ರೈಲ್ವೆ ಕಾಮಗಾರಿ ವೀಕ್ಷಿಸಿದ ಸಂಸದ ಸಂಗಣ್ಣ ಕರಡಿ

0
48

ಕನ್ನಡಮ್ಮ ಸುದ್ದಿ-ಗಂಗಾವತಿ: ಹುಬ್ಬಳ್ಳಿ ಮತ್ತು ಗಂಗಾವತಿ ಮಧ್ಯೆ ನವೆಂಬರ್‌ ಕೊನೆಯ ವಾರದಲ್ಲಿ ರೈಲ್ವೆ ಸಂಚಾರ ಆರಂಭಗೊಳ್ಳಲಿದೆ ಎಂದು ಸಂಸದ ಕರಡಿ ಸಂಗಣ್ಣ ತಿಳಿಸಿದರು. ಸಮೀಪದ ವಿದ್ಯಾನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ಸ್ಟೇಶನ್‌ ಕಾಮಗಾರಿಯನ್ನು ವೀಕ್ಷಿಸಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಕಾಮಗಾರಿಯನ್ನು ಅತಿ ಶೀಘ್ರದಲ್ಲಿ ಮತ್ತು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಬೇಕು ಎಂದು ಹೇಳಿದರು. ಗಿಣೀಗೇರಾದಿಂದ ಮಹಬೂಬ ನಗರದವರೆಗೆ ರೇಲ್ವೆ ಮಾರ್ಗ ನಿರ್ಮಿಸಲು 1390 ಕೋ.ರು. ಯ ಕಾಮಗಾರಿ ಮುಗಿದಿದೆ. 150 ಕೋ.ರು. ಭೂ ಪರಿಹಾರವನ್ನು ಈಗಾಗಲೇ ರೈತರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು. ರೇಲ್ವೆ ಮಾರ್ಗ ನಿರ್ಮಿಸುವ ಸಂದರ್ಭದಲ್ಲಿ ಅನಿವಾರ್ಯವಾಗಿ ರೈತರ ಬೆಲೆಬಾಳುವ ಕೃಷಿ ಜಮೀನುಗಳನ್ನು ರೇಲ್ವೆ ಇಲಾಖೆ ವಶಪಡಿಸಿಕೊಂಡು ಮಾರ್ಗ ನಿರ್ಮಾಣ ಮಾಡಿದೆ ಎಂದು ತಿಳಿಸಿದರು.
ಗಿಣಿಗೇರಾದಿಂದ ರಾಯಚೂರು ವರೆಗೆ 12 ರೇಲ್ವೆ ಸ್ಟೇಶನ್‌ಗಳು ಬರುತ್ತವೆ, ರೇಲ್ವೆ ಮಾರ್ಗ ನಿರ್ಮಿಸಲು 850 ಕೋ.ರು. ವೆಚ್ಚವಾಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿ ರೈಲು ರದ್ದು:ತಾಲೂಕಿನ ಚಿಕ್ಕಬೆಣಕಲ್‌ ಗ್ರಾಮದಿಂದ ಹುಬ್ಬಳ್ಳಿಗೆ ತೆರಳುವ ರೈಲು ರದ್ದಾಗಿರುವ ಕುರಿತು ಮಾಹಿತಿ ನೀಡಿದ ಕರಡಿ ಸಂಗಣ್ಣನವರು ಗಿಣಿಗೇರಾ ಸ್ಟೇಶನ್‌ನಲ್ಲಿ ಹಳಿ ಕಾಮಗಾರಿ ನಡೆದಿರುವ ಕಾರಣ ರದ್ದು ಮಾಡಲಾಗಿದೆ. ಎರಡು ತಿಂಗಳುಗಳ ನಂತರ ಮತ್ತೆ ಹುಬ್ಬಳ್ಳಿಗೆ ಸಂಚಾರ ಆರಂಭಗೊಳ್ಳುತ್ತದೆ ಎಂದು ತಿಳಿಸಿದರು.
ಕನಸು ನನಸು:ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿಯವರು ಭತ್ತದ ನಾಡಿನ ಜನರ ಕನಸು ನನಸಾಗಿದೆ. ಹಲವು ದಶಕಗಳಿಂದ ಈ ವಾಣಿಜ್ಯ ಪಟ್ಟಣಕ್ಕೆ ರೈಲಿನ ಅವಶ್ಯಕತೆ ಇತ್ತು. ಅದು ಈಗ ಈಡೇರಿದೆ. ನಮ್ಮ ಹೆಮ್ಮೆಯ ಪ್ರದಾನಿ ನರೇಂದ್ರ ಮೋದಿಯವರ ಕೊಡುಗೆ ಸಾಕಷ್ಟಿದೆ ಎಂದು ತಿಳಿಸಿದರು. ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು, ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿಂಗನಾಳ ವಿರುಪಾಕ್ಷಪ್ಪ, ತಿಪ್ಪೇರುದ್ರಸ್ವಾಮಿ ವಕೀಲರು, ದೇವಪ್ಪ ಕಾಮದೊಡ್ಡಿ ಇದ್ದರು.

loading...