ರಸ್ತೆ ನಿರ್ಮಾಣ ಕಾಮಗಾರಿ ಅರಂಭಿಸುವಂತೆ ಒತ್ತಾಯಿಸಿ ಮನವಿ

0
65

ಕನ್ನಡಮ್ಮ ಸುದ್ದಿ-ಭಟ್ಕಳ: ಕಾರಗದ್ದೆ 1ನೇ ಕ್ರಾಸ್‌ ನಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಾಣ ಹಾಗೂ ಡಾಂಬರೀಕರಣ(ಶಿರೂರು ಕಾಲನಿಗೆ ಹೋಗುವ ರಸ್ತೆ) ಕಾಮಗಾರಿಗಾಗಿ 18ಲಕ್ಷ ರೂ ಸೇರಿದಂತೆ ಜಾಲಿಕೋಡಿ ಪ.ಜಾ.ಕಾಲನಿ ಮಳೆ ನೀರು ಚರಂಡಿ ನಿರ್ಮಾಣಕ್ಕೆ 9ಲಕ್ಷ ರೂ. ಒಟ್ಟು 27ಲಕ್ಷ ರೂ ಕಾಮಗಾರಿ ಮಂಜೂರಿಯಾಗಿದ್ದು ಕಾಮಗಾರಿಯನ್ನು ಆರಂಭಿಸುವಂತೆ ಗುತ್ತಿಗೆದಾರನನ್ನು ಅದೇಶಿಸಬೇಕೆಂದು ಒತ್ತಾಯಿಸಿ ಮುಝಮ್ಮಿಲ್ ಮಸೀದಿ ಪ್ರದೇಶದ ನಿವಾಸಿಗಳು ಸಹಾಯಕ ಆಯುಕ್ತರಿಗೆ ಮನವಿಯನ್ನು ಅರ್ಪಿಸಿದ್ದಾರೆ.
ಡಿಸೆಂಬರ್‌ 2017ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಭಟ್ಕಳಕ್ಕೆ ಬಂದು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದು ಮುಝಮ್ಮಿಲ್‌ ಮಸೀದಿ ವ್ಯಾಪ್ತಿಯಲ್ಲಿ ಬರುವ ರಸ್ತೆ ಕಾಮಗಾರಿಯ ಶಂಕುಸ್ಥಾಪನೆಯನ್ನು ನೆರವೇರಿಸಿದ್ದು ಇದುವರೆಗೆ ಅಲ್ಲಿ ಕಾಮಗಾರಿ ಆರಂಭಗೊಂಡಿರುವುದಿಲ್ಲ. ಹೊನ್ನಾವರದ ಗುತ್ತಿಗೆದಾರರಾದ ಶಬ್ಬಿರ್‌ ಕುಕ್ಕೊಳ್ಳಿಯವರು ಕಾಮಗಾರಿ ಗುತ್ತಿಗೆಯನ್ನು ಪಡೆದುಕೊಂಡಿದ್ದು ಅಂದಿನಿಂದ ಇಂದಿನ ವರೆಗೆ ಅಂದರೆ ಸುಮಾರು 7 ತಿಂಗಳು ಮುಗಿದು ಹೋಗಿದ್ದರೂ ಇದುವರೆಗೆ ರಸ್ತೆ ಕಾಮಗಾರಿಯನ್ನು ಆರಂಭಿಸದೆ ವ್ಯರ್ಥ ಕಾಲಹರಣ ಮಾಡುತ್ತಿದ್ದಾರೆ. ಇದಕ್ಕಾಗಿ ಹಲವಾರು ಬಾರಿ ಅವರನ್ನು ಸಂಪರ್ಕಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.
ಈ ಭಾಗದ ಸಾರ್ವಜನಿಕರು ಸೇರಿ ಹಲವು ವರ್ಷಗಳಿಂದ ಪ್ರಯತ್ನಪಟ್ಟಿದ್ದರ ಫಲವಾಗಿ ಸರ್ಕಾರ ಇಲ್ಲಿ ರಸ್ತೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿ ಶಂಕುಸ್ಥಾಪನೆಯನ್ನು ಮಾಡಿದೆ. ‘ದೇವರು ಕೊಟ್ಟರು ಪುಜಾರಿ ಕೊಡಲಿಲ್ಲ’ ಎನ್ನುವಂತೆ ಗುತ್ತಿಗೆ ಪಡೆದ ವ್ಯಕ್ತಿಯು ಕಾಮಗಾರಿ ಆರಂಭಿಸದೆ ಮೀನಮೇಷ ಎಣಿಸುತ್ತಿದ್ದಾರೆ. ಇಲ್ಲಿನ ರಸ್ತೆಯ ಪರಿಸ್ಥಿತಿ ಹೇಗಿದೆ ಎಂದರೆ ಒಂದು ಆಟೋ ರಿಕ್ಷಾ ಬಿಡಿ ಸರಿಯಾಗಿ ಒಂದು ದ್ವಿಚಕ್ರ ವಾಹನ ಓಡಿಸಲು ಕಷ್ಟಪಡುವಂತಾಗಿದೆ. ಶಾಲಾ ಮಕ್ಕಳು ನಿತ್ಯವೋ ತೊಂದರೆಯನ್ನು ಅನುಭವಿಸುತ್ತಿದ್ದು ಶಾಲೆಗೆ ಹೋಗುವುದು ಕಷ್ಟಕರವಾಗಿದೆ. ಸಾರ್ವಜನಿಕರು ರೊಚ್ಚಿಗೆದ್ದು ಪ್ರತಿಭಟನೆಗಿಳಿಯುವ ಮುಂಚೆ ಕಾಮಗಾರಿಯನ್ನು ಆರಂಭಿಸಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಇನಾಯತುಲ್ಲಾ ಗವಾಯಿ, ನೌಫಿಲ್‌ ಖರೂರಿ, ಸಕೀಬ್‌ ಎಸ್‌.ಎಕೆ. ದಾನಿಶ್‌ ಖಲಿಫಾ, ಮೌಲಾನ ಸಲ್ಮಾನ್‌ ಕೋಲಾ, ಇಬ್ರಾಹಿಮ್‌ ಖಲಿಫಾ, ಹಿಬ್ಬಾನ್‌ ಶೋಪಾ, ಮೌಲಾನ ಮುಝಫ್ಫರ್‌ ಮತ್ತಿತರರು ಉಪಸ್ಥಿತರಿದ್ದರು.

loading...