ಕೃಷಿ ಚಟುವಟಿಕೆಗಳಿಗೆ ಅವಶ್ಯಕ ಬೀಜಗೊಬ್ಬರ ನೀಡಿ: ಬೊಮ್ಮಾಯಿ

0
55

ಸವಣೂರ : ತಾಲ್ಲೂಕಿನಾಧ್ಯಂತ ಸಾರ್ವಜನಿಕರಿಗೆ ಜೂನ್ ತಿಂಗಳ ಮಳೆ ಸಮರ್ಪಕವಾಗಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುವಂತಾಗಬೇಕು ಹಾಗೂ ಕೃಷಿ ಚಟುವಟಿಕೆಗಳಿಗೆ ಅವಶ್ಯವಾಗಿ ಬೇಕಾದ ಬೀಜಗೊಬ್ಬರವನ್ನು ಸಮರ್ಪಕವಾಗಿ ವಿತರಣೆ ಮಾಡುವಂತಾಗಬೇಕು ಎಂದು ಶಾಸಕರಾದ ಬಸವರಾಜ ಬೊಮ್ಮಾಯಿ ಹಾಗೂ ನೆಹರು ಓಲೇಕಾರ ಹೇಳಿದರು.

ಪಟ್ಟಣದ ತಾಲ್ಲೂಕಾ ದಂಡಾಧಿಕಾರಿಗಳ ಸಭಾಂಗಣದಲ್ಲಿ ಶಾಸಕರಾಗಿ ಆಯ್ಕೆಯಾದ ನಂತರ ಮಂಗಳವಾರ ನಡೆದ ತಾಲ್ಲೂಕಾ ಎಲ್ಲ ಅಧಿಕಾರಿಗಳ ತುರ್ತು ಸಭೆಯನ್ನು ಉದ್ದೇಶಿಸಿ ಜಂಟಿಯಾಗಿ ಅವರು ಮಾತನಾಡಿದರು.
ಮುಂಗಾರು ಬಿತ್ತನೆ ಕೆಲಸ ಹಾಗೂ ಕುಡಿಯುವ ನೀರಿನ ಸಮರ್ಪಕ ಪೂರೈಕೆ ಸೇರಿದಂತೆ ತಾಲ್ಲೂಕಿನ ಸಮಸ್ತ ಜನತೆಯ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡುವ ಮೂಲ ಉದ್ದೇಶ ಹೊಂದಿ ಈ ಸಭೆಯನ್ನು ಆಯೋಜಿಸಲಾಗಿದೆ.

