ಅಖಂಡ ಕರ್ನಾಟಕವಾಗಿ ಉ.ಕ. ಅಭಿವೃದ್ಧಿಯಾಗಲಿ: ಮಹಾಗಣಪತಿ

0
32

ಕನ್ನಡಮ್ಮ ಸುದ್ದಿ-ಧಾರವಾಡ: ಶಿಕ್ಷಣವೆಂದರೆ ಪ್ರಶ್ನೋತ್ತರವಲ್ಲ ಮಕ್ಕಳ ಉಜ್ವಲ ಭವಿಷ್ಯವನ್ನು ಅಪೇಕ್ಷಿಸುವ ಸರಕಾರ ಇತ್ತೀಚೆಗೆ ತೆರೆದ ಪುಸ್ತಕ ಪರೀಕ್ಷೆ ಕುರಿತ ಹೇಳಿಕೆ ಒಪ್ಪುವಂತದ್ದಲ್ಲ ಎಂದು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ‘ಎಳೆಯರ ಗೆಳೆಯ’ ಮಾಸ ಪತ್ರಿಕೆ ಸಂಪಾದಕ ಮಹಾಗಣಪತಿ ಬಿಳಿಮಗ್ಗದ ಅಭಿಪ್ರಾಯಪಟ್ಟರು.
ಚನ್ನಮ್ಮ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಚಂದರಗಿ ಸಭಾಂಗಣದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪ ಅಯೋಜಿಸಿದ್ದ ಮಕ್ಕಳ ಮಂಟಪದ ಪ್ರಸಕ್ತ ಅವಧಿಯ ಕಾರ್ಯಚಟುವಟಿಕೆಗಳ ಉದ್ಘಾಟಿಸಿ ಮಾತನಾಡಿದರು.
ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ನಿರ್ಲಕ್ಷಕ್ಕೆ ಒಳಗಾಗಿದೆ ಎಂದು ಪ್ರತ್ಯೇಕ ರಾಜ್ಯ ಕೂಗು ಬೇಡ. ಅಖಂಡ ಕರ್ನಾಟಕವಾಗಿ ಉತ್ತರ ಕರ್ನಾಟಕ ಅಭಿವೃದ್ಧಿ ಹೊಂದಬೇಕು ಮತ್ತು ಕರ್ನಾಟಕ ಏಕೀಕರಣದ ಆಶಯ ವ್ಯರ್ಥವಾಗದಂತೆ ನೋಡಿಕೊಳ್ಳುವುದು ನಮ್ಮ ಮೇಲಿದೆ. ಕರ್ನಾಟಕ ವಿದ್ಯಾವರ್ಧಕ ಸಂಘ ಕರ್ನಾಟಕ ಏಕೀಕರಣಗೊಳ್ಳುವಲ್ಲಿ ದೊಡ್ಡ ಪಾತ್ರ ವಹಿಸಿದ್ದು, ಹೊಸಗನ್ನಡದ ದಿಕ್ಕು ಬದಲಿಸುವಲ್ಲಿ ತನ್ನದೇ ಆದ ಪಾತ್ರ ವಹಿಸಿದೆ ಎಂದರು.
ಕÀ.ವಿ.ವ. ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಮಾತನಾಡಿ, ಬ್ರಿಟೀಷರ ವಿರುದ್ಧ ಹೋರಾಡಿದ ಚೆನ್ನಮ್ಮನ ನಾಡು ಕಿತ್ತೂರು. ಸ್ವಾಭಿಮಾನದ ಕಿಚ್ಚನ್ನು ಮಕ್ಕಳು ಬೆಳೆಸಿಕೊಂಡು, ಪ್ರಾಮಾಣಿಕವಾಗಿ ಜೀವನದಲ್ಲಿ ಮುಂದೆ ಬಂದಾಗ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ. ದೇಶವು ನನಗೆ ಏನು ಕೊಟ್ಟಿದೆ ಎನ್ನದೇ ದೇಶಕ್ಕಾಗಿ ನಾನು ಏನು ಮಾಡಬಲ್ಲೆ ಎನ್ನುವ ಗುರಿಯಿಟ್ಟುಕೊಳ್ಳಬೇಕು ಎಂದರು.
ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ದೇಶವು ಕೇವಲ ಭೌತಿಕ ಸಂಪತ್ತು ಹೆಚ್ಚಿಸಿದರೆ ಸಾಲದು. ಮಕ್ಕಳೆಂಬ ಜೀವಂತ ಸಂಪತ್ತನ್ನು ಹೆಚ್ಚಿಸುವುದು ಅಗತ್ಯವಾಗಿದೆ. ಮಕ್ಕಳ ಬದುಕಿಗೆ ಮಾರ್ಗದರ್ಶನ ಚಿಂತನೆಯ ಮತ್ತು ಪ್ರೋತ್ಸಾಹದ ನಿಟ್ಟಿನಲ್ಲಿ ಮಕ್ಕಳ ಮಂಟಪದ ಮೂಲಕ ಪ್ರಸಕ್ತ ಅವಧಿಯ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಚನ್ನಮ್ಮನ ಕಿತ್ತೂರಿನಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ ಅಧ್ಯಕ್ಷತೆವಹಿಸಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ, ಸಿ.ವಾಯ್. ಫರೀಟ, ಸಿ.ಎಸ್. ನಾಗಶೆಟ್ಟಿ, ಶಶಿಭೂಷಣ ದೊಡವಾಡ, ಮಹಾಲಕ್ಷ್ಮೀ ಪೂಜಾರ, ಬಸಪ್ಪ ಶೆಲ್ಲಿಕೇರಿ ಉಪಸ್ಥಿತರಿದ್ದರು. ಡಾ. ಶೇಖರ ಹಲಸಗಿ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಸಿ.ಎಂ. ದೇಶನೂರ ವಂದಿಸಿದರು.

loading...