ಶೈಕ್ಷಣಿಕ ಜಾಗೃತಿಯಿಂದ ಬಾಲಕಾರ್ಮಿಕ ಪದ್ದತಿ ನಿಷೇಧ ಸಾಧ್ಯ: ಡಾ: ಹೆಗಡೆ

0
61

ದಾಂಡೇಲಿ: ಶೈಕ್ಷಣಿಕ ಜಾಗೃತಿಯಿಂದ ಬಾಲಕಾರ್ಮಿಕ ಪದ್ದತಿ ನಿಷೇಧ ಸಾಧ್ಯ. ಒಂದು ಸಮಯದಲ್ಲಿ ಆರ್ಥಿಕ ದಾರಿದ್ರ್ಯದಿಂದ ಮತ್ತು ಅನಕ್ಷರತೆಯ ಪ್ರಮಾಣದಿಂದ ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿದ್ದರು. ಈ ಕಾರಣದಿಂದಾಗಿ ಬಾಲಕಾರ್ಮಿಕರ ಪ್ರಮಾಣ ಅಧಿಕ ಯಥೇಚ್ಚವಾಗಿ ಕಂಡು ಬರುತ್ತಿತ್ತು.
ಆದರೆ ಈಗ ಬದಲಾಗಿದೆ. ಸರಕಾರವು ಬಿಸಿಯೂಟ, ಉಚಿತ ಶಿಕ್ಷಣ ಹೀಗೆ ಇನ್ನೂ ಅನೇಕ ಜನಪರ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಇದರ ಫಲಶೃತಿಯಾಗಿ ಶಿಕ್ಷಣದ ಜಾಗೃತಿಯಾಗುತ್ತಿರುವುದು ಉತ್ತಮ ಬೆಳವಣಿಗೆ. ಯಾವುದೇ ಮಗು ಶಿಕ್ಷಣದಿಂದ ವಂಚಿತನಾಗಿ ಬಾಲಕಾರ್ಮಿಕನಾಗಿ ದುಡಿಯಬಾರದು. ಈ ಬಗ್ಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಜಾಗೃತಿ ಅವಶ್ಯಕತೆಯಿದೆ ಎಂದು ನಗರದ ಬಂಗೂರನಗರ ಪದವಿ ಕಾಲೇಜಿನ ಹಿರಿಯ ಉಪನ್ಯಾಸಕ ಡಾ:ಆರ್.ಜಿ.ಹೆಗಡೆ ಅವರು ಹೇಳಿದರು. ಅವರು ಮಂಗಳವಾರ ನಗರದ ಕರ್ನಾಟಕ ಸಂಘದ ಸಭಾಭವನದಲ್ಲಿ ಕಾರ್ಮಿಕ ಇಲಾಖೆ, ತಾಲೂಕು ಕಾನೂನು ಸೇÀವಾ ಸಮಿತಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಂಘ, ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾಲ ಬದಲಾಗುತ್ತಿದೆ. ಶಿಕ್ಷಣದಿಂದ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯ. ಈ ನಾಡಿನ ಯಾವೊಂದು ಮಗುವನ್ನು ಶಿಕ್ಷಣದಿಂದ ವಂಚಿತವನ್ನಾಗಿಸಬಾರದಂತೆ ಎಲ್ಲರು ಎಚ್ಚೆತ್ತುಕೊಳ್ಳಬೇಕೆಂದ ಅವರು ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣ ವಿರೋಧಿಸುವುದರ ಮೂಲಕ ಸುಂದರ ರಾಷ್ಟ್ರ ಕಟ್ಟಲು ಎಲ್ಲರು ಸಹಭಾಗಿಗಳಾಗಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಂಘದ ಅಧ್ಯಕ್ಷ ರಾಜೇಸಾಬ ಕೇಸನೂರು ಅವರು ನಲಿವು ಕಲಿವು ಎಲ್ಲ ಮಕ್ಕಳ ಬಾಲ್ಯದ ಹಕ್ಕಾಗಬೇಕು. ಆ ಹಕ್ಕನ್ನು ಮಕ್ಕಳಿಗೆ ಒದಗಿಸಿಕೊಡುವ ಜವಾಬ್ದಾರಿ ಪ್ರತಿಯೊಬ್ಬ ಪಾಲಕರದ್ದಾಗಿದೆ. ಬಡತನ ನಿರ್ಮೂಲನೆ ಹಾಗೂ ಎಲ್ಲರಿಗೂ ಶಿಕ್ಷಣ ಎಂಬ ಧ್ಯೇಯದಡಿ ಜನಪ್ರಿಯ ಯೋಜನೆಗಳನ್ನು ಸರಕಾರ ಜಾರಿಗೊಳಿಸುತ್ತಿದ್ದು, ಮಕ್ಕಳು ಹಾಗೂ ಪಾಲಕರು ಆ ಯೋಜನೆಗಳ ಲಾಭವನ್ನು ಪಡೆದು ಸದೃಢ ಸಮಾಜ ನಿರ್ಮಾಣಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದರು. ಅಧ್ಯಕ್ಷತೆಯನ್ನು ವಿಶೇಸ ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ವಹಿಸಿದ್ದರು. ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಕೃಷ್ಣ ಭಟ್ ಅವರು ಸಾಂದರ್ಭಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣಾಧಿಕಾರಿ ಸಲೀಮ ಜಮಾದಾರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಜೆವಿಡಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ವಿವಿಧ ಕಾರ್ಮಿಕ ಸಂಘಟನೆಯ ಸದಸ್ಯರುಗಳು ಉಪಸ್ಥಿತರಿದ್ದರು. ಕಾರ್ಮಿಕ ನಿರೀಕ್ಷಕ ಶೇಖರಗೌಡ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪತ್ರಕರ್ತ ಸಂದೇಶ್.ಎಸ್.ಜೈನ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

loading...