ಪೌಡರ್‌ ಮಾರಾಟಗಾರೆಂದು ಬಂದು 120 ಗ್ರಾಂ ಚಿನ್ನ ಕದ್ದೋಯ್ದ ಖದೀಮರು

0
42

ಕನ್ನಡಮ್ಮ ಸುದ್ದಿ-ಹಾನಗಲ್ಲ: ಆಭರಣಗಳನ್ನು ಸ್ವಚ್ಚಗೊಳಿಸುವುದಾಗಿ ನಂಬಿಸಿ ಇಬ್ಬರು ವೃದ್ಧ ಮಹಿಳೆಯರ 120 ಗ್ರಾಂ (12ತೊಲೆ) ಚಿನ್ನವನ್ನು ಅಪಹರಿಸಿದ ಘಟನೆ ಬುಧವಾರ ಪಟ್ಟಣದ ಗಂಗಾನಗರದಲ್ಲಿ ನಡೆದಿದೆ.
ಗಂಗಾನಗರದ 2ನೇ ಕ್ರಾಸ್‌ನ ಸೋಮಶೇಖರ ಜುಟ್ಟಿಮಠ ಅವರ ಮನೆಯಲ್ಲಿ ಬೆಳಗ್ಗೆ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸೋಮಶೇಖರ ಇಲ್ಲದ ಸಮಯದಲ್ಲಿ ಪತ್ನಿ ನೀಲಮ್ಮ (64) ಮತ್ತು ಸಹೋದರಿ ಗಿರಿಜಾದೇವಿ ಮುದೇನೂರಮಠ(67) ಅವರನ್ನು ಯಾಮಾರಿಸಿ ಚಿನ್ನ ದೋಚಲಾಗಿದೆ. ಗಿರಿಜಾದೇವಿ ಅವರ 4 ಚಿನ್ನದ ಬಳೆ(50 ಗ್ರಾಂ) ಮತ್ತು ನೀಲಮ್ಮ ಅವರ 50 ಗ್ರಾಂ 2 ಚಿನ್ನದ ಬಳೆ, 20 ಗ್ರಾಂ ಮಾಂಗಲ್ಯ ಎಗರಿಸಿ ಕಳ್ಳರು ಪರಾರಿಯಾಗಿದ್ದಾರೆ.
ಘಟನೆ ವಿವರ: ಹಿಂದಿ ಭಾಷೆ ಮಾತನಾಡುತ್ತಿದ್ದ ಇಬ್ಬರು ವ್ಯಕ್ತಿಗಳು ತಮ್ಮನ್ನು ಪೌಡರ್‌ ಮಾರಾಟಗಾರು ಎಂದು ಹೇಳಿಕೊಂಡಿದ್ದಾರೆ. ಮನೆಯ ಕಿಟಕಿ, ಗ್ಲಾಸ್‌, ಪಾತ್ರೆ, ವಡವೆ ಸ್ವಚ್ಚಗೊಳಿಸಲು ನಮ್ಮಲ್ಲಿ ಉತ್ತಮವಾದ ಪೌಡರ್‌ ಇದೆ. ಇದು ಮಳಿಗೆಯಲ್ಲಿ ಮಾರಾಟಕ್ಕೆ ಲಭ್ಯವಿಲ್ಲ ಎಂಬುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಗಿರಿಜಾದೇವಿ ಹೇಳಿದರು.
ಆರಂಭದಲ್ಲಿ ಬೇಡ ಎಂದು ಸಾಗಹಾಕುವ ಪ್ರಯತ್ನ ಮಾಡಿದ್ದೇವೆ. ನಮಗೆ ಹಿಂದಿ ಭಾಷೆ ಬರುವುದಿಲ್ಲ, ಆದರೆ ಮಾತುಗಳು ತಿಳಿಯುತ್ತವೆ. ಮೊದಲು ಸ್ಟೀಲ್‌ ಲೋಟ ಸ್ವಚ್ಚಗೊಳಿಸಿರು ಎಂದು ನೀಲಮ್ಮ ಹೇಳಿದರು.
ನಮ್ಮ ಕೈಯಲ್ಲಿದ್ದ ಚಿನ್ನದ ಬಳೆಗಳಿಗೆ ತಮ್ಮಲ್ಲಿದ್ದ ಪೌಡರ್‌ ಹಚ್ಚಿ ಉಜ್ಜಿ ತೋರಿಸಿದರು. ಒಂದು ಪಾತ್ರೆಯಲ್ಲಿ ನೀರು ತರಿಸಿಕೊಂಡು ಅದರಲ್ಲಿ ನಮ್ಮ ಬಳೆ, ತಾಳಿಚೈನ್‌ ಹಾಕಿಸಿ ಅದರಲ್ಲಿ ಪೌಡರ್‌ ಹಾಕಿ ಮಿಶ್ರಣ ಮಾಡಿದರು. ಬಳಿಕ ಪಾತ್ರೆಯಲ್ಲಿನ ನೀರನ್ನು ಕುದಿಸುವಂತೆ ಹೇಳಿ ನಮಗೆ ಒಳಗೆ ಕಳಿಸಿ ಕಾಲ್ಕಿತ್ತಿದ್ದಾರೆ ಎಂದು ಗಿರಿಜಾದೇವಿ, ನೀಲಮ್ಮ ಹೇಳಿದ್ದಾರೆ.
ಎಲ್ಲವನ್ನು ನಮ್ಮ ಕಣ್ಮುಂದೆ ಮಾಡಿದ್ದಾರೆ. ಅಡುಗೆಕೋಣೆಯಲ್ಲಿ ಗ್ಯಾಸ್‌ ಮೇಲೆ ನೀರು ಕುದಿಸಲು ಇಟ್ಟಾಗ ಒಬ್ಬ ಒಳಗೆ ಬಂದು ಕುದಿಯುವ ನೀರಿಗೆ ಮತ್ತೊಂದು ಪೌಡರ್‌ ಹಾಕಿ ಹೊರಗೆ ಹೋದನು, ಇವರು ಒಮ್ಮೆಲೆ ಜಾಗ ಖಾಲಿ ಮಾಡಿದ್ದರಿಂದ ಸಂಶಯಗೊಂಡು ಪಾತ್ರೆಯಲ್ಲಿ ಕೈಯಾಡಿಸಿದಾಗ ಆಭರಣಗಳು ಇರಲಿಲ್ಲ ಎಂದು ಹೇಳಿದ್ದಾರೆ.
ತಕ್ಷಣವೇ ನೆರೆಹೊರೆಯವರನ್ನು ಕೂಡಿಸಿಕೊಂಡು ಖದೀಮರ ಶೋಧ ಮಾಡಿದ್ದಾರೆ. ಸುಳಿವು ಸಿಗದಿದ್ದರಿಂದ ಹಾನಗಲ್ಲ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್‌ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

loading...