ಪ್ರಧಾನಿ ಮೋದಿ ಕೇವಲ ಸುಳ್ಳು ಭರವಸೆ ನೀಡುತ್ತಾರೆ: ಯಾವಗಲ್‌

0
35

ನರಗುಂದ: ಮಹದಾಯಿ ಯೋಜನೆಗಾಗಿ ಅನೇಕ ಭಾರಿ ದೆಹಲಿಗೆ ಮುಖ್ಯಮಂತ್ರಿಗಳು ಹಾಗೂ ಈ ಭಾಗದ ರೈತರು ನಿಯೋಗದಲ್ಲಿ ತೆರಳಿ ಪ್ರಧಾನಿಗಳನ್ನು ಭೇಟಿಯಾದರೆ ಆಗ ಸುಮ್ಮನಿದ್ದ ಪ್ರಧಾನಿಗಳು ಚುನಾವಣೆ ಆಗಮಿಸಿದ್ದರಿಂದ ಕೇವಲ ಸಬೂಬು ಹೇಳುತಿದ್ದಾರೆ. ಅಧಿಕಾರಕ್ಕೆ ಬಂದ ಆರು ತಿಂಗಳಿನಲ್ಲಿ ಮಹದಾಯಿ ಯೋಜನೆ ಮಾಡಲಾಗುವುದೆಂದು ಭರವಸೆ ನೀಡುವ ಪ್ರಧಾನಿಗಳ ಮಾತು ಕೇವಲ ಸುಳ್ಳು ಭರವಸೆಯದ್ದಾಗಿದೆ ಎಂದು ಶಾಸಕ ಹಾಗೂ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಆರ್‌. ಯಾವಗಲ್‌ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ನೀತಿಯನ್ನು ಟೀಕೆ ಮಾಡಿದರು.
ಪಟ್ಟಣದ ಗಾಂಧಿ ವರ್ತುಲದಲ್ಲಿ ಬುಧವಾರ ಚುನಾವಣೆ ಭಾಷಣ ಮಾಡಿದ ಅವರು, ಮಹದಾಯಿಗಾಗಿ ಆಗ್ರಹಿಸಿ ರೈತರು ಇಲ್ಲಿ ನಡೆಸಿದ ಧರಣಿ 1029 ದಿನ ಕಂಡಿದೆ. ಇದರಲ್ಲಿ ಸುಮಾರು 38 ರೈತರು ಇದುವರೆಗೂ ಪ್ರತಿಭಟಣೆ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ. ರೈತರ ಬಗ್ಗೆ ಕನಿಕರವಿಟ್ಟು ಮಹದಾಯಿ ಯೋಜನೆ ಮಾಡಲು ಕೇಂದ್ರಕ್ಕೆ ನಿಯೋಗ ಓಯ್ದಾಗ ಹೇಳಿಕೆ ನೀಡದ ಪ್ರಧಾನಿ ಮೋದಿ, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆರು ತಿಂಗಳೊಳಗಾಗಿ ಮಹದಾಯಿ ಯೋಜನೆ ಮಾಡಲು ಸಿದ್ದವೆಂದು ಮತದಾರರನ್ನು ನಂಬಿಸಲು ಹೇಳುತಿದ್ದಾರೆ. ಇದನ್ನು ಮತದಾರರು ನಂಬಬೇಡಿ. 