ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಮಾರಕ: ಸಂಸದ ಉದಾಸಿ

0
56

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಬೇನಾಮಿ ಆ್ಯಕ್ಟ್ ತರಲು ಮುಂದಾಗಿರುವ ಬಿಜೆಪಿಯನ್ನು ಶತಾಯ ಗತಾಯವಾಗಿ ಅಧಿಕಾರದಿಂದ ದೂರವಿಡುವ ಉದ್ಧೇಶದಿಂದ ಎಲ್ಲ ಪ್ರಾದೇಶಿಕ ಪಕ್ಷಗಳೊಂದಿಗೆ ಕಾಂಗ್ರೆಸ್ ಪಕ್ಷವು ಸಮಿಶ್ರ ಸರ್ಕಾರ ರಚನೆಗೆ ಮುಂದಾಗಿದೆ. ಆದರೆ ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಕಾಂಗ್ರೆಸ್ ಪಕ್ಷವನ್ನು ದೇಶಾದ್ಯಂತ ಈಗಾಗಲೇ ಜನತೆ ಕಾಂಗ್ರೆಸ್ ಪಕ್ಷವನ್ನು ತೀರಸ್ಕರಿಸಿದ್ದಾರೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

ಪಟ್ಟಣದ ಜಿ.ಕೆ.ಬಂಡಿ ಗಾರ್ಡನಲ್ಲಿ ಶಾಸಕ ಕಳಕಪ್ಪ ಬಂಡಿ ಅವರಿಂದ ರವಿವಾರ ನಡೆದ ರೋಣ ಮತಕ್ಷೇತ್ರದ ಬಿಜೆಪಿಯ ಕಾರ್ಯಕರ್ತರು ಹಾಗೂ ಕ್ಷೇತ್ರದ ಮತದಾರರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನಸಭೆಯ ಶಾಸಕರಾಗಲು ಮತಹಾಕಿದ ಜನತೆಯ ಮುಲಾಜಿನಲ್ಲಿರಬೇಕಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಂಗ್ರೆಸ್‍ನ ಮುಲಾಜಿನಲ್ಲಿದ್ದೇನೆ ಎನ್ನುವ ಮೂಲಕ ಮತದಾರರಿಗೆ ಅವಮಾನ ಮಾಡಿದ್ದಾರೆ. ಅಲ್ಲದೆ ಈ ಹಿಂದಿನ ಸಮಿಶ್ರ ಸರ್ಕಾರದ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕಾರ ನೀಡುವ ವಚನ ಮುರಿದ್ದಿದ್ದ ಕುಮಾರಸ್ವಾಮಿ ಅವರಿಂದ ಇಂತಹ ಜನವಿರೋಧಿ ನಿಲುವ ನಿರೀಕ್ಷಿತವಾಗಿತ್ತು ಎಂದ ಅವರು, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ರಾಜ್ಯದ ಅಭಿವೃದ್ಧಿಗಿಂತ ಅಧಿಕಾರ ಮುಖ್ಯವಾಗಿದೆ. ಹೀಗಾಗಿ ಜನಾದೇಶವನ್ನು ಧಿಕ್ಕರಿಸಿ ಸಮಿಶ್ರ ಸರ್ಕಾರ ರಚನೆ ಮಾಡಿದ್ದಾರೆ. ಆದರೆ ಈಗಾಗಲೇ ಸಚಿವ ಸ್ಥಾನಕ್ಕಾಗಿ ಶಾಸಕರು ತೆರೆ ಮರೆಯಲ್ಲಿ ಕಚ್ಚಾಟ ನಡೆಸುತ್ತಿರುವದರಿಂದ ಮುಂದಿನ ದಿನಗಳಲ್ಲಿ ಸಮಿಶ್ರ ಸರ್ಕಾರವು ಪತನವಾಗಲಿದೆ ಎಂದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್.ಕರಿಗೌಡ್ರ ಮಾತನಾಡಿ, ರೋಣ ಮತಕ್ಷೇತ್ರದಲ್ಲಿ ಕಾಂಗ್ರೆಸ್‍ನ್ನು ಮತ್ತೊಮ್ಮೆ
ಗೆಲ್ಲಿಸಲೇಬೇಕು ಎಂದು ಹಠಕ್ಕೆ ಬಿದ್ದು ಚುನಾವಣೆ ನಡೆಸಲು ಮುಂದಾಗಿದ್ದರಿಂದ ಐದು ವರ್ಷಗಳ ಕಾಲ ಲೂಟಿ ಮಾಡಿದ್ದ ಮರಳಿನ ಹಣವನ್ನು ಚೆಲ್ಲಿ ಮತ ಗಿಟ್ಟಿಸಿಕೊಳ್ಳಲು ಹೂಡಿದ್ದ ಷಡ್ಯಂತ್ರವನ್ನು ಕ್ಷೇತ್ರದ ಜನತೆ ಧಿಕ್ಕರಿಸಿ ಅಭಿವೃದ್ಧಿಗೆ ಪೂರಕವಾದ ಆಡಳಿತಗಾರ ಕಳಕಪ್ಪ ಬಂಡಿ ಅವರನ್ನು ಕ್ಷೇತ್ರದ ಶಾಸಕರನ್ನಾಗಿ ಆಯ್ಕೆಯಾಗಿದ್ದು ನಿಜಕ್ಕೂ ಅಭಿನಂದನಾರ್ಹ ಎಂದರು.

ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಚುನಾವಣೆಯಲ್ಲಿ ಹೆಸರಿಗೆ ಮಾತ್ರ ಕಳಕಪ್ಪ ಬಂಡಿ ಸ್ಪರ್ದಿಸಿದ್ದರು. ಆದರೆ ಕ್ಷೇತ್ರದಲ್ಲಿನ ಪ್ರತಿಯೊಬ್ಬರು ಕಾರ್ಯಕರ್ತರು ಸಹ ತಾವೇ ಚುನಾವಣೆಯಲ್ಲಿ ಸ್ಪರ್ದಿಸಿರುವಂತೆ ಪ್ರಚಾರ ಮಾಡುವ ಮೂಲಕ ನನ್ನನ್ನು ಗೆಲ್ಲಿಸಿದ್ದಿರಿ. ಹೀಗಾಗಿ ನನ್ನ ಗೆಲವು ನಿಮ್ಮೆಲ್ಲರದ್ದಾಗಿದೆ ಎಂದ ಅವರು, ಕ್ಷೇತ್ರದ ಜನತೆಯ ಪ್ರತಿಯೊಂದು ಮತಕ್ಕೆ ಚ್ಯುತಿ ಬಾರದಂತೆ ಕೆಲಸವನ್ನು ನಿರ್ವಹಿಸುವ ಮೂಲಕ ರೈತರ, ಮಹಿಳೆಯರ ಹಾಗೂ ಸರ್ವ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಅಪ್ಪಣ್ಣ ಮಹೇಂದ್ರಕರ, ಎಂ.ಎಸ್.ಕರಿಗೌಡ್ರ, ಮುತ್ತಣ್ಣ ಲಿಂಗನಗೌಡ್ರ, ಈರಣ್ಣ ಅಂಗಡಿ, ನಿಂಗಪ್ಪ ಕೆಂಗಾರ, ಅಶೋಕ ವನ್ನಾಲ, ಷಣ್ಮುಖಪ್ಪ ಚಿಲ್‍ಝರಿ, ರವಿ ಕಲಾಲ, ಆರ್.ಕೆ.ಚವ್ಹಾಣ, ಅಮರೇಶ ಬಳಿಗೇರ, ಮೋಹನಸಾ ರಾಯಬಾಗಿ, ರಾಜಣ್ಣ ಹೂಲಿ, ಸಿದ್ದಣ್ಣ ಬಳಿಗೇರ, ಸಂಗೀತಾ ಗಾಣಗೇರ, ಲೀಲಾ ಸವಣೂರ, ವಿಜಯಲಕ್ಷ್ಮೀ ಚೆಟ್ಟರ, ಬಸವರಾಜ ಬಂಕದ, ಶರಣಪ್ಪ ಚಳಗೇರಿ, ಸೂಗಿರಪ್ಪ ಕಾಜಗಾರ, ಲಾಲಪ್ಪ ರಾಠೋಡ, ಬಾಳು ಗೌಡರ, ಕಳಕಪ್ಪ ಅರಳಿಗಿಡದ, ರಾಜೇಂದ್ರ ಘೋರ್ಪಡೆ, ರಫೀಕ್ ತೋರಗಲ್, ಶರಣಪ್ಪ ದೊಣ್ಣೆಗುಡ್ಡ, ಡಿ.ಜಿ.ಕಟ್ಟಿಮನಿ, ಪರಶುರಾಮ ಚಿಲ್‍ಝರಿ ಹಾಗೂ ಇತರರು ಇದ್ದರು.

loading...