ಲಂಚ ಪಡೆಯುವ ಅಧಿಕಾರಗಳ ವಿರುದ್ದ ಕಠಿಣ ಕ್ರಮ: ಬಂಡಿ ಎಚ್ಚರಿಕೆ

0
63

ಮುಂಡರಗಿ: ಕಂದಾಯ ಇಲಾಖೆ ಸೇರಿದಂತೆ ತಾಲೂಕಿನ ಕೆಲವು ಇಲಾಖೆಗಳಲ್ಲಿ ಅಧಿಕಾರಿಗಳು ಸಾರ್ವಜನಿಕ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಲಂಚ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದ್ದು, ಅಂತಹ ಅಧಿಕಾರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರೋಣ ಮತಕ್ಷೇತ್ರದ ಶಾಸಕ ಕಳಕಪ್ಪ ಬಂಡಿ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಾಮಥ್ರ್ಯ ಸೌಧದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಕೆಲವು ಅಧಿಕಾರಿಗಳು ಅಕ್ರಮ ಮರಳು ಸಂಗ್ರಹ ಮತ್ತು ಸಾಗಟದಲ್ಲಿ ಅಪ್ರತ್ಯಕ್ಷವಾಗಿ ಶಾಮೀಗಿರುವುದು ತಿಳಿದು ಬಂದಿದೆ. ಅಂತಹ ಕಾರ್ಯಗಳಿಂದ ಅಧಿಕಾರಿಗಳು ದೂರವಿರಬೇಕು ಎಂದು ಕಟ್ಟು ನಿಟ್ಟಾಗಿ ಆದೇಶಿಸಿದರು.

ಯಾವ ಅಧಿಕಾರಿಗಳು ಮರಳು ಮಾಫಿಯಾದಲ್ಲಿ ಕೈ ಹಾಕುತ್ತಾರೋ ಅಂತವರು ಕೈಸುಟ್ಟುಕೊಳ್ಳಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು. ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಪೂರೈಸುವ ಕುರಿತಂತೆ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ವಿನಾಕಾರಣ ಸಾರ್ವಜನಿಕರನ್ನು ಅಲೆದಾಡಿಸದೆ, ಅವರ ಎಲ್ಲ ಕೆಲಸಗಳನ್ನು ಸಕಾಲದಲ್ಲಿ ನೆರವೇರಿಸಿಕೊಡಬೇಕು ಎಂದು ತಿಳಿಸಿದರು.
ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ತಾಲೂಕಾ ಮಟ್ಟದ ಎಲ್ಲ ಅಧಿಕಾರಿಗಳು ಸಕಾಲದಲ್ಲಿ ತಮ್ಮ ಇಲಾಖೆಯ ಎಲ್ಲ ಕೆಲಸ ಕಾರ್ಯಗಳನ್ನು ಪೂರೈಸಬೇಕು. ಸರ್ಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ಮುಟ್ಟಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.

ತಾಲೂಕಾಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇವೆ, ಅವುಗಳ ಭರ್ತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವೈಧ್ಯಾಧಿಕಾರಿ ಡಾ.ಸುಭಾಷ ದೈಗೊಂಡ ಶಾಸಕರಲ್ಲಿ ಮನವಿ ಮಾಡಿಕೊಂಡರು. ಜಿಲ್ಲಾ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಾಸಕ ಕಳಕಪ್ಪ ಬಂಡಿ ಭರವಸೆ ನೀಡಿದರು.
ಪಟ್ಟಣವು ಸೇರಿದಂತೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಸೂಕ್ತ ನಿವೇಶನ ಕೊಡಿಸುವಂತೆ ಸಿಡಿಪಿಒ ಎಸ್.ಎಸ್.ವಾರದ ಮನವಿ ಮಾಡಿಕೊಂಡರು. ಮುಂಡರಗಿಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಅಗತ್ಯವಿರುವ ಏಳು ನಿವೇಶನಗಳನ್ನು ನೀಡುವಂತೆ ಶಾಸಕರು ಪುರಸಭೆ ಮುಖ್ಯಾಧಿಕಾರಿಗೆ ಆದೇಶ ನೀಡಿದರು.

ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಮುಂಡರಗಿಯು ಎರಡನೆ ಸ್ಥಾನ ಪಡೆದಿದ್ದು, ಕಡಿಮೆ ಫಲಿತಾಂಶ ನೀಡಿರುವ ಶಾಲೆಗಳಿಗೆ ನೋಟಿಸು ನೀಡಲಾಗಿದೆ ಎಂದು ಬಿಇಒ ಎಸ್.ಎನ್.ಹಳ್ಳಿಗುಡಿ ಮಾಹಿತಿ ನೀಡಿದರು. ತಾಲೂಕಿನ ವಿವಿಧ ಇಲಾಖೆಗಳು ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಚವ್ಹಾಣ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್.ಮುಂಡರಗಿ, ಕೆಎಂಕೆ ಶರ್ಮಾ, ಬಿ.ಎನ್.ರಾಟಿ, ಸುರೇಶ ಕುಂಬಾರ, ಎಸ್.ಬಿ.ನೆಗಳೂರ, ಎಂ.ಡಿ.ತೋಗಣಸಿ, ಎಸ್.ಎಸ್.ವಾರದ, ಬಸವರಾಜ ಬಳ್ಳಾರಿ, ಸೇರಿದಂತೆ ಇತರರು ಪಾಲ್ಗೂಂಡಿದ್ದರು.

loading...