ಮಳೆ ನೀರಿಗೆ ತುಂಬಿಹರಿದ ಚೆಕ್‍ಡ್ಯಾಂ

0
37
ಮಳೆ ನೀರಿಗೆ ತುಂಬಿಹರಿದ ಚೆಕ್‍ಡ್ಯಾಂ

ಮಳೆ ನೀರಿಗೆ ತುಂಬಿಹರಿದ ಚೆಕ್‍ಡ್ಯಾಂ

ಮಳೆ ನೀರಿಗೆ ತುಂಬಿಹರಿದ ಚೆಕ್‍ಡ್ಯಾಂ

|| ಚಿಕ್ಕೋಡಿ ಉಪವಿಭಾಗದಲ್ಲಿ 74 ಚೆಕ್ ಡ್ಯಾಂ ನಿರ್ಮಾಣ || 50 ಕೋಟಿ ಲೀಟರ ನೀರು ಸಂಗ್ರಹ ||
ಶಿವಾನಂದ ಪದ್ಮಣ್ಣವರ
ಚಿಕ್ಕೋಡಿ 22: ಚಿಕ್ಕೋಡಿ ಕೃಷಿ ಉಪನಿರ್ದೇಶಕರ ಕಛೇರಿ ವ್ಯಾಪ್ತಿಯ 5 ತಾಲೂಕುಗಳಲ್ಲಿ ಕಳೆದೊಂದು ವರ್ಷದಲ್ಲಿ ಸುಮಾರು 74 ಚೆಕ್ ಡ್ಯಾಂ ಹಾಗೂ 31 ನಾಲಾಬಂಧಗಳನ್ನು ನಿರ್ಮಾಣ ಮಾಡಲಾಗಿದ್ದು, ಈ ಚೆಕ್ ಡ್ಯಾಂಗಳಲ್ಲಿ 50 ಕೋಟಿ ಲೀಟರ ನೀರು ಸಂಗ್ರಹವಾಗಲಿದೆ.
ಇತ್ತೀಚಿನ ದಿನಗಳಲ್ಲಿ ಮಳೆ ಅಭಾವ ಹೆಚ್ಚಾಗುತ್ತಿದ್ದು, ನೀರಿನ ಮೂಲಗಳ ರಕ್ಷಣೆಗಾಗಿ ತಂತ್ರಜ್ಞಾನಿಗಳು ಮಳೆ ನೀರು ಹಿಡಿದಿಟ್ಟು ಅಂತರ್‍ಜಲಮಟ್ಟ ವೃದ್ಧಿಸುವ ಸಲುವಾಗಿ ವಿನೂತನ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮಳೆ ನೀರು ಸಂಗ್ರಹಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ.
ಚೆಕ್ ಡ್ಯಾಂಗಳ ನಿರ್ಮಾಣಕ್ಕಾಗಿ ಈ ಹಿಂದೆ ತಂತ್ರಜ್ಞಾನಿಗಳು ಶಿಫಾರಸ್ಸು ಮಾಡಿದ್ದರು. ಆದರೆ ಈ ಹಿಂದೆ ಈ ಬಗೆಗೆ ಜಾಗೃತಿಯಿಲ್ಲದ ಕಾರಣದಿಂದ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ವಿರೋಧ ವ್ಯಕ್ತವಾಗುತ್ತಿತ್ತು. ಸರಕಾರದ ಈ ಯೋಜನೆಯಿಂದ ಚಿಕ್ಕೋಡಿ ಕೃಷಿ ಉಪನಿರ್ದೇಶಕರ ಕಛೇರಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಸುಮಾರು 74 ಚೆಕ್ ಡ್ಯಾಂ ಹಾಗೂ 31 ನಾಲಾಬಂದಗಳಲ್ಲಿ 50 ಕೋಟಿ ಲೀಟರನಷ್ಟು ನೀರು ಸಂಗ್ರಹವಾಗಲಿದ್ದು, ಅಧಿಕ ಮಳೆಯಾದ ಕಡೆಗಳಲ್ಲಿ ಚೆಕ್ ಡ್ಯಾಂಗಳು ತುಂಬಿ ನೀರು ಹರಿಯಲಾರಂಭಿಸಿದೆ.
