ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಲಿ: ಶಾಸಕ ಓಲೇಕಾರ

0
23

ಕನ್ನಡಮ್ಮ ಸುದ್ದಿ-ಹಾವೇರಿ: ಹಾವೇರಿ ತಾಲೂಕಿನ ಕೃಷಿಕ ಸಮಾಜದ ಕಾರ್ಯಕಾರಿ ಮಂಡಳಿಯ ವತಿಯಿಂದ ನೂತನವಾಗಿ ಆಯ್ಕೆಯಾಗಿರುವ ಶಾಸಕ ನೆಹರು ಚ ಓಲೇಕಾರ ಹಾಗೂ ವಿರೂಪಾಕ್ಷಪ್ಪ ರು.ಬಳ್ಳಾರಿ ಇವರಿಗೆ ಕೃಷಿಕ ಸಮಾಜದಿಂದ ಸನ್ಮಾನಿಸಲಾಯಿತು.
ಹಾವೇರಿ ಸಹಾಯಕ ಕೃಷಿ ನಿರ್ದೇಶಕರ ಸಭಾ ಭವನದಲ್ಲಿ ಇತ್ತೀಚೆಗೆ ಜರುಗಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಶಾಸಕ ನೆಹರು ಚ ಓಲೇಕಾರ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗದೇ ರೈತರು ಸಂಕಷ್ಟದಲ್ಲಿ ಇದ್ದು ಸರ್ಕಾರವು ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು. ಇತ್ತೀಚಿನ ದಿನಗಳಲ್ಲಿ ರೈತರು ಕೂಲಿ ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿದ್ದು, ಇಲಾಖೆಯವರಿಂದ ಹೊಸ ತಂತ್ರಜ್ಞಾನದ ಮಾಹಿತಿ ಪಡೆದು ರೈತರು ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಧೃಡರಾಗಲು ಮನವಿ ಮಾಡಿದರು.
ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಆಧುನಿಕ ಕೃಷಿ ತಂತ್ರಜ್ಞಾನದ ಆಳವಡಿಕೆ ಬಗ್ಗೆ ಮಹತ್ವ ನೀಡಬೇಕಾಗಿದೆ. ಕೃಷಿಯಲ್ಲಿ ಕೂಲಿಕಾರರ ಸಮಸ್ಯೆ ಇರುವ ಪ್ರಸ್ತುತ ಸಂದರ್ಭದಲ್ಲಿ ಯಂತ್ರ ಬಳಕೆ ಹಾಗೂ ಕಳೆ ನಿಯಂತ್ರಣಕ್ಕಾಗಿ ಕೀಟ ನಾಶಕಗಳ ಉಪಯೋಗದ ಅನಿವಾರ್ಯತೆ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಬಸವರಾಜ ಹಾದಿಮನಿ ಮಾತನಾಡಿ, ಈ ಹಿಂದೆ ಕೃಷಿಕ ಸಮಾಜ ಕಟ್ಟಡ ಇಲ್ಲದೇ ರೈತಪರ ಕೆಲಸಗಳನ್ನು ಮಾಡಲು ಕೃಷಿಕ ಸಮಾಜಕ್ಕೆ ಬಹಳ ತೊಂದರೆಯಾಗಿತ್ತು. ಆದರೆ ಈಗ ಹಾವೇರಿ ತಾಲೂಕು ಕೃಷಿಕ ಸಮಾಜವು ಸ್ವಂತ ಕಟ್ಟಡಹೊಂದಿ ರೈತಪರ ಕೆಲಸಗಳನ್ನು ಮಾಡಲು ಅನುಕೂಲವಾಗಿದೆ. ಈಗಿರುವ ಸ್ವಂತ ಕಟ್ಟಡದ ಮೇಲೆ ಒಂದು ಕಟ್ಟಡವನ್ನು ಕಟ್ಟಿ ರೈತರಿಗೆ ತರಬೇತಿ ನೀಡಲು ಇಬ್ಬರು ಶಾಸಕರುಗಳಲ್ಲಿ ತಮ್ಮ ನಿಧಿಯಿಂದ ಆರ್ಥಿಕ ಸಹಾಯ ಮಾಡಲು ವಿನಂತಿಸಿದರು.
ಸಹಾಯಕ ಕೃಷಿ ನಿರ್ದೇಶಕರು ಹಾಗೂ ಪದನಿಮಿತ್ತ ಕಾರ್ಯದರ್ಶಿ ಕರಿಯಲ್ಲಪ್ಪ ಡಿ ಕೊರಚರ, ಅಧ್ಯಕ್ಷ ಶಿವಪತ್ರಪ್ಪ ನಿ ಶಿವಣ್ಣನವರ, ಉಪಾಧ್ಯಕ್ಷ ರುದ್ರಗೌಡ ಹರ್ತಿ, ಜಿಲ್ಲಾ ಪ್ರತಿನಿಧಿ ನಾಗಪ್ಪ ವೀ ವಿಭೂತಿ, ಖಜಾಂಚಿ ಗುಡ್ಡಪ್ಪ ಮಾಳಶೆಟ್ಟಿ, ನಿರ್ದೇಶಕರುಗಳಾದ ಬಸವಣ್ಣೇಪ್ಪ ಬಸೇಗಣ್ಣಿ, ಬಸವರಾಜ ಡೊಂಕಣ್ಣನವರ, ನಿರ್ದೇಶಕರು, ಈರಣ್ಣ ಕಳ್ಳಿಹಾಳ, ಮಲ್ಲೇಶಪ್ಪ ಮತ್ತಿಹಳ್ಳಿ, ಪ್ರಕಾಶ ಹಂದ್ರಾಳ ಚನ್ನಬಸಪ್ಪ ಅರಳಿ, ನಿರ್ದೇಶಕರು, ಹನುಮಂತಗೌಡ ಪಾಟೀಲ, ಫಕ್ಕೀರಪ್ಪ ಜಂಗಣ್ಣನವರ, ಮಲ್ಲಿಕಾರ್ಜುನ ಗುಮ್ಮಡಿಯವರು ಇದ್ದರು.

loading...