ಇನ್ಮುಂದೆ ಮಹಿಳೆಯರಿಗೂ ಸಿಗಲಿದೆ ಅಯ್ಯಪ್ಪಸ್ವಾಮಿ ದರ್ಶನ: ಸುಪ್ರೀಂ ತೀರ್ಪು

0
15

ನವದೆಹಲಿ:- ಪ್ರಸಿದ್ದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರು ಮುಕ್ತವಾಗಿ ಪ್ರವೇಶ ಮಾಡಬಹುದೆಂದು ಸುಪ್ರೀಂಕೋರ್ಟ್ ಇಂದು (ಶುಕ್ರವಾರ) ಐತಿಹಾಸಿಕ ತೀರ್ಪು ನೀಡುವುದರ ಮೂಲಕ ವನಿತೆಯ ಸಮಾನತೆಯ ಹಕ್ಕನ್ನು ಎತ್ತಿ ಹಿಡಿದಿದೆ. ಮಹಿಳೆಯರಿಗೆ ದೇವಸ್ಥಾನಗಳಲ್ಲಿ ಪ್ರವೇಶ ನಿರಾಕರಿಸುವುದು ತಾರತಮ್ಯ ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಇದು ಸಂವಿಧಾನದ 25ನೇ ವಿಧಿಯ ಧಾರ್ಮಿಕ ಸ್ವಾತಂತ್ರದ ಆಯ್ಕೆಯಡಿ ಆಚರಣೆಯಾಗುತ್ತದೆ ಎಂದು ಸುಪ್ರೀಂಕೋರ್ಟ್ ಐವರು ಸದಸ್ಯರನ್ನು ಒಳಗೊಂಡ ಸಾಂವಿಧಾನಿಕ ಪೀಠ ಶತ ಶತಮಾನಗಳ ಗೊಂದಲಕ್ಕೆ ಇಂದು ತೆರೆ ಎಳೆಯಿತು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರನ್ನೊಳಗೊಂಡ ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್, ಎ.ಎಂ.ಖನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಹಾಗೂ ಇಂದೂ ಮಲ್ಹೋತ್ರ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ 4:1 ಅನುಪಾತದ ಬಹುಮತದಿಂದ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಇಂದೂ ಮಲ್ಹೋತ್ರ ಮಾತ್ರ ವಿಭಿನ್ನ ತೀರ್ಪು ನೀಡಿದರಾದರೂ ನಾಲ್ವರು ನ್ಯಾಯಾಧೀಶರು ಬೆಂಬಲದೊಂದಿಗೆ ಆದೇಶವನ್ನು ಪ್ರಕಟಿಸಲಾಯಿತು. ನ್ಯಾಯಾಲಯದ ಈ ಐತಿಹಾಸಿಕ ತೀರ್ಪಿನಿಂದಾಗಿ ಇನ್ನು ಮುಂದೆ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿರುವ ವಿಶ್ವವಿಖ್ಯಾತ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಇನ್ನು ಮುಂದೆ ಮುಕ್ತವಾಗಿ ಪ್ರವೇಶಿಸಿ ಸ್ವಾಮಿ ಅಯ್ಯಪ್ಪನ ದರ್ಶನ ಪಡೆಯಲು ಅವಕಾಶ ಲಭಿಸಿದಂತಾಗಿದೆ.
ಸಂವಿಧಾನದ 4(1)ನೇ ಪರಿಚ್ಛೇದದಡಿ ಪೂಜಿಸುವ ಹಕ್ಕನ್ನು ಪ್ರತಿಯೊಬ್ಬರಿಗೂ ನೀಡಿದೆ. ಪ್ರತಿ ಮಹಿಳೆ ಕೂಡ ದೇವರ ಸೃಷ್ಟಿ, ಉದ್ಯೋಗದಲ್ಲಾಗಲಿ, ಪೂಜೆಯಲ್ಲಾಗಲಿ ಆಕೆಯ ವಿರುದ್ಧ ತಾರತಮ್ಯ ಏಕಿರಬೇಕು. ದೇವರ ದರ್ಶನ ವಿಷಯದಲ್ಲಿ ಶಾರೀರಕ ಬೇಧಭಾವ ಇರಬಾರದು. ಮಹಿಳೆಯಾಗಿ ನೀವು ಪುರುಷರಂತೆ ಪೂಜಿಸುವ ಹಕ್ಕನ್ನು ಹೊಂದಿದ್ದೀರಿ. ಇದಕ್ಕೆ ಕಾನೂನು ಬೆಂಬಲ ಪಡೆಯುವ ಅಗತ್ಯವಿಲ್ಲ. ಸಂವಿಧಾನವೇ ಇದಕ್ಕೆ ಅವಕಾಶ ನೀಡಿದೆ ಎಂದು ಹೇಳಿತು.
ದಿ ಇಂಡಿಯನ್ ಯಂಗ್ ಲಾಯರ್ಸ್ ಎಂಬ ಸರ್ಕಾರೇತರ ಸಂಸ್ಥೆ ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ 2006ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ವಿಚಾರಣೆಯನ್ನು ಸುಮಾರು 11 ವರ್ಷಗಳ ದೀರ್ಘ ಕಾಲ ಸುಪ್ರೀಂಕೋರ್ಟ್ ವಿಚಾರಣೆ ನಡೆದು ಆ.1ರಂದು ತೀರ್ಪನ್ನು ಕಾಯ್ದಿರಿಸಲಾಗಿತ್ತು. ಶಾರೀರಕ ಆಧಾರದ ಮೇಲೆ ತಾರತಮ್ಯ ನೀತಿ ಅನುಸರಿಸುವುದು ಸರಿಯಲ್ಲ. ಮಹಿಳೆಯರನ್ನು ದೀರ್ಘಕಾಲದಿಂದಲೂ ತಾರತಮ್ಯದಿಂದ ನೋಡಲಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ವಿಷಾದದಿಂದ ಹೇಳಿದರು.
ಮಹಿಳೆಯರನ್ನು ನೋಡುವ ಸಮಾಜದ ಗ್ರಹಿಕೆ ಬದಲಾಗುವವರೆಗೂ ಇಂಥ ತಾರತಮ್ಯನೀತಿಗಳು ಬದಲಾಗುವುದಿಲ್ಲ. 10ರಿಂದ 50ರ ವಯೋಮಾನದ ಮಹಿಳೆಯರನ್ನು ನಿಬರ್ಂಧಿಸುವ ದೇಗುಲದ ಪದ್ಧತಿಯನ್ನು ಅಗತ್ಯ ಧಾರ್ಮಿಕ ವಿಧಾನ ಎಂದು ಪರಿಗಣಿಸಲಾಗದು ಎಂದಿದ್ದಾರೆ.

loading...