2004 ರಲ್ಲಿ ನರಗುಂದದಲ್ಲಿ ಬಡವರಿಗಾಗಿ 500 ಮನೆಗಳನ್ನು ಕಾಂಗ್ರೆಸ್‌ ಅವಧಿಯಲ್ಲಿ ಆಗ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ನಿರ್ಮಿಸಿ ನೀಡಲು ಎಲ್ಲ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಮುಂದೆ ಬಿಜೆಪಿ ಸರ್ಕಾರ ಬಂದ ನಂತರ ಈ ಆಶ್ರಯ ಮನೆಗಳನ್ನು ಬಡವರಿಗೆ ವಿತರಣೆಮಾಡಲಿಲ್ಲ. ಉಳ್ಳವರಿಗೆ ಅನೇಕ ಅಲ್ಲಿಯ ಮನೆಗಳನ್ನು ಬಿಜೆಪಿ ತನ್ನ ಅಧಿಕಾರ ಅವಧಿಯಲ್ಲಿ ವಿತರಣೆಮಾಡಿತು. ಇದನ್ನು ನಾನು ವಿರೋಧಿಸಿದರೂ ಕೂಡಾ ಪುರಸಭೆಯಲ್ಲಿ ಆಡಳಿತ ಹೊಂದಿದ ಬಿಜೆಪಿ ಬೆಂಬಲಿತರು ನಿರ್ಲಕ್ಷಮಾಡಿದರು. ನಂತರ 2013 ರಲ್ಲಿ ಪುನಹ ನಾನು ಶಾಸಕನಾಗಿ ಆಯ್ಕೆಗೊಂಡು ಬಂದ ನಂತರ ಸುಮಾರು 1100 ನೈಜ ಬಡಫಲಾನುಭವಿಗಳನ್ನು ಗುರುತಿಸಿ ಅವರಿಗೆ ಹೊಸದಾಗಿ ಸಂಕೀರ್ಣರೂಪದಲ್ಲಿ ಮನೆಗಳನ್ನು ನಿರ್ಮಿಸಿ ನಿಡುವ 110 ಕೋಟಿ ರೂದ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಿಡುಗಡೆಗೊಂಡ ಅನುದಾನದಲ್ಲಿ ಯೋಜನೆಮಾಡಲು ಶ್ರಮವಹಿಸಿದ್ದರೆ ಸಧ್ಯ ಇದನ್ನು ಮಾಜಿ ಶಾಸಕ ಪಾಟೀಲರು ವಿರೋಧಿಸಿದ್ದಾರೆ. ಈ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಅರ್ಹಫಲಾನುಭವಿಗಳಿಗೆ ಮನೆ ದೊರೆಯುವಂತೆ ಮಾಡಲಾಗುವುದು. 1982 ರಕ್ಕಿಂತ ಪೂರ್ವವೂ ನಾನು ಈ ಕ್ಷೇತ್ರದ ಜನತೆಯ ಒಡನಾಟ ಹೊಂದಿದ್ದೇನೆ. 1980 ರಲ್ಲಿ ರೈತ ಬಂಡಾಯದಲ್ಲಿ ಅನೇಕ ರೈತ ಮುಖಂಡರು ಜೈಲು ಅನುಭವಿಸಬೇಕಾಯಿತು. ಅವರ ಬಿಡುಗಡೆಗಾಗಿ ನಾನು ಶ್ರಮತೆಗೆದುಕೊಂಡು ರೈತರನ್ನು ಬಂಧ ಮುಕ್ತರನ್ನಾಗಿ ಮಾಡಿದ್ದೇನೆ. ನಾನು ಈ ಕ್ಷೇತ್ರದಲ್ಲಿ ಐದು ಭಾರಿ ಆಯ್ಕೆಯಾಗಲು ನೀವು ನನ್ನಲ್ಲಿ ಇಟ್ಟಿರುವ ನಂಬಿಕೆಗೆ ಚಿರಋುಣಿಯಾಗಿದ್ದೇನೆ.
