ಪ್ರಚಾರಕ್ಕೆ ಹೊಸದಾರಿ-ಜಾಲತಾಣದಲ್ಲಿ ಜಾಣ ಅಭ್ಯರ್ಥಿಗಳು

0
53

ಶಿವಕುಮಾರ ಶಶಿಮಠ
ಗಜೇಂದ್ರಗಡ: ವಿಧಾನಸಭಾ ಚುನಾವಣಾ ಪ್ರಚಾರದ ಕಾವು ದಿನೇ ದಿನೇ ಏರುತ್ತಿದೆ. ಇನ್ನೊಂದಡೆ ಚುನಾವಣಾ ನೀತಿ ಸಂಹಿತೆಯ ಬಿಗಿ ಹೆಚ್ಚುತ್ತಿದೆ. ಅಭ್ಯರ್ಥಿಗಳು ವೋಟಿನ ಬೇಟೆಗೆ ಹೊಸ ಹೊಸ ಮಾರ್ಗಗಳಿಗೆ ಮೊರೆ ಹೋಗುತ್ತಿದ್ದಾರೆ. ಹೈಟೆಕ್‌ ಸ್ಪರ್ಶದಿಂದ ಇತ್ತೀಚೆಗೆ ಪ್ರಚಾರದ ವೈಖರಿ ಬದಲಾಗಿದೆ.
ಮೊಬೈಲ್‌ ಕರೆ, ಎಸ್‌ಎಂಎಸ್‌ ಸಂದೇಶಗಳು ಮತದಾರರನ್ನು ತಲುಪುತ್ತಿವೆ. ಅದರ ನಡುವೆ ಆಧುನಿಕ ಮಾಧ್ಯಮವಾದ ಸಾಮಾಜಿಕ ಜಾಲತಾಣಗಳೂ ವ್ಯಾಪಕವಾಗಿ ಬಳಕೆಯಾಗುತ್ತಿವೆ. ಒಂದರೆಡು ದಶಕಗಳ ಹಿಂದೆ ಇದ್ದಂತಹ ಪ್ರಚಾರದ ಭರಾಟೆ ಈಗಿಲ್ಲ, ಈಗೇನಿದ್ದರೂ ಚುಟುಕು ಪ್ರಚಾರಕ್ಕೆ ಆದ್ಯತೆ. ಎಲ್ಲಾ ಪಕ್ಷಗಳು ವೆಬ್‌ಸೈಟ್‌ ತೆರೆದು ಪ್ರಚಾರ ಕಾರ್ಯದಲ್ಲಿ ನಿರತವಾಗಿವೆ. ಫೇಸ್‌ಬುಕ್‌ನಲ್ಲಂತೂ ಅಭ್ಯರ್ಥಿಗಳ, ಪಕ್ಷದ ಕಾರ್ಯಕರ್ತರ ಪುಟಗಳು ಅವತರಿಸಿವೆ. ಪರ-ವಿರೋಧ ಚರ್ಚೆ ನಡೆಯುತ್ತಿವೆ.
ರೋಣ ಮತಕ್ಷೇತ್ರದ ಬಹುತೇಕ ಅಭ್ಯರ್ಥಿಗಳು ವೈಯಕ್ತಿಕ ಖಾತೆ ತೆರೆದು ಮತ್ತು ಆಯಾ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಭರದಿಂದ ಪ್ರಚಾರ ನಡೆಸಿದ್ದಾರೆ. ಅಭ್ಯರ್ಥಿಗಳು ತಮ್ಮ ಸಾಧನೆ-ಕನಸುಗಳ ಮಹಾಪೂರವನ್ನೇ ಅಂಕಿ-ಅಂಶಗಳ ಚಿತ್ರ ಸಹಿತವಾಗಿ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಫೇಸ್‌ ಬುಕ್‌ನಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳು ಪಕ್ಷದ ಹಿಂಬಾಲಕರು ಫೇಸ್‌ಬುಕ್‌ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ.
ದುರ್ಬಳಕೆ : ಈ ನಡುವೆ ಫೇಸ್‌ಬುಕ್‌ನ ದುರ್ಬಳಕೆಯೂ ನಡೆಯುತ್ತಿದೆ. ನೇರೆ ಪರಿಣಾಮ ಬೀರುವ ಜಾಲತಾಣಗಳ ಜಾಹೀರಾತುಗಳನ್ನು ಚುನಾವಣಾ ಆಯೋಗ ಗಂಬೀರವಾಗಿ ಪರಿಗಣಿಸುತ್ತಿಲ್ಲ. ಮುಖ ಪುಟಕ್ಕೆ ಭೇಟಿ ನೀಡಿದವರು ಹಾಗೂ ಬೆಂಬಲಿಗರ ಸಂಖ್ಯೆ ಹೆಚ್ಚಳವಾದರೂ ಅವುಗಳೆಲ್ಲ ಮತಗಳಾಗಿ ಪರಿವರ್ತಿತವಾಗುತ್ತವೆ.
