ಅನುದಾನದ ಕೊರತೆ: ಆಮೇಗತಿಯಲ್ಲಿ ಅರಸು ಭವನ ಕಾಮಗಾರಿ

0
46

ನರಗುಂದ: ಪಟ್ಟಣದ ಮಿನಿವಿಧಾನಸೌಧ ಬಳಿಯಲ್ಲಿ ನಿರ್ಮಿಸಲಾಗುತ್ತಿರುವ ದೇವರಾಜು ಅರಸು ಭವನ ಕಟ್ಟಡ ಅನುದಾನದ ಕೊರತೆಯಿಂದ ಪೂರ್ಣಗೊಂಡಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಒಂದು ಕೋಟಿ ರೂ ವೆಚ್ಚದಲ್ಲಿ ಕಳೆದ ಎಪ್ರಿಲ್‍ದಲ್ಲಿಯೇ ಕಟ್ಟಡ ಕಾಮಗಾರಿ ಪೂರ್ಣವಾಗಬೇಕಿತ್ತು. ಅನುದಾನ ಕೊರತೆಯಿಂದ ಕಾಮಗಾರಿ ಆಮೇಗತಿಯಲ್ಲಿ ಸಾಗಿದೆ.

ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕಟ್ಟಡ ನಿರ್ಮಾಣಕ್ಕಾಗಿ ಭೂಮಿ ಪೂಜೆ ಸಲ್ಲಿಸಿದ್ದರು. ಎರಡು ಅಂತಸ್ತಿನಲ್ಲಿ ಈ ಕಟ್ಟಡ ನಿರ್ಮಾಣವಾಗಬೇಕಿದೆ. ಕೆಳ ಹಂತದಲ್ಲಿಯ ಕಟ್ಟಡ ಕಾಮಗಾರಿಯೇ ಇನ್ನೂ ಪೂರ್ಣಗೊಂಡಿಲ್ಲ. ಭೂಸೇನಾ ಇಲಾಖೆಯು ಕಟ್ಟಡ ನಿರ್ಮಾಣದ ಹೊಣೆಗಾರಿಕೆ ವಹಿಸಿಕೊಂಡಿದೆ.
ಜಿಲ್ಲಾ ಹಿಂದುಳಿದ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ ಅವರು ಈ ಕುರಿತು ವಿವರಿಸಿ, ದೇವರಾಜು ಅರಸು ಭವನ ನಿರ್ಮಾಣಕ್ಕಾಗಿ ಕಳೆದ ಸರ್ಕಾರದಲ್ಲಿ ಯೋಜನೆ ರೂಪಿಸಲಾಗಿತ್ತು. ಶಿರಹಟ್ಟಿ ಮತ್ತು ನರಗುಂದ ಪಟ್ಟಣಗಳಲ್ಲಿ ದೇವರಾಜು ಅರಸು ಭವನ ನಿರ್ಮಿಸಲು ಮೊದಲ ಹಂತದಲ್ಲಿ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯಿಂದ ತಲಾ 50 ಲಕ್ಷರೂ ಬಿಡುಗಡೆಗೊಂಡಿತ್ತು. ನಂತರ ಬರಬೇಕಿದ್ದ ಅನುದಾನ ಇದುವರೆಗೂ ದೊರೆತಿಲ್ಲ. ಹೀಗಾಗಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವುದು ವಿಳಂಭವಾಗಿದೆ. ಎರಡು ಅಂತಸ್ತಿನಲ್ಲಿ ಕಟ್ಟಡ ನಿರ್ಮಿಸುವುದು. ಮತ್ತು ಕೆಳ ಕಟ್ಟಡದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಕಚೇರಿ ಮತ್ತು ಮೇಲ್ಬಾಗದಲ್ಲಿ ಭವನ ನಿರ್ಮಿಸಿ ಅಲ್ಲಿ ಹಿಂದುಳಿದ ವರ್ಗಗಳ ಜನಾಂಗದವರಿಗೆ ವಿವಿಧ ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸಲು ಕಡಿಮೆ ದರದಲ್ಲಿ ಬಾಡಿಗೆ ರೂಪದಲ್ಲಿ ನೀಡುವುದು ಈ ಯೋಜನೆಯಲ್ಲಿ ರೂಪಿತವಾಗಿದೆ. ಬಾಖಿ ಅನುದಾನ ಕೆಲ ದಿನಗಳಲ್ಲಿ ದೊರಕಲಿದ್ದು ಕಟ್ಟಡ ನಿರ್ಮಾಣ ತೀವೃಗೊಳಿಸಲು ಭೂಸೇನಾ ಇಲಾಖೆ ಯೋಜನಾ ವ್ಯವಸ್ಥಾಪಕರಿಗೆ ಸೂಚಿಸಲಾಗುವುದೆಂದು ಕಲ್ಲೇಶ ತಿಳಿಸಿದ್ದಾರೆ.

loading...