ಪಟ್ಟಣದ ಸಿದ್ದೇಶ್ವರ ಕಾಲೇಜು ಅಭಿವೃದ್ದಿಗಾಗಿ ಹೆಚ್ಚಿನ ಶ್ರಮ ನನ್ನ ಅವಧಿಯಲ್ಲಿ ತೆಗೆದುಕೊಂಡಿದ್ದರಿಂದ ಶ್ನಾತಕೊತ್ತರ ಪದವಿಯ ಅಧ್ಯಯನವೂ ಇಲ್ಲ ಆರಂಭಗೊಂಡಿದೆ. ಸುಮಾರು ಇದುವರೆಗೂ ಸಿದ್ದೇಶ್ವರ ಕಾಲೇಜಿಗೆ ಸರ್ಕಾರದಿಂದ 10 ಕೋಟಿ ಒದಗಿದ ಅನುದಾನದಲ್ಲಿ ಕಾಲೇಜು ಹೆಚ್ಚಿನ ಪ್ರಗತಿ ಕಂಡಿದೆ. ಒಟ್ಟು 120 ಕೋಟಿ ರೂದಲ್ಲಿ ಪಟ್ಟಣದ ಹೊರವಲಯದಲ್ಲಿ ಇಂಜನೀಯರಿಂಗ್‌ ಕಾಲೇಜು ಕಟ್ಟಡ ಕಾಮಗಾರಿ ಅರಂಭಗೊಂಡಿದೆ. ಜಿಟಿಟಿಸಿ ತಾಂತ್ರಿಕ ಕಾಲೇಜು ಕಟ್ಟಡ ಕಾಮಗಾರಿ ಆರಂಭಗೊಳ್ಳಲಿದೆ. ಇದಕ್ಕಾಗಿ ಪಟ್ಟಣದ ಹೊರವಲಯದ ಹುಣಸೀಕಟ್ಟಿ ಗ್ರಾಮಕ್ಕೆ ತೆರಳುವ ಭಾಗದಲ್ಲಿ ಜಾಗೆ ದೊರೆತಿದ್ದು ಕಟ್ಟಡ ಕೆಲಸ ನಡೆಯಲಿದೆ. ಇದರಿಂದ ತಾಲೂಕಿನಲ್ಲಿ ಕೈಗಾರಿಕೆ ಬೆಳವಣಿಗೆ ಮತ್ತು ಉಧ್ಯೋಗ ಶೃಷ್ಟಿಯಾಗುವುದರಿಂದ ತಾಲೂಕು ಪ್ರಗತಿಯತ್ತ ಸಾಗುತ್ತದೆ. ಬರುವ ಅಗಷ್ಟದಲ್ಲಿ ನಿತ್ಯ ಪಟ್ಟಣಕ್ಕೆ ಕುಡಿಯುವ ನೀರಿನ ಸೌಲಭ್ಯ ದೊರೆಯುವ ಈ ಯೋಜನೆಗೆ ಶ್ರಮ ತೆಗೆದುಕೊಂಡಿದ್ದೇನೆ. ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆಗೆ 2003 ರಲ್ಲಿಯೇ ಎಚ್‌.ಕೆ. ಪಾಟೀಲರು ನೀಲ ನಕ್ಷೆಯನ್ನು ಹಾಗೂ ಅದಕ್ಕೆ ಬೇಕಾದ ಎಲ್ಲ ಮಾಹಿತಿಯನ್ನು ಕಲೆ ಹಾಕಿ ಶ್ರಮಿಸಿದ್ದಾರೆ. ಆಗಿನ ಸಂದರ್ಭದಲ್ಲಿ ಪ್ರಧಾನಿಗಳಾಗಿದ್ದ ವಾಜಪೇಯಿಯವರು ಯೋಜನೆಗೆ ಸಕಾರಾತ್ಮಕ ಉತ್ತರ ನೀಡಿದೇ ಮೌನಿಯಾಗಿದ್ದರು. ಆದರೆ ಈಗ ನಡೆಯುವ ಚುನಾವಣೆಯಲ್ಲಿ ಮಹದಾಯಿ ಕುರಿತು ಈಗಿನ ಪ್ರಧಾನಿ ಮೋದಿ ಮಾತನಾಡುತ್ತಿರುವುದು ಮತದಾರರ ಮನೆಸೆಳೆಯಲು ಮಾತ್ರ ತಮ್ಮ ಭಾಷಣ ಮೀಸಲಿಟ್ಟಿದ್ದಾರೆ. ಕರ್ನಾಟಕದ ಜನತೆಗಿಂತ ಗೋವಾ ಸರ್ಕಾರದ ಹಿತ ಕಾಪಾಡಲು ಕೇಂದ್ರ ಬಿಜೆಪಿ ಸರ್ಕಾರ ಆಸಕ್ತಿವಹಿಸಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಮಲಪ್ರಭಾ ಕಾಲುವೆ ನವೀಕರಣಕ್ಕಾಗಿ ಹೆಚ್ಚಿನ ಅನುದಾನ ಈ ಕ್ಷೇತ್ರಕ್ಕೆ ತರುವ ಮೂಲಕ ಈ ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸಿದ್ದೇನೆ. ಈ ಭಾರಿಯೂ ಜನತೆ ನನಗೆ ಆಶೀರ್ವಧಿಸಿ ಆಯ್ಕೆಗೊಳಿಸಿ ಎಂದು ಅವರು ವಿನಂತಿಸಿಕೊಂಡರು.
