ನಡಿಯಾಗಿದೆ. ಮಹಿಳಾ ಮತದಾರರಿಗೆ ತಮ್ಮ ಪರವಾಗಿ ಹೋರಾಟ ಮಾಡುವಂಥ ಮಹಿಳಾ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವಂಥ ಅವಕಾಶ ಇಲ್ಲದಂತೆ ರಾಜಕೀಯ ವ್ಯವಸ್ಥೆ ಪರಸ್ಥಿತಿ ನಿರ್ಮಾಣ ಮಾಡಿರುವುದು ನಿಚ್ಛಳವಾಗಿದೆ.

ಈ ಬಾರಿಯೂ ಮಹಿಳಾ ಸ್ಪರ್ಧೇಗೆ ನಿರಾಸಕ್ತಿ:
ಈ ಬಾರಿಯ 2018 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವೊಬ್ಬ ಪ್ರಮುಖ ಮಹಿಳೆಯರು ಆಸಕ್ತಿ ತೋರಿದಂತೆ ಕಂಡು ಬರುತ್ತಿಲ್ಲ. ಅಲ್ಲದೆ, ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಗೆಲ್ಲುವ ಕುದರೆಗಳನ್ನು ಮತ್ತು ಜನ ಸಂಪರ್ಕದಲ್ಲಿರುವವರ್ನು ಹುಡುಕುತ್ತಿರುವದರಿಂದ ಮಹಿಳೆಯರನ್ನು ಗುರುತಿಸಿ ಈ ಬಾರಿಯಾದರೂ ಟಿಕೆಟ್ ನೀಡುವುದು ಕಷ್ಟ ಎನ್ನಲಾಗುತ್ತಿದೆ. ಈ ವರೆಗೆ ಬಿಜೆಪಿ,ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ಇತರ ಪಕ್ಷಗಳು ಯಾವೊಬ್ಬ ಮಹಿಳೆಗೆ ಟಿಕಟ್ ನೀಡಿಲ್ಲ.

ಮಹಿಳಾ ಹಕ್ಕೊತ್ತಾಯ:
ನಾಮಪತ್ರ ಸಲ್ಲಿಕೆಗೆ ಕೌಂಟಡೌನ್ ಶುರುವಾಗಿದೆ. ರಾಷ್ಟ್ರೀಯ ಪಕ್ಷಗಳಲ್ಲಿ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಜೋರಾಗಿ ನಡೆದಿದೆ. ಈ ಬಾರಿಯಾದರೂ ಮಹಿಳೆಯರಿಗೆ ಪಾತಿನಿಧ್ಯ ನೀಡುವಂತೆ ” ಮಹಿಳೆಯರ ರಾಜಕೀಯ ಹಕ್ಕಿನ ಹೋರಾಟ ಸಮಿತಿ” ಇತ್ತಾಯಿಸುತ್ತದೆ.

ಒಟ್ಟಾರೆ, ಪ್ರತಿಯೊಂದು ರಾಜಕೀಯ ಪಕ್ಷದಲ್ಲಿ ಮಹಿಳಾ ಘಟಕಗಳನ್ನು ರಚಿಸಿಕೊಂಡಿವೆ. ಆದರೆ, ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದ್ದರೂ ಮಹಿಳೆಯರನ್ನು ರಾಜಕೀಯವಾಗಿ ಮುಂಚೂಣೆಗೆ ಬರಲು ಅವಕಾಶ ನೀಡದಿರುವುದು ರೋಣ ಮತಕ್ಷೇತ್ರದ ರಾಜಕೀಯ ಇತಿಹಾಸದಿಂದ ಸ್ಪಷ್ಟವಾಗುತ್ತದೆ. ಇನ್ನಾದರೂ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವವರೆ ಎಂಬುದನ್ನು ಕಾದು ನೋಡಬೇಕಿದೆ.

ರಾಜಕೀಯ ಪಕ್ಷಗಳು ದೇಶದಲ್ಲಿ ಮಹಿಳಾ ಮೀಸಲಾತಿ ಬಗ್ಗೆ ಹೇಳಿಕೆ ನೀಡುತ್ತಲೇ ಇವೆ. ಆದರೆ, ಚುನಾವಣೆಯಲ್ಲಿ ಶೇ. 33 ರಷ್ಟು ಸ್ಥಾನಗಳಲ್ಲಿ ಮಹಿಳೆಯರನ್ನು ಕಣಕ್ಕಿಳಿಸುವ ವಿಚಾರ ಬಂದಾಗ ಮಹಿಳೆಯರನ್ನು ಕಡೆಗಣಿಸುತ್ತವೆ. ಪುರುಷ ಪ್ರಧಾನ ಮನೋಭಾವ ರಾಜಕೀಯದಲ್ಲಿ ಹೆಚ್ಚಾಗಿದೆ. ಅದರಿಂದಾಗಿ ಮಹಿಳೆಯರು ರಾಜಕೀಯವಾಗಿ ಪ್ರಾಶಸ್ತ್ಯದಿಂದ ದೂರವುಳಿಯುವಂತಾಗಿದೆ.
ಮಂಜುಳಾ ರೇವಡಿ, ಸಮಾಜ ಸೇವಕಿ

loading...