ತಾಲ್ಲೂಕಿನಾದ್ಯಂತ ಇವರು 21 ಗ್ರಾಮ ಪಂಚಾಯತಿಗಳಲ್ಲಿ ಸಮರ್ಪಕವಾಗಿ ಸಾರ್ವಜನಿಕರಿಗೆ ನೀರು ಪೂರೈಕೆಯಾಗಬೇಕು. ನೀರಿನ ತೊಂದರೆ ಇರುವ ಗ್ರಾಮಗಳಲ್ಲಿ ಬೊರ್‍ವೆಲ್ ಕೊರೆಸಿ ಅದಕ್ಕೆ ಬೇಕಾದ ಪಂಚಾಯತಿಯಲ್ಲಿ ಲಭ್ಯವಿರುವ ಹಳೆಯ ಪರಿಕರಗಳನ್ನು ಉಪಯೋಗಿಸಿಕೊಳ್ಳಬೇಕು, ಅನಿವಾರ್ಯತೆಯಿದ್ದರೆ ಹೊಸದಾಗಿ ಖರೀದಿಸಿ ಸಮರ್ಪಕವಾಗಿ ಬಳಕೆ ಮಾಡಬೇಕು ಮತ್ತು ಪೈಪ ಲೈನ್ ಅವಶ್ಯಕತೆ ಇದ್ದು ಕಡಿಮೆ ದೂರದಲ್ಲಿದ್ದರೆ ಅದಕ್ಕೆ 14 ನೇ ಹಣಕಾಸಿನಲ್ಲಿ ಕ್ರಿಯಾ ಯೋಜನೆ ರೂಪಿಸಿ ವ್ಯವಸ್ಥಿತವಾಗಿ ಕಲ್ಪಿಸಬೇಕು. ದೂರದಲ್ಲಿದ್ದರೆ ಅದಕ್ಕೆ ಕ್ರಿಯಾ ಯೋಜನೆಯನ್ನು ರೂಪಿಸಿ ಜಿಲ್ಲಾ ಪಂಚಾಯತಿಗೆ ಕಳುಹಿಸಿ ಅನುದಾನವನ್ನು ಪಡೆದು ನೀರು ಪೂರೈಸುವಂತಾಗಬೇಕು. ಅನಾವಶ್ಯಕ ಪೈಪ್‍ಲೈನ್‍ಗಳಿಗೆ ಅವಕಾಶ ನೀಡದಂತೆ ನೋಡಿಕೊಳ್ಳಬೇಕು. ಗ್ರಾಪಂನಲ್ಲಿರುವ ಬೋರ್‍ವೆಲ್‍ಗಳ ಸಂಖ್ಯೆ,ಕೊರೆಸಿದ ದಿನಾಂಕ, ಆಳ, ನೀರಿನ ಪ್ರಮಾಣ, ಪೂರೈಕೆಯಾಗುತ್ತಿರುವ ದಿನ ಮತ್ತು ಅವುಗಳ ಸ್ಥಿತಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಯಾರಿಮಾಡಿ ಮಾಹಿತಿ ನೀಡಬೇಕು.
ಸವಣೂರ ನಗರದ ಹೊರವಲಯದಲ್ಲಿರುವ ಬಡಾವಣೆಗಳಿಗೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು ಆ ಸ್ಥಳಗಳಿಗೆ ಬೋರ್‍ವೆಲ್ ಕೊರೆಸಿ ಪೈಪ್‍ಲೈನ್ ಮೂಲಕ ನೀರು ಪೂರೈಕೆಯಾಗುವಂತಾಗಬೇಕು. ಅವಶ್ಯಕತೆ ಇದ್ದ ಬಡಾವಣೆಗಳಲ್ಲಿ 4 ರಿಂದ 5 ಬೋರ್‍ವೆಲ್ ಕೊರೆಸಿ ನೀರು ಪೂರೈಸಿ ತ್ವರಿತ ಗತಿಯಲ್ಲಿ ಮಾಹಿತಿ ನೀಡಿಬೇಕು ಎಂದು ಪುರಸಭೆ ಅಧಿಕಾರಿಗೆ ಶಾಸಕ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಮುಂಗಾರು ಮಳೆ ಪ್ರಾರಂಭವಾಗಿದ್ದು ರೈತರ ಕೃಷಿ ಚಟುವಟಿಕೆಗಳು ಬರದಿಂದ ಸಾಗಿದ್ದು, ಕಳೆದ ಸಾಲಿನಲ್ಲಿ ಸೋಯಾ ಬೀಜದ ಕೊರತೆ ಉಂಟಾಗಿತ್ತು ಆದರೆ ಈ ವರ್ಷ ಪ್ರತಿ ವರ್ಷಕ್ಕಿಂತ ಸೋಯಾ ಬಿತ್ತನೆ ಕ್ಷೇತ್ರ ಹೆಚ್ಚಾಗುವ ಮುನ್ಸೂಚನೆ ಕಂಡು ಬರುತ್ತಿದ್ದು ರೈತರಿಗೆ ಸಮರ್ಪಕವಾಗಿ ಬೀಜ ಗೊಬ್ಬರಗಳ ಪೂರೈಕೆ ಮಾಡಬೇಕು ಎಂದರು.
ಕೃಷಿ ಅಧಿಕಾರಿ ಮಾತನಾಡಿ ಸೋಯಾ 800 ಕ್ವಿಂಟಲ್, ಶೇಂಗಾ 500 ಕ್ವಿಂಟಲ್ ಅವಶ್ಯಕತೆ ಇದ್ದು ಅದರಲ್ಲಿ ಸೋಯಾ 350 ಕ್ವಿಂಟಲ್, ಶೇಂಗಾ 150 ಕ್ವಿಂಟಲ್ ಶೇಖರಣೆ ಮಾಡಲಾಗಿದೆ. 480 ಮೆಟ್ರಿಕ್ ಟನ್ ರಸಗೊಬ್ಬರಗಳ ಶೇಖರಣೆ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದಾಗ ಶಾಸಕರು ಮಾತನಾಡಿ ತಾಲ್ಲೂಕಿಗೆ ಡಿಎಪಿ ರಸಗೊಬ್ಬರ ಎಷ್ಟು ಬೇಕು ಎನ್ನುವ ಅಂದಾಜು ಪ್ರತಿಯನ್ನು ತಯಾರಿಸಿ ನೀಡಬೇಕು. ಮಾಹಿತಿಯನ್ನು ಆಧರಿಸಿ ಸಂಬಂದಪಟ್ಟ ಕಂಪನಿ ಮುಖ್ಯಸ್ಥರೊಂದಿಗೆ ಮಾತನಾಡಿ ಸಮರ್ಪಕವಾಗಿ ಪೂರೈಸಲು ಸಹಕರಿಸಲಾಗುವದು ಎಂದರು.

