ಹಾಲಶುಗರ್ಸನಿಂದ ಬಾಕಿ ಬಿಲ್ ಪಾವತಿ: ಚಂದ್ರಕಾಂತ ಕೋಠಿವಾಲೆ

0
39

ಕನ್ನಡಮ್ಮ ಸುದ್ದಿ
ನಿಪ್ಪಾಣಿ 24: ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರಖಾನೆ ವತಿಯಿಂದ ಜುಲೈ ಕೊನೆಯವರೆಗೆ ಕಬ್ಬು ಬೆಳಗಾರ ರೈತರಿಗೆ 7.55 ಕೋಟಿ ಹಣ ನೀಡಲಾಗುವುದು ಎಂದು ಕಾರಖಾನೆ ಚೇರಮನ್ ಚಂದ್ರಕಾಂತ ಕೋಠಿವಾಲೆ ಹೇಳಿದರು.
ಕಾರಖಾನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 15.10 ಕೋಟಿ ರೈತರಿಗೆ ಬಾಕಿ ಬಿಲ್ ನೀಡುವುದಿದೆ. ಜೊಲ್ಲೆ ಉದ್ಯೋಗ ಸಮೂಹ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಅವರು ಕಾರಖಾನೆಗೆ ಸಹಾಯಹಸ್ತ ನೀಡಿರುವುದರಿಂದ ಇದು ಸಾಧ್ಯವಾಗುತ್ತಿದೆ. ಕಾರಖಾನೆ ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಕಬ್ಬು ಕಟಾವು ಮುಂಗಡ,ಕಾರ್ಮಿಕರ ಬಿಲ್,ಸಾಲದ ಬಡ್ಡಿ ಕೂಡ ಪಾವತಿಸಲಾಗುತ್ತಿದೆ. ಕಬ್ಬು ಅಭಿವೃದ್ಧಿ ಮಂಡಳದ 53 ಲಕ್ಷ, ಒಂದು ತಿಂಗಳ ಕಾರ್ಮಿಕರ ಪಗಾರ 68 ಲಕ್ಷ, ಇತರೆ ಬಡ್ಡಿ 73.77 ಲಕ್ಷ, ಗುತ್ತಿಗೆದಾರರ ಬಿಲ್ 26.35 ಲಕ್ಷ, ಕಬ್ಬು ಕಟಾವು ಸಾಗಣೆ ಮುಂಗಡ 92.88 ಲಕ್ಷ, ಕಾರಖಾನೆ ಸೊಸೈಟಿ 10 ಲಕ್ಷ, ರೈತ ಮತ್ತು ಸದಸ್ಯರ 1ಲಕ್ಷ ರೂ.ಗಳ ವಿಮಾ ಮೊತ್ತ ಮತ್ತು ರೈತರ ಬಿಲ್ 7.55 ಕೋಟಿ ರೂ.ಗಳನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು. ಕಾರ್ಮಿಕರ ಮತ್ತೊಂದು ತಿಂಗಳ ಪಗಾರ 35 ಲಕ್ಷ ರೂ. ಹೀಗೆ ಒಟ್ಟು 9 ಕೋಟಿ ರೂ.ಗಳನ್ನು ಬೀರೇಶ್ವರ ಸಂಸ್ಥೆ ವತಿಯಿಂದ ನೀಡಲಾಗಿದೆ. ಕಾರಖಾನೆಗೆ ಸಹಾಯ ಮಾಡುವ ಅನೇಕರ ಆಶ್ವಾಸನೆಗಳು ಗಾಳಿಯಲ್ಲಿ ತೇಲಾಡಿದವು. ಕಾರಖಾನೆಯನ್ನು ಪಾರದರ್ಶಕವಾಗಿ ಮುನ್ನಡೆಸಿಕೊಂಡು ಹೋಗುವಲ್ಲಿ ತಾವು ಕಟಿಬದ್ಧರಾಗಿದ್ದೇವೆ. ಕಾರಖಾನೆಯೆಡೆ ನೋಡುವ ದೃಷ್ಟಿಕೋನ ಸಕಾರಾತ್ಮಕವಾಗುತ್ತಿದೆ ಎಂದರು.
ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ,ಕಾರಖಾನೆಗೆ ರೈತರ ಮತ್ತು ಕಾರ್ಮಿಕರ ಸಹಕಾರ ಲಭಿಸಿದೆ.ಇನ್ನೆರಡು ತಿಂಗಳಲ್ಲಿ ರೈತರ ಇನ್ನುಳಿದ ಬಿಲ್ ಕೂಡ ನೀಡಲಾಗುವುದು. ರೈತರಿಗೆ ಒಳ್ಳೆಯ ಯೋಜನೆಗಳನ್ನು ನೀಡಲಾಗುವುದು ಎಂದರು.
ವೈಸ್ ಚೇರಮನ್ ಎಂ.ಪಿ.ಪಾಟೀಲ,ನಿರ್ದೇಶಕರಾದ ಅಪ್ಪಾಸಾಹೇಬ ಜೊಲ್ಲೆ,ಪಪ್ಪು ಪಾಟೀಲ,ಅವಿನಾಶ ಪಾಟೀಲ, ಸಿದ್ಧು ನರಾಟೆ,ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
..

loading...