ಬರಗಾಲ ಶಾಶ್ವತ ಪರಿಹಾರಕ್ಕೆ ಯೋಜನೆ: ಯಡಿಯೂರಪ್ಪ

0
53

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ರಾಜ್ಯದಲ್ಲಿನ ಬರಗಾಲಕ್ಕೆ ಶಾಶ್ವತ ಪರಿಹಾರ ನೀಡಲು ನದಿ ಜೋಡಣೆ ಮೂಲಕ ಕೆರೆ ತುಂಬಿಸುವ ಕೆಲಸಕ್ಕೆ ಚಾಲನೆ ನೀಡುವುದರ ಜೊತೆಗೆ ರಾಷ್ಟ್ರೀಯ ಬ್ಯಾಂಕ್‌ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.
ಮೇ.12 ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಶನಿವಾರ ರೋಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಅವರಿಗೆ ಮತಯಾಚಿಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.
ರಾಜ್ಯದ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವ ಉದ್ಧೇಶದಿಂದ ರೈತರು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ರೂ.5 ಸಾವಿರ ಕೋಟಿಯನ್ನು ಕಾಯ್ದಿರಿಸುವುದರ ಜೊತೆಗೆ ವಿಧವಾ, ವೃದ್ದಾಪ್ಯ ವೇತನ, ಭಾಗ್ಯಲಕ್ಷ್ಮಿ ಬಾಂಡ್‌ಗಳ ಸಂಖ್ಯೆಯನ್ನು ಹೆಚ್ಚಿಸುತ್ತೇನೆ. ಅಲ್ಲದೆ ಶಾದಿ ಭಾಗ್ಯವನ್ನು ಎಲ್ಲ ಬಡ ಕುಟುಂಬಗಳಿಗೆ ವಿಸ್ತರಿಸುವ ಮೂಲಕ ಸ್ರೀ ಶಕ್ತಿ ಸ್ವಸಹಾಯ ಸಂಘಗಳ ಸಶಕ್ತಿಕರಣಕ್ಕಾಗಿ ಹೆಚ್ಚಿನ ಅನುದಾನವನ್ನು ಮೀಸಲಿಡುತ್ತೇನೆ ಎಂದ ಅವರು, ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ಮಠ, ಮಂದಿರಗಳ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿದ ಅನುದಾನ ಮಾದರಿಯಲ್ಲಿಯೇ ಮುಂದೆಯೂ ಸಹ ಅನುದಾನ ಬಿಡುಗಡೆ ಮಾಡಲಾಗುವುದು. ರಾಜ್ಯಾದ್ಯಂತ ಬಿಜೆಪಿ ಪರವಾದ ಅಲೆಯಿರುವುದು ಕಂಡು ಬಂದಿದೆ. ಹೀಗಾಗಿ ಜಿಲ್ಲೆಯ 4 ಕ್ಷೇತ್ರಗಳಲ್ಲಿಯೂ ಸಹ ಬಿಜೆಪಿ ಅಭ್ಯರ್ಥಿಗಳು 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ಸಾಮಾಜಿಕ ನ್ಯಾಯಕ್ಕೆ ಮೊದಲ ಆಧ್ಯತೆ ಎಂದು ರಾಜ್ಯದ ಚುಕ್ಕಾಣಿ ಹಿಡಿದ ಕಾಂಗ್ರೆಸ್‌ ಸರ್ಕಾರವು ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದೆ. ಅಲ್ಲದೆ ನೀರಾವರಿ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿರುವ ರೈತ ವಿರೋಧಿ ಸರ್ಕಾರವನ್ನು ರಾಜ್ಯದ ಜನತೆ ಕಿತ್ತೊಗೆಯಲು ನಿರ್ಧರಿಸಿದ್ದಾರೆ ಎಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಜಾರಿಗೆ ತಂದ ಜನಪರ ಯೋಜನೆ ಹಾಗೂ ಬಿಡುಗಡೆಗೊಳಿಸಿದ ಅನುದಾನವನ್ನು ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರವು ರೈತರಿಗೆ, ಜನತೆಗೆ ತಲುಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಅಲ್ಲದೆ ಅತ್ಯಂತ ಕೆಟ್ಟ ಆಡಳಿತ ನಡೆಸಿರುವ ಕಾಂಗ್ರೆಸ್‌ನ್ನು ಮನೆಗೆ ಕಳುಹಿಸಲು ಮತದಾರರು ನಿರ್ಧರಿಸಿದ್ದಾರೆ ಎಂದರು.
ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ಕಳೆದ ಐದು ವರ್ಷದಲ್ಲಿ ಸರ್ಕಾರಿ ಕಚೇರಿಗಳನ್ನು ಕಾಂಗ್ರೆಸ್‌ ಕಾರ್ಯಾಲಯಗಳನ್ನು ಶಾಸಕರು ಮಾಡಿಕೊಂಡರೆ ಇತ್ತ ಅವರ ಮಕ್ಕಳು ಮರಳು ಲೂಟಿ ಮಾಡಿದ್ದಾರೆ ಹೊರತು ಕ್ಷೇತ್ರದ ಅಭಿವೃದ್ಧಿಯನ್ನಲ್ಲ. ಹೀಗಾಗಿ ದುರಾಡಳಿತದ ಪ್ರತಿರೂಪವಾಗಿರುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಅಶೋಕ ನವಲಗುಂದ, ನಿಂಗಪ್ಪ ಬೇವಿನಮರದ, ಅಮರೇಶ ಬಳಿಗೇರ, ಅಶೋಕ ವನ್ನಾಲ, ಮೋಹನಸಾ ರಾಯಬಾಗಿ, ಷಣ್ಮುಖಪ್ಪ ಚಿಲಝರಿ, ಶರಣಪ್ಪ ಚಳಗೇರಿ, ರಫೀಕ್‌ ತೋರಗಲ್‌, ಬಸು ಬಂಕದ, ಸಿದ್ದಣ್ಣ ಬಂಡಿ, ರವಿ ದಂಡಿನ, ಅಪ್ಪಣ್ಣ ಮಹೇಂದ್ರಕರ, ಪ್ರಭು ಚವಡಿ, ಶರಣಪ್ಪ ರೇವಡಿ, ಮುತ್ತು ಕಡಗದ, ರಾಜೇಂದ್ರ ಘೋರ್ಪಡೆ, ರವಿ ಗಡೇದವರ, ಪರಶುರಾಮ ಚಿಲಝರಿ ಸೇರಿದಂತೆ ಇತರ ಪ್ರಮುಖ ನಾಯಕರು ಭಾಗವಹಿಸಿದ್ದರು.

loading...