ಎಲ್ಲೆಲ್ಲಿ ಚೆಕ್ ಡ್ಯಾಂ ನಿರ್ಮಾಣ:
ಮಳೆಯಾಶ್ರಿತ ಪ್ರದೇಶಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ಜನ ಕುಡಿಯುವ ನೀರಿಗಾಗಿ ಪರಿತಪಿಸುವ ಸಂದರ್ಭಗಳನ್ನು ಸಮರ್ಪಕವಾಗಿ ನಿಭಾಯಿಸಲು ಮುಂದಾಗಿರುವ ತಂತ್ರಜ್ಞರು ನದಿ ನೀರಿನಿಂದ ಕೆರೆ ತುಂಬಿಸುವ ಯೋಜನೆ, ಬಾಂಧಾರಗಳ ನಿರ್ಮಾಣ, ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಮುಂದಾಗಿದ್ದು, 25 ಹೆಕ್ಟೇರಗೂ ಹೆಚ್ಚಿನ ಪ್ರದೇಶದಿಂದ ಹರಿದು ಬರುವ ನೀರಿನ ಪ್ರಮಾಣ ಆಧರಿಸಿ ಹಳ್ಳ-ಕೊಳ್ಳ ಸೇರಿದಂತೆ ಹೆಚ್ಚಾಗಿ ನೀರು ಸಂಗ್ರಹವಾಗುವ ಪ್ರದೇಶಗಳಲ್ಲಿ ತಜ್ಞರ ಸಮಿತಿಯ ಶಿಫಾರಸ್ಸು ಆಧರಿಸಿ ಚೆಕ್ ಡ್ಯಾಂ ಹಾಗೂ ನಾಲಾಬಂಧಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಒಟ್ಟಾರೆಯಾಗಿ 74 ಚೆಕ್ ಡ್ಯಾಂ ಹಾಗೂ 31 ನಾಲಾಬಂಧಗಳನ್ನು ನಿರ್ಮಿಸಲಾಗಿದೆ.
ಚೆಕ್ ಡ್ಯಾಂನಿಂದ ಆಗುವ ಲಾಭ:
ಪ್ರತಿಯೊಂದು ಪ್ರದೇಶದಲ್ಲಿ ಸಂಗ್ರಹವಾಗುವ ನೀರು ಅದೇ ಸ್ಥಳದಲ್ಲಿಯೇ ಇಂಗುವದರಿಂದ ಚೆಕ್ ಡ್ಯಾಂ ಹಾಗೂ ನಾಲಾಬಂಧ ಸುತ್ತಲಿನ ಕನಿಷ್ಠ 150 ಮೀಟರನಿಂದ 200ಮೀಟರ ವ್ಯಾಪ್ತಿಯವರೆಗೂ ವ್ಯಾಪಿಸುತ್ತದೆ. ಇದರಿಂದ ಬತ್ತಿದ ಬಾವಿ ಬೋರವೆಲ್‍ಗಳಲ್ಲಿ ಅಂತರಜಲ ಮಟ್ಟ ಏರಿಕೆಯಾಗುವ ಜೊತೆಗೆ ಈ ನೀರನ್ನು ಬೇಸಿಗೆ ಸಂದರ್ಭಗಳಲ್ಲಿ ದನಕರುಗಳ ನೀರು ಕುಡಿಸಲು, ಕೃಷಿ ಕಾರ್ಯಗಳಿಗೆ ಉಪಯೋಗಿಸಬಹುದಾಗಿದೆ.