ಶಿಲ್ಪಾ ಭೂಪಾಲ, ಶಿವಲೀಲಾ ಕೊಳ್ಳಿಯವರ, ಬಿ.ಆರ್‌. ಹಿರೇಗೌಡ್ರ. ಮಹೇಶ್ವರಯ್ಯ ಸುರೇಬಾನ, ಬಿ.ಎಸ್‌. ಉಪ್ಪಾರ, ವಿಠಲ ಶಿಂಧೆ. ಶೋಭಾ ಕ್ಯಾಡದ, ರಾಜು ಕಲಾಲ, ದೇಸಾಯಿಗೌಡ ಪಾಟೀಲ, ದ್ಯಾಮಣ್ಣ ಸವದತ್ತಿ. ಎಫ್‌.ವೈ. ದೊಡಮನಿ ಮಾತನಾಡಿದರು.
ರಾಜುಗೌಡ ಕೆಂಚನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಚಂಬಣ್ಣ ವಾಳದ, ಚಂದ್ರಗೌಡ ಪಾಟೀಲ (ಕಸಬಾ) ಶ್ರೀನಿವಾಸ ಬೋನಗೇರಿ, ವ್ಹಿ.ಎನ್‌. ಕೊಳ್ಳಿಯವರ. ಡಾ. ಸಂತೋಷ ಯಾವಗಲ್‌, ವಿಠಲ ತಿಮ್ಮರಡ್ಡಿ, ಕೆ.ಬಿ. ಖಲೀಪ್‌, ಉದಯ ಮುಧೋಳೆ, ಸತಾರಸಾಬ ಗಸ್ತಿ, ಟಿ.ಎಸ್‌. ಚನ್ನಪ್ಪಗೌಡ್ರ, ತಾಪಂ ಅಧ್ಯಕ್ಷ ಪ್ರಭು ಯಲಿಗಾರ, ಎಂ.ಬಿ. ಅರಹುಣಸಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ರಾಜು ಕಲಾಲ ನಿರ್ವಹಿಸಿದರು.
ಕಾರ್ಯಕ್ರಮಕ್ಕೂ ಪೂರ್ವ ಪಟ್ಟಣದ ಉಡಚಾ ಪರಮೇಶ್ವರಿ ದೇವಾಲಯದ ಬಳಿಯ ರಸ್ತೆಯಿಂದ ಕಾಂಗ್ರೆಸ್‌ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಂಗ್ರೆಸ್‌ ಪ್ರಚಾರ ರ್ಯಾಲಿ ನಡೆದು ನಂತರ ಕಾರ್ಯಕ್ರಮದ ವೇದಿಕೆಗೆ ಮುಖಂಡರು ಆಗಮಿಸಿ ಭಾಷಣ ಮಾಡಿದರು. ಸುಮಾರು ಐದು ಸಾವಿರ ಜನ ಕಾಂಗ್ರೆಸ್‌ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿದ್ದರು.

loading...