ಬಿತ್ತನೆ ಕಾರ್ಯಕ್ಕೆ ಸಜ್ಜಾದ ರೈತ

0
90

ಯಲ್ಲಾಪುರ: ಕಳೆದ ಮೂರ್ನಾಲ್ಕು ವರ್ಷದಿಂದ ಬರಗಾಲದಿಂದ ಬಸವಳಿದು ಬೆಂಡಾಗಿದ್ದ ರೈತರಲ್ಲಿ ತಾಲೂಕಿನಾದ್ಯಂತ ಆರಂಭವಾಗಿರುವ ಮುಂಗಾರು ಮಳೆ ಮಂದಹಾಸ ಮೂಡಿಸಿದ್ದು, ರೈತರು ತಮ್ಮ ಜಮೀನನ್ನು ಬಿತ್ತನೆ ಕಾರ್ಯಕ್ಕಾಗಿ ಸಜ್ಜುಗೊಳಿಸುತಿದ್ದಾರೆ. ತಾಲೂಕಿನಲ್ಲಿ ಶೇ 85% ರಷ್ಟು ರೈತರು ಎತ್ತಿನ ಬದಲು ಯಂತ್ರಗಳ ಮೂಲಕ ಕೃಷಿ ಚಟುವಟಿಕೆಗಳತ್ತ ಮುಖ ಮಾಡುತ್ತಿದ್ದಾರೆ.
ತಾಲೂಕಿನ ಕಿರವತ್ತಿ ಹಾಗೂ ಮದನೂರು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಈಗಾಗಲೇ ಭೂಮಿ ಹದಗೊಳಿಸುವ ಕಾರ್ಯ ನಡೆಯುತ್ತಿದ್ದು, ಮೇ ತಿಂಗಳಲ್ಲಿ ಆಗಾಗ ಮುಂಗಾರು ಮಳೆ ಸುರಿದಿದ್ದು, ಬಿತ್ತನೆ ಕೆಲಸಕ್ಕೆ ಪೂರಕವಾಗಿ ಪರಿಣಮಿಸಿದ್ದರಿಂದ ರೈತ ವಲಯದಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಯಲ್ಲಾಪುರ ತಾಲೂಕಿನಲ್ಲಿ 3840 ಹೆಕ್ಟೇರ್ ಕೃಷಿ ಬೆಳೆಯುವ ಪ್ರದೇಶವಿದ್ದು, ಮದನೂರ ಹಾಗೂ ಕಿರವತ್ತಿ ಭಾಗಗಳಲ್ಲಿ ಅಧಿಕ ಪ್ರಮಾಣದಲ್ಲಿ ಬಿತ್ತನೆ ಪ್ರದೇಶವಿದೆ. ಉಳಿದ ಪ್ರದೇಶದಲ್ಲಿ ನಾಟಿ ಪದ್ದತಿ ರೂಢಿಯಲ್ಲಿದೆ. ತಾಲೂಕಿನಲ್ಲಿ 560 ಹೆಕ್ಟೇರ್ ಬಿತ್ತನೆ, 3280 ಹೆಕ್ಟೇರ್ ನಾಟಿ ಪ್ರದೇಶವಿದ್ದು, 86 ಹೆಕ್ಟೇರ್ ಹತ್ತಿ ಹಾಗೂ 100 ಹೆಕ್ಟೇರ್ ಮೆಕ್ಕಜೋಳ ಬೆಳೆಯುವ ಪ್ರದೇಶವಿದೆ.
ಈಗಾಗಲೇ ಬಿತ್ತನೆ ಬೀಜವನ್ನು ಸಹಾಯಧನದಲ್ಲಿ ಕೃಷಿ ಇಲಾಖೆಯು ಪೂರೈಸುತ್ತಿದ್ದು ಈಗಾಗಲೇ ರೈತರು 10 ಕ್ವಿಂಟಾಲ್(40 ಬ್ಯಾಗ್) ಬಿತ್ತನೆ ಬೀಜ ಹಾಗೂ 120 ಕೆ.ಜಿ ಮೆಕ್ಕೆಜೋಳ ತೆಗೆದುಕೊಂಡು ಹೋಗಿದ್ದಾರೆ. ಭೂಮಿ ಹದ ಬಂದ ಮೇಲೆ ಬಿತ್ತನೆ ಚಟುವಟಿಕೆ ನಡೆಸಲಿದ್ದಾರೆ. ಈ ಬಾರಿ ಬಿತ್ತನೆ ಮಾಡುವ ರೈತರಿಗೆ ಉತ್ತಮವಾಗಿ ಮಳೆಯಾಗಿದೆ. ಎರೆಹುಳು ಗೊಬ್ಬರ ಮತ್ತು ಜೌಷಧಿಗಳು ಸಾಕಷ್ಟು ಪ್ರಮಾಣದಲ್ಲಿ ಕೃಷಿ ಇಲಾಖೆಯಲ್ಲಿ ದಾಸ್ತಾನಿದೆ. ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎನ್ನುತ್ತಾರೆ ಯಲ್ಲಾಪುರ ಕೃಷಿ ಅಧಿಕಾರಿ ಟಿ.ಎಸ್.ಚಿಕ್ಕಮಠ.