ಚೆಕ್ ಡ್ಯಾಂ ಆಗುವ ವೆಚ್ಚ:
ಪ್ರತಿಯೊಂದು ಚೆಕ್ ಡ್ಯಾಂ ನಿರ್ಮಾಣವನ್ನು ಆಯಾ ಪ್ರದೇಶಗಳಿಗೆ ಅನುಗುಣವಾಗಿ ನಿರ್ಮಿಸಲಾಗುತ್ತದೆ. ಪ್ರತಿ ಚೆಕ್ ಡ್ಯಾಂನ್ನು ಸಿಮೆಂಟ್ ಕಾಂಕ್ರೀಟ್‍ನಿಂದ ನಿರ್ಮಿಸುವದರಿಂದ ಪ್ರತಿ ಚೆಕ್ ಡ್ಯಾಂಗೆ 2 ರಿಂದ 5 ಲಕ್ಷದವರೆಗೆ ವೆಚ್ಚವಾಗಲಿದ್ದು, ಪ್ರತಿ ಚೆಕ್ ಡ್ಯಾಂನಲ್ಲಿ 5 ಟಿಸಿಎಂನಷ್ಟು (50 ಲಕ್ಷ ಲೀಟರ) ನೀರು ಸಂಗ್ರಹವಾಗಲಿದೆ. ಅದೇ ರೀತಿಯಾಗಿ ಕಲ್ಲು-ಮಣ್ಣಿನ ಮಿಶ್ರಣದಿಂದ ನಿರ್ಮಿಸುವ ನಾಲಾಬಂಧಗಳಿಗೂ ಸಹ 2 ರಿಂದ 5 ಲಕ್ಷ ವೆಚ್ಚವಾಗಲಿದ್ದು, 45 ಲಕ್ಷ ಲೀಟರ ನೀರು ಸಂಗ್ರಹಣಾ ಸಾಮಥ್ರ್ಯ ಹೊಂದಿರುತ್ತವೆ.
ಮಳೆ ನೀರು ಸಂಗ್ರಹಿಸುವ ಅಭಿಯಾನಕ್ಕೆ ಕೈ ಜೋಡಿಸಿರುವ ಕೃಷಿ ಇಲಾಖೆಯ ಕಾರ್ಯದಿಂದ ಬಾವಿ-ಬೋರವೆಲ್‍ಗಳಲ್ಲಿಯ ನೀರಿನ ಮಟ್ಟ ವೃದ್ಧಿಯಾಗಿ ಕೃಷಿ ಚಟುವಟಿಕೆಗೆ ಹೆಚ್ಚಿನ ಅನುಕೂಲ ದೊರೆಯಲಿದೆ.
ಪ್ರತಿಕ್ರಿಯೆ:
ಕಳೆದೊಂದು ವರ್ಷದಲ್ಲಿ ನಿರ್ಮಿಸಲಾದ 74 ಚೆಕ್‍ಡ್ಯಾಂಗಳಿಂದ 37 ಕೋಟಿ ಲೀಟರ ಹಾಗೂ 31 ನಾಲಾಬಂಧಗಳಿಂದ 13 ಕೋಟಿ ಲೀಟರ ಸಂಗ್ರಹವಾಗಲಿದೆ. ಇದರಿಂದ ಅಂತರ್‍ಜಲಮಟ್ಟ ವೃದ್ಧಿಯಾಗಲಿದೆ.
ಎಲ್.ಐ.ರೂಡಗಿ
ಕೃಷಿ ಉಪನಿರ್ದೇಶಕರು,ಚಿಕ್ಕೋಡಿ
ನಮ್ಮ ತೋಟದ ಸಮೀಪದಲ್ಲಿ ಚೆಕ್‍ಡ್ಯಾಂ ನಿರ್ಮಿಸಿದ್ದಾರೆ. ಮಳೆಯಾದರೂ ಈಗಲೂ ನಮ್ಮ ನೀರಿನ ತೊಂದರೆ ತಪ್ಪಿಲ್ಲ. ಹರಿದು ಹೋಗುವ ಮಳೆ ನೀರಿನಿಂದ ಚೆಕ್ ಡ್ಯಾಂ ತುಂಬಿರುವುದು ಸಂತಸ ತಂದಿದೆ.
ನಿಜಲಿಂಗ ಮಾದನ್ನವರ
ಕೃಷಿಕ

loading...