ಆರಂಭವಾಗದ ಸೋಯಾಬೀನ ಖರೀದಿ ಕೇಂದ್ರ

0
218

|| ಜಿಲ್ಲೆಯ ಜನಪ್ರತಿನಿಧಿಗಳಿಗಿಲ್ಲ ರೈತರ ಕಾಳಜಿ || ನಷ್ಟದ ಸುಳಿಯಲ್ಲಿ ಅನ್ನದಾತ ||
ಶಿವಾನಂದ ಪದ್ಮಣ್ಣವರ
ಚಿಕ್ಕೋಡಿ 20: ಗಡಿಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಸೋಯಾಬೀನ್ ಬೆಳೆಗೆ ಕೇಂದ್ರ ಸರಕಾರ ಬೆಂಬಲ ಬೆಲೆ ಘೋಷಣೆ ಮಾಡಿದ್ದರೂ ಈವರೆಗೆ ಜಿಲ್ಲಾಡಳಿತ ಸೋಯಾಬೀನ್ ಖರೀದಿ ಕೇಂದ್ರವನ್ನು ಆರಂಭಿಸಲು ಮುಂದಾಗದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು, ಕೇಂದ್ರ ಸರಕಾರ ರೈತರನ್ನು ಮಧ್ಯವರ್ತಿಗಳಿಂದ ಮುಕ್ತವಾಗಿಸಲು ಹಾಗೂ ಕೃಷಿಯನ್ನು ಲಾಭದ ಉದ್ಯಮವನ್ನಾಗಿಸುವ ಉದ್ದೇಶದಿಂದ ರೈತರು ಬೆಳೆಯುವ ಪ್ರತಿಯೊಂದು ಬೆಳೆದ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಬೆಂಬಲ ಬೆಲೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಆದರೆ ಸೋಯಾಬೀನ್ ಕೊಯ್ಲು ಆರಂಭವಾಗಿದ್ದರೂ ಜಿಲ್ಲೆಯ ಯಾವೊಂದು ಕೇಂದ್ರದಲ್ಲಿಯೂ ಬೆಂಬಲ ಬೆಲೆ ಖರೀದಿ ಕೇಂದ್ರಗಳು ಆರಂಭವಾಗದಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ.

ನಷ್ಟದ ಸುಳಿಯಲ್ಲಿ ಅನ್ನದಾತ:
ಕಳೆದ ಎರಡು ವಾರದಿಂದ ಸೋಯಾಬೀನ್ ಕೊಯ್ಲು ಆರಂಭವಾಗಿದ್ದು, ರೈತರು ಪ್ರಸಕ್ತ ವರ್ಷ ತಾವು ಬೆಳೆದ ಸೋಯಾಬೀನ್ ಬೆಳೆಯನ್ನು ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿಯೇ ಮಾರಾಟ ಮಾಡಬೇಕೆಂಬ ಕನಸು ಕಾಣುತ್ತಿದ್ದಾರೆ. ಆದರೆ ಜಿಲ್ಲಾಡಳಿತವಾಗಲಿ ಅಥವಾ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಾಗಲಿ ಈ ಬಗ್ಗೆ ಗಮನ ಹರಿಸದೇ ಇರುವ ಪರಿಣಾಮ ರೈತರು ಪ್ರತಿ ಕ್ವಿಂಟಾಲ್ ಸೋಯಾಬೀನ್‍ಗೆ 200-500 ರೂಪಾಯಿ ನಷ್ಟ ಅನುಭವಿಸುವಂತಾಗಿದೆ.

ವಾರದಲೇ ಕುಸಿದ ಬೆಲೆ:
ಸೋಯಾಬೀನ್ ಉಪ ಉತ್ಪನ್ನಗಳನ್ನು ತಯಾರಿಸುವ ಕಾರಖಾನೆಗಳು ಕಳೆದ ವಾರ 3600-3800 ಬೆಲೆಗೆ ಸೋಯಾಬೀನ್ ಖರೀದಿ ಮಾಡಿದ್ದವು. ಆದರೆ ಒಂದು ವಾರದಲ್ಲಿ ಬೆಲೆ ಪಾತಾಳ ಕಂಡಿದ್ದು ಇದೀಗ 2900 ರಿಂದ 3200ರವರೆಗೆ ಖರೀದಿ ಮಾಡಲು ಮುಂದಾಗಿದ್ದಾರೆ. ಸರಕಾರ 3399 ರೂ ಬೆಂಬಲ ಬೆಲೆ ಘೋಷಣೆ ಮಾಡಿದರೂ ಸಹ ಕೇಂದ್ರಗಳು ಇನ್ನೂ ಆರಂಭವಾಗದ ಕಾರಣ ರೈತರು ತಮ್ಮ ಅಡಚಣೆಗಳ ಸಲುವಾಗಿ ದಲ್ಲಾಲಿಗಳ ಮೂಲಕವೇ ತಮ್ಮ ಬೆಲೆ ಮಾರಲು ಮುಂದಾಗಬೇಕಾದ ಅನಿವಾರ್ಯತೆ ಎದುರಾಗಿದೆ.

