ಜನತೆಗೆ ಕುಮಾರಸ್ವಾಮಿ ಅವಮಾನ ಮಾಡಿದ್ದಾರೆ : ಕಳಕಪ್ಪ

0
57

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಮುಖ್ಯಮಂತ್ರಿಯಾದರೆ ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಚುನಾವಣೆ ವೇಳೆಯಲ್ಲಿ ಮತಯಾಚನೆ ಮಾಡಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬಳಿಕ ತಾವು ರಾಜ್ಯದ ಜನತೆಯಿಂದ ಮುಖ್ಯಮಂತ್ರಿಯಾಗಿಲ್ಲ, ಕಾಂಗ್ರೆಸ್‍ನಿಂದ ಮುಖ್ಯಮಂತ್ರಿಯಾಗಿದ್ದೇನೆ ಎನ್ನುವ ಮೂಲಕ ರೈತರ ಸಾಲಮನ್ನಾದ ಬಗ್ಗೆ ಚಿಂತಿಸುವದಾಗಿ ತಿಳಿಸಿರುವುದು ಖಂಡನಾರ್ಹ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

ರಾಜ್ಯದ ರೈತರ ಸಾಲಮನ್ನಾಗೆ ಒತ್ತಾಯಿಸಿ ಬಿಜೆಪಿ ಕರೆ ನೀಡಿದ್ದ ಬಂದ್ ಹಿನ್ನಲೆಯಲ್ಲಿ ಸೋಮವಾರ ಬಿಜೆಪಿ ರೈತ ಮೋರ್ಚಾ, ಯುವ ಮೋರ್ಚಾ ಹಾಗೂ ಸ್ಥಳೀಯ ಘಟಕದ ಬಿಜೆಪಿ ಕಾರ್ಯಕರ್ತರಿಂದ ನಡೆದ ಗಜೇಂದ್ರಗಡ ಬಂದ್‍ನಲ್ಲಿ ಭಾಗವಹಿಸಿ ಮಾತನಾಡಿದರು.

ಚುನಾವಣೆಗೆ ಮುನ್ನ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾದ 24 ಗಂಟೆಯೊಳಗೆ ರೈತರ ರಾಷ್ಟ್ರೀಕೃತ ಹಾಗೂ ಸಹಕಾರಿ ಸಂಘಗಳಲ್ಲಿನ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದರು. ಆದರೆ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಜನತೆ ನನಗೆ ಅಧಿಕಾರ ನೀಡಿಲ್ಲ. ಕಾಂಗ್ರೆಸ್ ಪಕ್ಷವು ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಹೀಗಾಗಿ ಕಾಂಗ್ರೆಸ್‍ನ ಮುಲಾಜಿನಲ್ಲಿದ್ದೇನೆ ಎಂದಿರುವುದು ರಾಜ್ಯದ ಜನತೆಗೆ ಎಚ್.ಡಿ.ಕುಮಾರಸ್ವಾಮಿ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜ್ಯದ ಜನತೆ ಆದೇಶವನ್ನು ಧಿಕ್ಕರಿಸಿ ಕೇವಲ ಅಧಿಕಾರದ ಲಾಲಸೆಯಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಅಪವಿತ್ರ ಮೈತಿಯಿಂದಾಗಿ ರಾಜ್ಯದಲ್ಲಿ ಸಮಿಶ್ರ ಸರ್ಕಾರ ರಚನೆಯಾಗಿದೆ. ಹೀಗಾಗಿ ರಾಜ್ಯದ ರೈತರ, ನೇಕಾರರ ಹಾಗೂ ಮೀನುಗಾರರ ಸಾಲಮನ್ನಾ ಬಗ್ಗೆ ಚಿಂತಿಸುವುದನ್ನು ಬಿಟ್ಟು ಕೇವಲ ಸಚಿವ ಸ್ಥಾನಕ್ಕಾಗಿ ಎರಡೂ ಪಕ್ಷಗಳು ಪೈಪೋಟಿ ನಡೆಸುತ್ತಿರುವುದು ವಿಪರ್ಯಾಸ. ಅಲ್ಲದೆ ಸಮಿಶ್ರ ಸರ್ಕಾರ ರೈತರ ಸಾಲಮನ್ನಾ ಮಾಡುವವರೆಗೂ ಸಹ ವಿಧಾನಸೌಧದ ಒಳಗೆ ಹಾಗೂ ಹೊರೆಗೆ ನಿರಂತರವಾಗಿ ಪಕ್ಷವು ಹೋರಾಟ ನಡೆಸಲಿದೆ ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಅಶೋಕ ವನ್ನಾಲ ಮಾತನಾಡಿ, ರಾಜ್ಯದಲ್ಲಿ ಈ ಹಿಂದೆ ಬಿಜೆಪಿಯೊಂದಿಗೆ ಸರ್ಕಾರ ರಚನೆ ಮಾಡುವ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀಡಿದ್ದ ವಚನ ಮುರಿದಿದ್ದ ಕುಮಾರಸ್ವಾಮಿ ಅವರನ್ನು ರಾಜ್ಯದ ಜನತೆ ಕ್ಷಮಿಸಿಲ್ಲ. ಈಗ ಮತ್ತೊಮ್ಮೆ ಕುಮಾರಸ್ವಾಮಿ ಅವರು ಅಧಿಕಾರದ ದಾಹದಿಂದ ಕಾಂಗ್ರೆಸ್‍ನೊಂದಿಗೆ ಮೈತ್ರಿ ಸರ್ಕಾರ ರಚಿಸಿದ್ದಾರೆ ಎಂದರು.

ಗಜೇಂದ್ರಗಡ ಬಂದ್ ಹಿನ್ನಲೆಯಲ್ಲಿ ಸ್ಥಳೀಯ ಬಹುತೇಕ ಅಂಗಡಿ ಮುಗ್ಗಟ್ಟುಗಳು ಸ್ವಯಂ ಪ್ರೇರಣೆಯಿಂದ ಬಂದ್ ಆಗಿದ್ದು ಕಂಡು ಬಂದಿತು. ಅಲ್ಲದೆ ಇತ್ತ ಪಟ್ಟಣದಲ್ಲಿ ಖಾಸಗಿ ಹಾಗೂ ಸರ್ಕಾರಿ ವಾಹನ ಸಂಚಾರ, ಬ್ಯಾಂಕ್ ವಹಿವಾಟು, ಕಾಲೇಜು, ತರಕಾರಿ ಹಾಗೂ ಎಪಿಎಂಸಿ ಮಾರುಕಟ್ಟೆಯ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು.

ಅಮರೇಶ ಬಳಿಗೇರ, ಷಣ್ಮುಖಪ್ಪ ಚಿಲ್‍ಝರಿ, ಶರಣಪ್ಪ ರೇವಡಿ, ರವಿ ಕಲಾಲ, ಬಸವರಾಜ ಬಂಕದ, ಯಲ್ಲಪ್ಪ ಬಂಕದ,ಮೋಹನಸಾ ರಾಯಬಾಗಿ, ಶರಣಪ್ಪ ಚಳಗೇರಿ, ಪರಶುರಾಮ ಚಿಲ್‍ಝರಿ, ಮುತ್ತಣ್ಣ ಚೆಟ್ಟರ, ಶಂಕರ ಇಂಜನಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಈ ವೇಳೆ ಸಂಧರ್ಭದಲ್ಲಿ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ್ರ ಸಾವಿನ ಹಿನ್ನಲೆಯಲ್ಲಿ ಮೌನಾಚರಣೆ ಆಚರಿಸಿದರು.

loading...