ಕುಡಿಯುವ ನೀರು ಪೂರೈಸಲು ಆಗ್ರಹಿಸಿ ಪ್ರತಿಭಟನೆ

0
26

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಸಮರ್ಪಕವಾಗಿ ಕುಡಿಯುವ ನೀರು ಪೂರೈಸುತ್ತಿಲ್ಲ ಎಂದು ಆರೋಪಿಸಿ ಸಮೀಪದ ಲಕ್ಕಲಕಟ್ಟಿ ಗ್ರಾಮದ ಕೆಲ ನಿವಾಸಿಗಳು ಗ್ರಾಮ ಪಂಚಾಯ್ತಿ ಎದುರು ಖಾಲಿ ಕೊಡಗಳನಿಟ್ಟು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ಕಳೆದ ಒಂದು ತಿಂಗಳು ಚುನಾವಣೆ ಇದ್ದದ್ದರಿಂದ ಪಂಚಾಯ್ತಿ ಅಧಿಕಾರಿಗಳು ಪ್ರತಿನಿತ್ಯವೂ ಸಹ ಚಾಚು ತಪ್ಪದೆ ಗ್ರಾಮದಲ್ಲಿ ನೀರನ್ನು ಪೂರೈಸುತ್ತಿದ್ದರು. ಆದರೆ ಚುನಾವಣೆ ಮುಗಿದಿರುವ ಹಿನ್ನಲೆಯಲ್ಲಿ ಅಧಿಕಾರಿಗಳು ಈಗ ಏಕಾಏಕಿ ಅಸಮರ್ಪಕವಾಗಿ ನೀರನ್ನು ಪೂರೈಸುತ್ತಿದ್ದಾರೆ. ಅಲ್ಲದೆ ಈಗ ಬೇಸಿಗೆ ಇರುವದರಿಂದ ಸಹಜವಾಗಿ ಮನೆಯಲ್ಲಿನ
ದನಕರುಗಳಿಗೆ ಹಾಗೂ ನಮಗೆ ನೀರಿನ ಬಳಕೆ ಹೆಚ್ಚಾಗಿರುತ್ತಿದೆ. ಇಂತಹ ವೇಳೆಯಲ್ಲಿ ಪಂಚಾಯ್ತಿ ಅಧಿಕಾರಿಗಳು ಅಸಮರ್ಪಕವಾಗಿ ನೀರನ್ನು ಪೂರೈಸುತ್ತಿದ್ದಾರೆ. ಹೀಗಾಗಿ ನಮಗೆ ಪ್ರತಿನಿತ್ಯ ಟ್ಯಾಂಕರ್ ಮೂಲಕ ನೀರನ್ನು ಪೂರೈಸಬೇಕು ಇಲ್ಲವೇ ಈ ಹಿಂದಿನಂತೆ ನಲ್ಲಿಗಳ ಮೂಲಕ ಮನೆಗಳಿಗೆ ನೀರನ್ನು ಪೂರೈಸಲು

ಅಧಿಕಾರಿಗಳು ಮುಂದಾಗವವರೆಗೂ ಸಹ ಪ್ರತಿಭಟನೆಯನ್ನು ಹಿಂಪಡೆಯುವದಿಲ್ಲ ಎಂದು ಪ್ರತಿಭಟನಾಕಾರರು ಪಂಚಾಯ್ತಿ ಎದುರು ಪಟ್ಟು ಹಿಡಿದು ಪ್ರತಿಭಟನೆ ನಡೆಸಲು ಮುಂದಾದರು.
ಸ್ಥಳಕ್ಕೆ ಆಗಮಿಸಿದ ಪಂಚಾಯ್ತಿ ಅಧ್ಯಕ್ಷ ಎಸ್.ಆರ್.ಮಾಲಗಿತ್ತಿ ಪ್ರತಿಭಟನಾಕಾರರ ಅಹವಾಲು ಆಲಿಸಿದ ಬಳಿಕ ಮಾತನಾಡಿದ ಅವರು, ಕಳೆದ ನಾಲ್ಕು ದಿನಗಳಿಂದ ಗ್ರಾಮಕ್ಕೆ ಬರುತ್ತಿದ್ದ ಹೊಳೆಯ ನೀರು ಬಾರದ ಪರಿಣಾಮ ನೀರು ಸರಬರಾಜಿನಲ್ಲಿ ತೊಂದರೆಯಾಗಿದೆ. ಹೀಗಾಗಿ ತಕ್ಷಣದಿಂದಲೇ ಗ್ರಾಮದ ಪ್ರತಿಯೊಂದು ಬಡಾವಣೆಗಳಿಗೆ ಪ್ರತಿನಿತ್ಯವೂ ಸಹ ಎಂದಿನಂತೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು.

ಈ ವೇಳೆ ಅಳೆಬಸಪ್ಪ ಬೆನಕನವಾರಿ, ಬಸಪ್ಪ ಹಡಪದ, ಶರಣಪ್ಪ ಬೆನಕನವಾರಿ, ಶರಣಪ್ಪ ಕೊತಬಾಳ, ಶರಣಪ್ಪ ಹಡಪದ, ಮಹೇಶ ಹಡಪದ, ರಮೇಶ ಭಗವತಿ, ರುದ್ರವ್ವ ಬೆನಕನವಾರಿ, ರುದ್ರವ್ವ ರೊಡ್ಡರ, ರೇಣಮ್ಮ ಮದ್ನಾಳ, ಮಲ್ಲಮ್ಮ ಬೆನಕನವಾರಿ, ಸುವರ್ಣಾ ಭಗವತಿ ಸೇರಿದಂತೆ ಇತರರು ಭಾಗವಹಿಸಿದ್ದರು.

loading...