ಸಿದ್ದರಾಮಯ್ಯಗೆ ಅನಂತಕುಮಾರ ಸವಾಲು

0
56

ಕನ್ನಡಮ್ಮ ಸುದ್ದಿ-ಶಿರಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟಿರುವ ಹ್ಯುಬ್ಲೋ ವಾಚ್‌ಗೆ ಕಸ್ಟಮ್ಸ್‌ ಡ್ಯೂಟಿ ಕಟ್ಟಿದ್ದರೆ ಅದರ ದಾಖಲೆ ಬಹಿರಂಗ ಪಡಿಸಬೇಕು. ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್‌ ಶಾ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಒಂದೇ ವಿಮಾನದಲ್ಲಿ ದೆಹಲಿಗೆ ಹೋಗಿದ್ದಾರೆಂದು ಹೇಳಿರುವ ಸಿದ್ದರಾಮಯ್ಯ ಅವರು ಅದರ ದಾಖಲೆ ಜನರೆದುರು ಇಡಬೇಕು.
ಒಂದೊಮ್ಮೆ ಇಡದಿದ್ದರೆ ಬಾದಾಮಿ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಾನು ಸುಳ್ಳು ಪ್ರಚಾರ ಮಾಡುತ್ತಿದ್ದೇನೆ ಎಂದು ರಾಜ್ಯದ ಜನತೆ ಕ್ಷಮೆ ಕೋರಿ ಚುನಾವಣಾ ಕಣದಿಂದ ನಿವೃತ್ತರಾಗಬೇಕು ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ ಸವಾಲು ಹಾಕಿದರು.
ಶಿರಸಿಯಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಪರ ಬೃಹತ್‌ ರೋಡ್‌ ಶೋದಲ್ಲಿ ಪಾಲ್ಗೊಂಡ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟಿರುವ ಹ್ಯುಬ್ಲೋ ವಾಚ್‌ಗೆ ಕಸ್ಟಮ್ಸ್‌ ಡ್ಯೂಟಿ ಕಟ್ಟಿದ್ದಾರೆಯೇ? ಒಂದೊಮ್ಮೆ ಕಟ್ಟಿದ್ದರೆ ಅದರ ರಶೀದಿಯನ್ನು 24 ಗಂಟೆಯೊಳಗೆ ರಾಜ್ಯದ ಜನತೆಯೆದುರು ಬಹಿರಂಗ ಪಡಿಸಬೇಕು. ಇಲ್ಲವಾದರೆ ಅವರು ಶಿಕ್ಷಾರ್ಹ ಅಪರಾಧ ಮಾಡಿದಂತಾಗುತ್ತದೆ. ಕಳುವು ಮಾಡಿದ, ತೆರಿಗೆ ತಪ್ಪಿಸಿದ ವಾಚಲ್ಲ ಎಂಬುದನ್ನು ಸಿದ್ದರಾಮಯ್ಯ ಸಾಬೀತು ಪಡಿಸಬೇಕು ಎಂದರು.
ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್‌ ಶಾ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿದ್ದಾರೆ. ಈ ಕುರಿತ ದಾಖಲೆ ತನ್ನಲ್ಲಿದೆ ಎಂದು ಸಿದ್ರಾಮಯ್ಯ ಪದೇ ಪದೇ ಹೇಳುತ್ತಿದ್ದಾರೆ. ಇದು ಕೂಡ ಜನರೆದುರು ಇಡಬೇಕು. ಇಡದಿದ್ದರೆ ಬಾದಾಮಿ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಾನು ಸುಳ್ಳು ಪ್ರಚಾರ ಮಾಡುತ್ತಿದ್ದೇನೆ ಎಂದು ರಾಜ್ಯದ ಜನತೆ ಕಷಮೆ ಕೋರಿ ಚುನಾವಣಾ ಕಣದಿಂದ ನಿವೃತ್ತರಾಗಬೇಕು ಎಂದು ಆಗ್ರಹಿಸಿದರು.
ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಶಿರಸಿ ಕ್ಷೇತ್ರದಲ್ಲಿ ನಿಮಗೆ ಪುಣ್ಯಕೋಟಿಯಂಥ ಕಾಗೇರಿ ಬೇಕೇ ಹೆಬ್ಬುಲಿಯಂಥ ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ನಾಯ್ಕ ಬೇಕೇ? ಎಂದು ಮತದಾರರನ್ನು ಪ್ರಶ್ನಿಸಿದರು. ಬಿಜೆಪಿ ಅಧಿಕಾರಾವಧಿಯಲ್ಲಿ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ವ್ಯಸನ ಮುಕ್ತ ಸಮಾಜ ನಿರ್ಮಿಸಲು, ಅಪರಾಧ ರಹಿತ ಸಮಾಜ ಕಟ್ಟಲು ಬಿಜೆಪಿ ಶ್ರಮಿಸುತ್ತಿದೆ. ಒಂದೊಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಊರೂರಿನಲ್ಲಿ ಮದ್ಯದಂಗಡಿಗಳು ತಲೆ ಎತ್ತಲಿವೆ. ಕ್ಷೇತ್ರ ಅಪರಾಧಗಳ ತಾಣವಾಗಲಿದೆ ಎಂದರು. ಜೆಡಿಎಸ್‌ ರಾಜ್ಯದಲ್ಲಿ ಹೇಗೆ ಅಪ್ರಸ್ತುತವೋ ಅದೇ ರೀತಿ ಈ ಕ್ಷೇತ್ರದಲ್ಲೂ ಅಪ್ರಸ್ತುತವಾಗಿದೆ ಎಂದರು.
ಅನಂತಕುಮಾರ ಅವರು ನಗರದಲ್ಲಿ ರೋಡ್‌ ಶೋಗೂ ಮುನ್ನ ಶಿವಾಜಿ ವೃತ್ತದಲ್ಲಿರುವ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ನೂರಾರು ಕಾರ್ಯಕರ್ತರೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಯಾಚಿಸಿದರು. ಈ ವೇಳೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರು ಹಾಗೂ ಇತರರು ಇದ್ದರು.

loading...