ಇವೆಲ್ಲವುಗಳ ನಡುವೆಯೇ ಪ್ರಜ್ಞಾವಂತ ಸಾಮಾಜಿಕ ಜಾಲ ತಾಣ ಬಳಕೆದಾರರ ಸಂದೇಶಗಳು ಜನರ ಭಾವನೆಗೆ ನೇರವಾಗಿ ಇದೆ ಎಂದರೇ ತಪ್ಪಾಗಲಿಕ್ಕಿಲ್ಲ, ಯಾಕಂದರೇ ಸಾಮಾಜಿಕ ಜಾಲ ತಾಣಗಳಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ಸಂದೇಶಗಳ ಭರಾಟೆಯೂ ಸಹ ಜೋರಾಗಿಯೇ ನಡೆದಿದೆ. ಒಂದು ವಾರದಿಂದ ಫೇಸ್‌ಬಕ್‌, ಟ್ವೀಟರ್‌, ವ್ಯಾಟ್ಸಾಪ್‌, ಮೇಸಜ್‌, ಇನ್ನಿತರಗಳ ಮೂಲಕ ಮತದಾರರಿಗೆ ಜಾಗೃತಿ ಸಂದೇಶ ತಲುಪುವಲ್ಲಿ ಪುಲ್‌ ಬಿಜಿಯಾಗಿವೆ.
ಮತದಾರ ಮತ ಚಲಾಯಿಸುವದನ್ನು ಮರೆಯದಂತೆ ಮತ್ತು ಮತ ಚಲಾವಣೆಗೆ ಹಣ ಹೆಂಡ ತೆಗೆದುಕೊಳ್ಳದೆ ಪ್ರಾಮಾಣಿಕವಾಗಿ ಜನರ ಸೇವೆ ಮಾಡುವವರಿಗೆ ಮತ ಚಲಾಯಿಸಿ ಎಂಬ ಸಂದೇಶಗಳು ಸಾಮಾಜಿಕ ಜಾಲ ತಾಣಗಳಲ್ಲಿ ಕಾಣಸಿಗುತ್ತಿವೆ.
ಚುನಾವಣೆಗೆ ಸ್ಪರ್ದಿಸಿದ ವ್ಯಕ್ತಿಯಿಂದ 500ರೂಪಾಯಿ ಪಡೆದು ಅವನನ್ನು ಗೆಲ್ಲಿಸಿದರೇ, ಮುಂದಿನ 5ವರ್ಷಗಳ ಕಾಲ ಅಂದರೇ 1,825 ದಿನಗಳಿಗೆ 500ರೂ ಲೆಕ್ಕ ಹಾಕಿದಾಗ ದಿನಕ್ಕೆ 0.27 ಪೈಸೆ ಪಡೆದಂತಾಗುತ್ತದೆ, ಒಬ್ಬ ಬಿಕ್ಷೆ ಬೇಡುವವನು 27ಪೈಸೆ ತೆಗೆದುಕೊಳ್ಳುವದಿಲ್ಲ, ಮತ್ತೆ ನಾವೇಕೆ ತೆಗೆದುಕೊಳ್ಳಬೇಕು, ಇಂದೇ ಯೋಚಿಸಿ ಜಿಪಂ,ತಾಪಂ ಚುನಾವಣೆಯಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಜಾಲತಾಣಗಳಲ್ಲಿ ಹರಿದಾಡುತ್ತಿರುವ ಜಾಗೃತಿ ಸಂದೇಶವಾಗಿದೆ.
ಜಾಗೃತಿ ಸಂದೇಶ ಒಳ್ಳೆಯ ಬೆಳವಣಿಗೆ
“ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚು ಕಾಲ ಕಳೆಯುವರೆಂದರೇ ಯುವಕರು ಹೆಚ್ಚಾಗಿ ಕಂಡು ಬರುತ್ತಾರೆ, ಚುನಾವಣೆ ಜಾಗೃತಿ ಸಂದೇಶ ಅಂಶಗಳು ಕಾಣಿಸಿಕೊಳ್ಳುತ್ತಿರುವದು ಒಳ್ಳೆಯ ಬೆಳವಣಿಗೆ, ಯುವಕರು ಹೆಚ್ಚಾಗಿ ಜನತೆಗೆ ಉಪಯುಕ್ತವಾದ ಸಂದೇಶ ನೀಡಲಿ.” ಆರ್‌.ವೈ ಜಲಗೇರಿ, ಪಿಎಸ್‌ಐ ಗಜೇಂದ್ರಗಡ.

loading...