ಗಡಿಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.19ರಷ್ಟು ಮಳೆ ಕೊರತೆ

0
105

|| ಏರಿಕೆಯಾಗದ ಬಾವಿ-ಬೋರವೆಲ್ ನೀರಿನಮಟ್ಟ || ವರುಣನ ಮುನಿಸು ರೈತರ ಆತಂಕ ||

ಶಿವಾನಂದ ಪದ್ಮಣ್ಣವರ
ಚಿಕ್ಕೋಡಿ 27: ವಾಡಿಕೆಯಂತೆ ಈ ಬಾರಿಯ ಮುಂಗಾರು ಜೂನ್ ತಿಂಗಳಿನಲ್ಲಿ ಆರಂಭವಾದಂತೆ ಕಂಡು ಬಂದರೂ ಹಂಗಾಮಿನಲ್ಲಿ ಗಡಿಜಿಲ್ಲೆ ಬೆಳಗಾವಿಯಲ್ಲಿ ವಾರ್ಷಿಕ ಸರಾಸರಿಯ ಪ್ರಕಾರ ಶೇ.19ರಷ್ಟು ಮಳೆ ಕೊರತೆಯಿಂದಾಗಿ ಮುಂಗಾರು-ಹಿಂಗಾರು ಕೃಷಿ ಉತ್ಪಾದನೆಯ ಮೇಲೆ ಬಹುದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ.
ಅತಿವೃಷ್ಟಿಗೊಳಗಾಗಿರುವ ಕೊಡಗು-ಕೇರಳ ಜನರ ಜೀವನ ಕಂಡು ಬೆಚ್ಚಿಬಿದ್ದಿರುವ ಜನ ಈ ಭಾಗದಲ್ಲಿ ಮಳೆ ಕೊರತೆ ಕಷ್ಟಪಟ್ಟು ಬೆಳೆದ ಬೆಳೆ ಕೈಸೇರುವ ಅನುಮಾನವೆಂಬಂತಾಗಿದೆ. ಗ್ರಾಮೀಣ ಪ್ರದೇಶಗಳ ಬಹುತೇಕ ಜನ ಕೃಷಿಯನ್ನೇ ತಮ್ಮ ಮೂಲ ಉದ್ಯೋಗವನ್ನಾಗಿಸಿಕೊಂಡಿದ್ದು, ಸೋಯಾಬೀನ್ ಬೆಳೆ ಹೊರತುಪಡಿಸಿದರೆ ಶೇಂಗಾ, ಉದ್ದು, ತೊಗರಿ, ಜೋಳ, ಗೋವಿನ ಜೋಳ ಬೆಳೆಗಳು ಮಳೆ ಕೊರತೆಯಿಂದ ಕುಗ್ಗಿಹೋಗಿದ್ದು, ಇದರಿಂದ ಬಹುತೇಕ ಅನ್ನದಾತರ ಸ್ಥಿತಿ ಚಿಂತಾಜನಕವಾಗಿಬಿಟ್ಟಿದೆ.
ಜಿಲ್ಲೆಯ ಜೂನ ತಿಂಗಳಿನಲ್ಲಿ ಶೇ.11, ಜುಲೈ ತಿಂಗಳಿನಲ್ಲಿ ಶೇ.15, ಅಗಸ್ಟನಲ್ಲಿ ಶೇ.12ರಷ್ಟು ಹಾಗೂ ಸೆಪ್ಟೆಂಬರ ತಿಂಗಳಿನಲ್ಲಿ ಸರಾಸರಿ 81ರಷ್ಟು ಮಳೆ ಕೊರತೆಯಾಗಿದ್ದು, ಒಟ್ಟಾರೆಯಾಗಿ ಜೂನ 1ರಿಂದ ಸೆಪ್ಟೆಂಬರ 25ರವರೆಗೆ 589 ಮಿಮೀ ವಾಡಿಕೆ ಮಳೆಯಾಗಬೇಕಿತ್ತು ಆದರೆ 449 ಮಿಮೀ ಮಳೆಯಾಗಿದ್ದು, ಶೇ.23ರಷ್ಟು ಮಳೆ ಕೊರತೆಯಾಗಿದೆ. ವಾರ್ಷಿಕ ಸರಾಸರಿ ಹೋಲಿಕೆ ಮಾಡಿದರೆ ಪ್ರಸಕ್ತ ವರ್ಷದಲ್ಲಿ ಗಡಿಜಿಲ್ಲೆ ಬೆಳಗಾವಿಯಲ್ಲಿ ಶೇ.19ರಷ್ಟು ಮಳೆ ಕೊರತೆಯಾಗಿರುವ ಬಗ್ಗೆ ರಾಜ್ಯ ವೈಮಾನಿಕ ಸಮೀಕ್ಷಾ ವರದಿ ತಿಳಿಸಿದೆ.
