ಜನರಲ್ಲಿ ಅರಿವು ಮೂಡಿಸಲು ಮಾಧ್ಯಮದ ಸಹಭಾಗಿತ್ವ ಅಗತ್ಯ: ಡಾ.ಗುಣಾರಿ

0
65

ಕನ್ನಡಮ್ಮ ಸುದ್ದಿ-ವಿಜಯಪುರ: ಜಿಲ್ಲೆಯಲ್ಲಿ ಡೆಂಗಿ ಜ್ವರ ಹರಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜನರಲ್ಲಿ ಅರಿವು ಮೂಡಿಸಲು ಮಾಧ್ಯಮದ ಸಹಭಾಗಿತ್ವ ಅತ್ಯಗತ್ಯವಾಗಿದೆ ಎಂದು ಜಿಲ್ಲಾ ರೋಗವಾಹಕ ಅಶ್ರಿತ ನಿಯಂತ್ರಣಾಧಿಕಾರಿಗಳಾದ ಡಾ.ಸಂಪತ್ ಗುಣಾರಿ ಹೇಳಿದರು.
ಸೋಮವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ರಾಷ್ಟ್ರೀಯ ಡೆಂಗಿ ರೋಗ ವಿರೋಧಿ ಮಾಸಾಚರಣೆ ಅಂಗವಾಗಿ ಮಾಧ್ಯಮ ಪ್ರಸಾರ ಮತ್ತು ಸಂವೇದನಾಶೀಲತೆ ಅಧಿವೇಶನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಡೆಂಗಿ ಜ್ವರ ಮಾರಕವಾದ ಖಾಯಿಲೆ. ಈಡೀಸ್ ಇಜಿಪ್ತೈ ಎಂಬ ರೋಗವಾಹಕ ಸೊಳ್ಳೆಯ ಕಚ್ಚುವಿಕೆಯಿಂದ ಈ ರೋಗವು ಹರಡುತ್ತದೆ. ರೋಗವನ್ನು ನಿಯಂತ್ರಿಸಲು ಎಲ್ಲ ನೀರಿನ ತೊಟ್ಟಿ, ಡ್ರಮ್ಮು, ಬ್ಯಾರೆಲ್ , ಕೂಲರ್ ಮುಂತಾದವುಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳಬೇಕು. ನೀರಲ್ಲಿ ಬಾಲಹುಳುಗಳು ಆಗಿದ್ದರೆ ಸೋಸಿ ಬಳಸಬೇಕು. ನೀರು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಮುಂತಾದವುಗಳನ್ನು ಸೊಳ್ಳೆಗಳು ಒಳಗೆ ನುಸುಳದಂತೆ ಸರಿಯಾದ ಮುಚ್ಚಳದಿಂದ ಮುಚ್ಚಬೇಕು. ಬಯಲಿನಲ್ಲಿ ಟೈರು, ಎಳೆನೀರಿನ ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆ ನೀರು ನಿಲ್ಲದಂತೆ ಎಚ್ಚರವಹಿಸಿ, ಸೂಕ್ತ ವಿಲೇವರಿ ಮಾಡಬೇಕು.
ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಯನ್ನು ಬಳಸಿ, ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸಬೇಕು.

ಈ ರೋಗದ ಲಕ್ಷಣಗಳು, ಮುಂಜಾಗ್ರತಾ ಕ್ರಮ, ಚಿಕಿತ್ಸೆ ಕುರಿತು ಮಾಧ್ಯಮದವರು ಹೆಚ್ಚು ಹೆಚ್ಚು ಪ್ರಚಾರ ಕೈಗೊಳ್ಳುವ ಮೂಲಕ ರೋಗವನ್ನು ತಡೆಗಟ್ಟಲು ಕೈ ಜೋಡಿಸುವಂತೆ ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ನಿಫಾ ವೈರಸ್ ಸೋಂಕು ರೋಗ ಕುರಿತು ವಿವರಿಸಲಾಯಿತು. ಇಲ್ಲಿಯವರೆಗೆ ಕರ್ನಾಟಕದಲ್ಲಿ ಈ ರೋಗ ಕುರಿತು ಯಾವುದೇ ವರದಿಯಾಗಿಲ್ಲ. ಈಗಾಗಲೇ ರಾಜ್ಯದಾದ್ಯಂತ ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಸುರೇಶ ಹೊಸಮನಿ, ಡಾ.ರಿಯಾಜ ದೇವಳ್ಳಿ, ಡಾ.ಸುರೇಶ ಪಾಶ್ಚಾಪುರ, ಪತ್ರಕರ್ತ ಕೆ.ಕೆ.ಕುಲಕರ್ಣಿ ಇತರರು ಉಪಸ್ಥಿತರಿದ್ದರು.

loading...