ಮೂಲಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ

0
35

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಸಮೀಪದ ನೆಲ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಪೌಢ ಶಾಲೆಯ ನೂತನ ಕಟ್ಟಡ ಪ್ರಾರಂಭ ಹಾಗೂ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಗುರುವಾರ ಶಾಲೆಯ ವಿದ್ಯಾರ್ಥಿಗಳು ಎಸ್‍ಎಫ್‍ಐ ಸಂಘಟನೆ ನೇತೃತ್ವದಲ್ಲಿ ತರಗತಿ ಬಹಿಷ್ಕರಿಸಿ ಅನಿರ್ಧಿಷ್ಟಾವಧಿ ಧರಣಿ ಹೋರಾಟ ನಡೆಸಿದರು.
ಈ ವೇಳೆ ರೈತ ಮುಖಂಡ ಕೂಡ್ಲೆಪ್ಪ ಗುಡಿಮನಿ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಸರ್ಕಾರವು ಕೋಟ್ಯಾಂತರ ಅನುದಾನವನ್ನು ಬಿಡಗುಡೆ ಮಾಡುತ್ತಿದೆ. ಆದರೆ, ರೋಣ ತಾಲೂಕಿನ ನೆಲ್ಲೂರು ಗ್ರಾಮದ ಸರ್ಕಾರಿ ಶಾಲೆಯ ನೂತನ ಕಟ್ಟಡಕ್ಕೆ ಉದ್ಘಾಟನಾ ಭಾಗ್ಯ ದೊರೆಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮಳೆ, ಚಳಿ ಎನ್ನದೆ ಕೆಲ ತಿಂಗಳು ಶಾಲಾ ಆವರಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಸಹ ಯಾವೂದೇ ಪ್ರಯೋಜವಾಗಿಲ್ಲ ಎಂದು ತಾಲೂಕಾ ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಸ್‍ಎಫ್‍ಐ ಮುಖಂಡ ಅಶೋಕ ಉಕ್ಕಿಸಲ ಮಾತನಾಡಿ, ಪಟ್ಟಣ ಹಾಗೂ ನಗರ ಪ್ರದೇಶಗಳ ಫಲಿತಾಂಶಕ್ಕಿಂತ ಗ್ರಾಮೀಣ ಗ್ರಾಮದಲ್ಲಿನ ಫಲಿತಾಂಶಗಳು ಉತ್ತಮವಾಗಿರುವ ವರದಿಗಳನ್ನು ನೋಡುತ್ತಿದ್ದೇವೆ. ಆದರೆ, ಇಂತಹ ಗ್ರಾಮೀಣ ಭಾಗದ ಶಾಲೆಗಳಿಗೆ ಅದರಲ್ಲೂ ನೆಲ್ಲೂರು ಗ್ರಾಮದ ಸರ್ಕಾರಿ ಶಾಲೆಗೆ ದೈಹಿಕ ಹಾಗೂ ಗಣಿತ ಶಿಕ್ಷಕರನ್ನು ಹೊರತು ಪಡಿಸಿದರೆ ಇತರ ವಿಷಯಗಳ ಶಿಕ್ಷಕರು ವಾರದಲ್ಲಿ ಕೇವಲ 3 ದಿನ ಮಾತ್ರ ಶಾಲೆಯಲ್ಲಿ ಬೋಧನೆ ಮಾಡುತ್ತಿದ್ದಾರೆ. ಪರಿಣಾಮ ವಿದ್ಯಾರ್ಥಿಗಳ ಶೈಕ್ಷಣೀಕ ಬೆಳವಣಿಗೆಗೆ ಹಿನ್ನಡೆಯುಂಟಾಗುತ್ತಿದೆ. ಹೀಗಾಗಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ, ಪ್ರಾಥಮಿಕ ಶಾಲೆಯ ದುರಸ್ಥಿ ಸೇರಿ ಶಾಲೆಯಲ್ಲಿ ಮೂಲ ಸೌಕರ್ಯಗಳನ್ನು ತಾಲೂಕಾಡಳಿತ ಕಲ್ಪಿಸಲು ಮುಂದಾಗುವವರೆಗೂ ಸಹ ಹೋರಾಟನ್ನು ಮುಂದುವರೆಸುತ್ತೇವೆ ಎಂದರು.
ಈ ವೇಳೆ ಪೀರು ರಾಠೋಡ, ಶಿವಾಜಿ ಗಡ್ಡದ, ವೀರೇಶ ಬೆನಹಾಳ, ಚಂದ್ರು ರಾಠೋಡ ಸೇರಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

loading...