ಗಡಿಜಿಲ್ಲೆಯ ಅಥಣಿ, ರಾಯಬಾಗ, ಖಾನಾಪೂರ, ಬೆಳಗಾವಿ, ರಾಮದುರ್ಗ ಸವದತ್ತಿ ತಾಲೂಕುಗಳಲ್ಲಿ ಅಲ್ಪಮಟ್ಟದ ಮಳೆಯಾಗಿದ್ದರೆ, ಇನ್ನುಳಿದ ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ರಾಯಬಾಗ, ಬೈಲಹೊಂಗಲ, ರಾಮದುರ್ಗ ಸವದತ್ತಿ ತಾಲೂಕುಗಳಲ್ಲಿ ಮಳೆಯಾದರೂ ನಿಗದಿತ ಗುರಿಯಂತೆ ಬಿತ್ತನೆಯಾಗಿರಲಿಲ್ಲ. ಆದರೆ ಬಿತ್ತನೆಯಾದ ಕ್ಷೇತ್ರದಲ್ಲಿಯೂ ಬೆಳೆ ಕೈಸೇರುವ ಅನುಮಾನವೆಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಮರೆಯಾಯ್ತು ವಾಡಿಕೆ ಮಳೆ:
ಪ್ರತಿವರ್ಷ ಜೂನ್ ಪೂರ್ವದಲ್ಲಿ ಬೀಳುತ್ತಿದ್ದ ಅಕಾಲಿಕ ಮಳೆ ಸೇರಿದಂತೆ ಪ್ರತಿವರ್ಷ ಜೂನ ತಿಂಗಳಿನಲ್ಲಿ ಆರಂಭವಾಗುತ್ತಿದ್ದ ವಾಡಿಕೆ ಮಳೆ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಮರೆಯಾಗುತ್ತಿರುವುದಕ್ಕೆ ಹವಾಮಾನ ವೈಪರಿತ್ಯ ಕಾರಣವೆನ್ನಲಾಗುತ್ತಿದ್ದು, ಇದರಿಂದ ಕಾಲ-ಕಾಲಕ್ಕೆ ವಾಡಿಕೆ ಮಳೆ ಮರೆಯಾಗುತ್ತಿದೆ ಎನ್ನುವುದು ಪ್ರಜ್ಞಾವಂತರ ವಾದವಾಗಿದೆ.
ಟ್ಯಾಂಕರ ನೀರು:
ಕಳೆದ ಮೂರ್ನಾಲ್ಕು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿ ಕಾಡತೊಡಗಿದ್ದು, ಮುಂಗಾರು ಮಳೆ ಸಮರ್ಪಕವಾಗಿ ಆಗಿದ್ದರೆ ಹಳ್ಳ-ಕೊಳ್ಳಗಳಿಗೆ ನೀರು ಹರಿದು ಇಷ್ಟೊತ್ತಿಗಾಗಲೇ ಅಂತರ್‍ಜಲಮಟ್ಟ ವೃದ್ಧಿ ಬಾವಿ-ಬೋರವೆಲ್‍ಗಳಿಂದ ನೀರು ಪೂರೈಕೆಯಾಗುತ್ತಿತ್ತು. ಆದರೆ ಈಗಲೇ ನೀರಿನ ಸಮಸ್ಯೆ ಉದ್ಭವಿಸಿದ್ದು, ಬರುವ ದಿನಮಾನಗಳಲ್ಲಿ ಟ್ಯಾಂಕರ್ ನೀರು ಪೂರೈಕೆ ಅನಿವಾರ್ಯವೆನ್ನುವ ಸ್ಥಿತಿ ನಿರ್ಮಾಣವಾಗಿದೆ.
ವಿನಾಶದಂಚಿನತ್ತ ಸಾಗುತ್ತಿರುವ ಪರಿಸರ ರಕ್ಷಣೆಗೆ ಮುಂದಾಗದಿರುವ ಪರಿಣಾಮ ವರ್ಷದಿಂದ ವರ್ಷಕ್ಕೆ ಮಳೆ ಕ್ಷೀಣಿಸುತ್ತ ಸಾಗಿದ್ದು, ಮಳೆಯನ್ನೆ ನೆಚ್ಚಿ ಬದುಕಿನ ಬಂಡಿ ಸಾಗಿಸುತ್ತಿರುವ ಅನ್ನದಾತನಿಗೆ ಪ್ರಸಕ್ತ ವರ್ಷದ ಮಳೆ ಕೊರತೆ ಹಿಂಗಾರು-ಮುಂಗಾರು, ವಾರ್ಷಿಕ ಬೆಳೆಗಳಿಗೆ ನಷ್ಟವನ್ನುಂಟು ಮಾಡಿದ್ದು, ಸಕಾಲಕ್ಕೆ ಮಳೆಯಾಗಿ ಅನ್ನದಾತನ ಬದುಕು ಬಂಗಾರವಾಗಲಿ ಎಂದು ಆಶಿಸೋಣ.

loading...