ಜನಪ್ರತಿನಿಧಿಗಳಿಗಿಲ್ಲ ರೈತರ ಕಾಳಜಿ:
ಜಿಲ್ಲೆಯಲ್ಲಿ 18 ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು, 4 ಜನ ಸಂಸದರು ಸೇರಿದಂತೆ ಸರಕಾರದ ಮಟ್ಟದಲ್ಲಿ ಪ್ರಭಾವ ಹೊಂದಿರುವ ಅನೇಕರಿದ್ದರೂ ಸಹ ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಆರಂಭಿಸುವ ಕುರಿತು ಯಾರೊಬ್ಬರು ಜಿಲ್ಲಾಡಳಿತಕ್ಕೆ ಸೂಚನೆ ನೀಡದೇ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಿರುವದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.

ಹೆಚ್ಚುತ್ತಿರುವ ಮೋಸ:
ಜಿಲ್ಲೆಯಲ್ಲಿರುವ ಬಹುತೇಕ ದಲ್ಲಾಲಿಗಳು ತೂಕದಲ್ಲಿ ಮೋಸ ಮಾಡುವ ಮೂಲಕ ರೈತರ ಕಣ್ಣಿಗೆ ಮಣ್ಣೇರಚುವ ಕಾರ್ಯ ಧಾರಾಳವಾಗಿ ನಡೆದಿದ್ದರೂ ಜಿಲ್ಲೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ತೂಕ ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ಕಣ್ಣಿದ್ದು ಕುರುಡುತನ ಪ್ರದರ್ಶನ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಎಲ್ಲರನ್ನು ಕಾಡತೊಡಗಿದೆ.

ಮಳೆ ತಂದ ಆತಂಕ:
ಪ್ರಸಕ್ತ ವರ್ಷ ಹೆಚ್ಚಾಗಿ ಮಳೆಯಾಗದಿದ್ದರೂ ಬೆಳೆಗೆ ಅನುಕೂಲವಾಗುವ ರೀತಿಯಲ್ಲಿ ಮಳೆಯಾಗಿದ್ದು, ಬೆಳೆ ಕೊಯ್ಲಿಗೆ ಬಂದ ಸಂದರ್ಭದಲ್ಲಿ ಆಗಸದಲ್ಲಿ ಮೋಡ ಮನೆ ಮಾಡಿ ತುಂತುರು ಮಳೆ ಸ್ಪರ್ಶ ಮಾಡುತ್ತಿರುವುದು ರೈತರು ಬೆವರು ಸುರಿಸಿ ಕಷ್ಟಪಟ್ಟು ಬೆಳೆದ ಸೋಯಾಬೀನ್ ಬೆಳೆ ಕೈ ಬಂದ ತುತ್ತು ಬಾಯಿಗೆ ಬರುತ್ತಾ ಎನ್ನುವಂತಾಗಿದೆ.
ಒಟ್ಟಾರೆಯಾಗಿ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ತಮಗೆ ಬೇಕಾದ ಸೌಲಭ್ಯ ಸವಲತ್ತುಗಳನ್ನು ಪಡೆಯಲು ತೋರುವ ಮುತುವರ್ಜಿ ರೈತರ ವಿಷಯದಲ್ಲಿ ಮರೆಯುತ್ತಿದ್ದು, ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತು ರೈತರ ರಕ್ಷಣೆಗೆ ನಿಲ್ಲುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಬಾಕ್ಸ:
ಕೃಷಿ ಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸರಕಾರ ಉರುಳಿಸಲು ಪ್ರಯತ್ನ ನಡೆಸಿದ್ದಾರೆಯೇ ಹೊರತು ರೈತರ ರಕ್ಷಣೆಗಾಗಿ ಸೋಯಾಬೀನ್ ಖರೀದಿ ಕೇಂದ್ರ ಆರಂಭಿಸುವತ್ತ ಚಿಂತನೆ ನಡೆಸಿಲ್ಲ. ಜಿಲ್ಲಾಡಳಿತವೂ ಈ ವಿಷಯದಲ್ಲಿ ಎಡವಿದ್ದು, ಕೂಡಲೇ ಗ್ರಾಮಮಟ್ಟದಲ್ಲಿ ಸೋಯಾಬೀನ ಖರೀದಿ ಹಾಗೂ ಸಂಸ್ಕರಣ ಕೇಂದ್ರ ಆರಂಭಿಸಬೇಕು ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗಲಿದೆ.
ತ್ಯಾಗರಾಜ ಕದಂ
ರಾಜ್ಯ ರೈತ ಸಂಘದ ವಕ್ತಾರ

loading...