ಜಯಾ, ಅಭಿಲಾಷ, ಎಂ.ಟಿ.ಯು (100) ಈ ಮೂರು ಭತ್ತದ ತಳಿಗಳು ಯಲ್ಲಾಪುರ ಕೃಷಿ ಉಪನಿರ್ದೇಶಕರ ಕಚೇರಿಯಲ್ಲಿ ಲಭ್ಯವಿದ್ದು, ಪ್ರತಿ 25 ಕೆ.ಜಿಗೆ ಜಯಾ ಭತ್ತಕ್ಕೆ 200, ಅಭಿಲಾಷಕ್ಕೆ 200, ಎಂ.ಟಿ.ಯು (100) 200 ರೂ.ಗಳನ್ನು ಸರ್ಕಾರವು ಸಹಾಯಧನದಲ್ಲಿ ರೈತರಿಗೆ ನೀಡುತ್ತಿದೆ. ಗೋವಿನಜೋಳಕ್ಕೆ 100 ರೂ. ಸಹಾಯಧನದಲ್ಲಿ ರೈತರಿಗೆ ವಿತರಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮತ್ತಷ್ಟು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಪೂರೈಸಲಾಗುತ್ತಿದೆ. ಇನ್ನೂ ಹೆಚ್ಚಿನ ಭತ್ತದ ತಳಿಗಳು ಮೂಲ್ನಾಲ್ಕು ದಿನಗಳಲ್ಲಿ ಬರಲಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ರೈತರಲ್ಲಿ ಕೃಷಿಯಂತ್ರಗಳ ಅವಲಂಬನೆ ಹೆಚ್ಚಾಗಿ ಕಂಡುಬರುತ್ತಿದೆ. ಆಧುನಿಕತೆಯ ಭರಾಟೆಯಿಂದ ಕೂಲಿಯಾಳುಗಳ ಕೊರತೆ ಎದುರಾಗಿರುವುದರಿಂದ ಹಾಗೂ ಸಮಯದ ಉಳಿತಾಯವಾಗುವದರಿಂದ ರೈತರು ಯಂತ್ರಗಳ ಮೊರೆ ಹೋಗುತ್ತಿದ್ದಾನೆ. ರೈತನ ಹೊಲದಲ್ಲೀಗ ಎತ್ತಿನ ಬದಲು ಟ್ರ್ಯಾಕ್ಟರ್ ಹಾಗೂ ಪವರ್ ಟಿಲ್ಲರ್‍ಗಳನ್ನು ಬಳಸಿ ಭೂಮಿ ಹದಗೊಳಿಸುತ್ತಿರುವುದು ಬಹುತೇಕ ಕಡೆಗಳಲ್ಲಿ ಕಂಡು ಬರುತ್ತಿದೆ. ಇನ್ನೂಳಿದ ರೈತರು ತಮ್ಮ ಹಳೆ ಆಧುನಿಕ ಪದ್ದತಿಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಅಲ್ಲದೇ ವರ್ಷದಿಂದ ವರ್ಷಕ್ಕೆ ಭತ್ತ ,ಹತ್ತಿ, ಇತರ ಬೆಳೆಗಾರರ ಸಂಖ್ಯೆ ಕ್ಷಿಣಿಸುತ್ತಿದ್ದು ಬಾಳೆ ಅಡಕೆ ಸೇರಿದಂತೆ ತೋಟಗಾರಿಕೆ ಬೆಳೆಗಳತ್ತ ಆಸಕ್ತಿ ತೋರುತ್ತಿದ್ದಾರೆ.

loading...