ಕೊಡಗಿನ ಸಂತ್ರಸ್ತರಿಗೆ ನೆರವು ನೀಡಲು ಮುಂದಾದ ವಿವಿಧ ಸಂಘಟನೆಗಳು

0
21

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಕೊಡಗಿನಲ್ಲಿ ಮಹಾಮಳೆಯಿಂದಾಗಿ ಉಂಟಾಗಿರುವ ಅವಘಡದಿಂದ ಸಂತ್ರಸ್ತರಿಗೆ ಸಹಾಯ ಮಾಡಲು ಕೊಡಗಿನ ಜನತೆಗೆ ಗಜೇಂದ್ರಗಡ ತಾಲೂಕಿನಿಂದ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ಸ್ಥಳೀಯ ವಿವಿಧ ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಸೋಮವಾರ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಕೊಡಗಿನ ಜನತೆಗೆ ಬಟ್ಟೆ, ಪಡಿತರ, ಔಷಧಿ ಹಾಗೂ ಇತರ ಅವಶ್ಯಕ ಸಾಮಗ್ರಿಗಳನ್ನು ನೀಡುವ ಅವಶ್ಯಕತೆಯಿದೆ. ಹೀಗಾಗಿ ಪಟ್ಟಣ ದುರ್ಗಾ ವೃತ್ತ, ಕಾಲಕಾಲೇಶ್ವರ ವೃತ್ತ ಹಾಗೂ ಬಸ್ ನಿಲ್ದಾಣದಲ್ಲಿ ನೆರವಿನ ಕೇಂದ್ರಗಳನ್ನು ಗುರುವಾರ ಬೆಳಗ್ಗೆ 10 ರಿಂದ ಸಂಜೆ 4 ರವೆರೆಗೆ ತೆರಯುವ ಮೂಲಕ ಸಾರ್ವಜನಿಕರಿಂದ ಸಹಾಯವನ್ನು ಪಡೆಯೋಣ. ಅಲ್ಲದೆ ಪಟ್ಟಣದಲ್ಲಿ ಜನತೆ ನೀಡುವ ಸಹಾಯ ಧನವನ್ನು ನೇರವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ರವಾನಿಸುವ ಉದ್ಧೇಶದಿಂದ ಸ್ಥಳೀಯ ವಿವಿಧ ಬ್ಯಾಂಕ್ ಸಿಬ್ಬಂದಿ ಸಹಾಯ ಮಾಡಲಿದ್ದಾರೆ ಎಂದು ಸಂಘಟಿಕರು ಸಭೆಗೆ ತಿಳಿಸಿದರು.

ಕಷ್ಟದಲ್ಲಿರುವ ಜನತೆಗೆ ಸಹಾಯದ ಹಸ್ತ ಚಾಚುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹೀಗಾಗಿ ಎಲ್ಲ ಪ್ರಗತಿಪರ, ಕನ್ನಡಪರ ಸಂಘಟನೆಗಳು ಕೂಡಿಕೊಂಡು ಜನರ ಬಳಿಗೆ ತೆರಳಿ ಜನತೆ ನೀಡುವ ಸಹಾಯವನ್ನು ಕೊಡಗಿನ ಜನತೆಗೆ ನೆರವಾಗಿ ತಲುಪಿಸಲು ನಾವೆಲ್ಲರೂ ಸಹ ಮಂಗಳವಾರ ಪಟ್ಟಣದಲ್ಲಿ ನಡೆಯುವ ಸಂತೆಯಲ್ಲಿ ಹಣ ಸಂಗ್ರಹಣೆ ಜೊತೆಗೆ ದುರ್ಗಾ ವೃತ್ತ, ಕಾಲಕಾಲೇಶ್ವರ ವೃತ್ತದಲ್ಲಿ ನಿಧಿ ಸಂಗ್ರಹಣಾ ಕೇಂದ್ರ ತೆರೆಯೊಣ ಹಾಗೂ ಬುಧವಾರ ಪ್ರಮುಖ ರಸ್ತೆಗಳಲ್ಲಿ ಮತ್ತು ಗುರುವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಎಲ್ಲರೂ ಬಿಡುವು ಮಾಡಿಕೊಂಡು ಮೂರು ಕೇಂದ್ರಗಳಲ್ಲಿ ಕೂಡಿಕೊಂಡು ಕೆಲಸ ನಿರ್ವಹಿಸುವ ಮೂಲಕ ಸಂಕಷ್ಟದಲ್ಲಿರುವ ಜನತೆಗೆ ಅಳಿಲು ಸೇವೆ ಮಾಡೋಣ ಎನ್ನುವ ನಿರ್ಧಾರ ಕೈಗೊಳ್ಳಲಾಯಿತು.
ಈ ವೇಳೆ ಗಜೇಂದ್ರಗಡ ಕಾರ್ಯನಿರತ ಪತ್ರಕರ್ತರ ಸಂಘ, ರೋಟರಿ ಕ್ಲಬ್, ಔಷಧಿ ವಿತರಕರ ಸಂಘ, ಕರ್ನಾಟಕ ಜನಹಿತ ವೇದಿಕೆ, ಕರ್ನಾಟಕ ಜನಪರ ಸೇವಾ ಸಮಿತಿ, ಜಯ ಕರ್ನಾಟಕ, ಕರವೇ (ಪ್ರವೀಣಶೆಟ್ಟಿ ಬಣ), ಬೀದಿ ಬದಿ ವ್ಯಾಪಾರಸ್ಥರ ಸಂಘ,
ಕರವೇ (ನಾರಾಯಣ ಗೌಡ) ಬಣ, ಸಂಕಲ್ಪ ಸೇವಾ ಫೌಂಡೇಶನ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ.ದಾದಾಸಾಹೇಬ್ ಎನ್.ಮೂರ್ತಿಬಣ), ಎಸ್.ಎಫ್.ಐ, ತಾಲೂಕಾ ಆರೋಗ್ಯ ಇಲಾಖೆ, ಸಾರಿಗೆ ಘಟಕ, ಯುವ ಬಸವ ಕೇಂದ್ರ, ಕನ್ನಡ ಸಾಹಿತ್ಯ ಪರಿಷತ್, ಬಂಗಾರ ಬಸ್ಪಪ್ಪ ಜುವೆಲರ್ಸ್, ಇನ್ನವಿರವ್ಹಿಲ್ ಕ್ಲಬ್ ಸೇರಿ ಇತರ ವಿವಿಧ ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕೊಡಗಿನ ಸಂತ್ರಸ್ತರಿಗೆ ಗಜೇಂದ್ರಗಡ ತಾಲೂಕಿನ ಸಹಾಯ ಹಸ್ತ, ನಿಧಿ ಸಂಗ್ರಹಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.

loading...