ಕೃಷ್ಣಾಪೂರ ಗ್ರಾಮದ ಕೊಳವೆ ಬಾವಿಯೊಂದರಲ್ಲಿ ಇರುವೆಗಳೇ ತುಂಬಿಕೊಂಡಿದ್ದರೂ ಕುಡಿಯಲು ಅದೇ ಕೊಳವೆ ಬಾವಿಯ ನೀರು ಬೇಕೆಂದು ಗ್ರಾಮದ ಜನರ ಒತ್ತಾಯವಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ಹೇಳಿದ ಕಡಕೋಳ ಗ್ರಾಪಂ ಪಿಡಿಓ ಹೇಳಿಕೆಗೆ ಶಾಸಕ ನೆಹರು ಓಲೇಕಾರ ಮಾತನಾಡಿ ಈ ಕುರಿತಂತೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ ತಾಲ್ಲೂಕಿನಲ್ಲಿ ಟಾಸ್ಕ್‍ಫೋರ್ಸ ಕಮೀಟಿಗೆ ತಾಲ್ಲೂಕಾ ದಂಡಾಧಿಕಾರಿ ಅಧ್ಯಕ್ಷತೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ,ಜಿಪಂ ಸಕಾ ಅಭಿಯಂತರ,ಹೆಸ್ಕಾಂ ಸಕಾ ಅಭಿಯಂತರರ ತಂಡವನ್ನು ನಿಯೋಜಿಸಲಾಗಿದ್ದು,ಈ ಕಮೀಟಿಯ ಸದಸ್ಯರುಗಳು ಪ್ರತಿದಿನ ಕನಿಷ್ಟ ಒಂದು ಗಂಟೆಕಾಲ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಡುವಲ್ಲಿ ಪ್ರಯತ್ನಿಸಬೇಕೆಂದು ಸೂಚಿಸಿದರು.

ಗ್ರಾಮೀಣ ಭಾಗದಲ್ಲಿ ಹಲವಾರು ಸಮಸ್ಯೆಗಳು ಉಲ್ಭಣಗೊಂಡಿವೆ ಸಾಮಾನ್ಯವಾಗಿ ಆಯಾ ಗ್ರಾಪಂನಲ್ಲಿ ಪಿಡಿಓಗಳ ಗೈರುಹಾಜರಿ ನಿರಂತರವಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು ಕಡ್ಡಾಯವಾಗಿ ಪಿಡಿಓಗಳು ಕೇಂದ್ರಸ್ಥಾನದಲ್ಲಿ ಇದ್ದುಕೊಂಡು ಜನತೆಯ ಅಹವಾಲುಗಳಿಗೆ ಸ್ಪಂದಿಸಬೇಕೆಂದು ಶಾಸಕ ಓಲೇಕಾರ ಕರೆನೀಡಿದರು.
ಈ ಸಂದರ್ಭದಲ್ಲಿ ಶಾಸಕರನ್ನು ಆಯಾ ಇಲಾಖೆಯ ವತಿಯಿಂದ ಸನ್ಮಾನಿಸಿಲಾಯಿತು. ಸಭೆಯಲ್ಲಿ ತಾಲೂಕಾ ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

loading...